More

    ಶಾಲಾ ಆಟದ ಮೈದಾನ, ಆವರಣ ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ ಶಿಕ್ಷಣ ಇಲಾಖೆ

    ಬೆಂಗಳೂರು ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮೈದಾನ ಮತ್ತು ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಿರ್ಬಂಧ ಹೇರಿದೆ.

    ನಗರದಲ್ಲಿ ಇತ್ತೀಚೆಗೆ ಇ-ಮೇಲ್ ಮೂಲಕ ವಿವಿಧ ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿ ನಿರ್ದೇಶನ ನೀಡಿದೆ.

    ಶಾಲೆಗೆ ಸಂಬಂಧ ಪಡದ ವ್ಯಕ್ತಿಗಳು ಶಾಲಾ ಆವರಣದಲ್ಲಿ ಅನಗತ್ಯವಾಗಿ ಅಡ್ಡಾಡುತ್ತಿರುವುದು ಕಂಡು ಬಂದಲ್ಲಿ ಹಾಗೂ ಶಾಲೆಯ ಸುರಕ್ಷತೆಗೆ ಧಕ್ಕೆ ತರುವ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಅನಾಮಧೇಯ ದೂರವಾಣಿ ಕರೆಗಳು, ಪತ್ರಗಳು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಶಾಲಾ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

    ಶಾಲಾ ಆವರಣದಲ್ಲಿ ಶಾಲೆಯಲ್ಲಿನ ಮಕ್ಕಳಿಗೆ ದೈನಂದಿನ ಪಾಠ- ಪ್ರವಚನಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ಮತ್ತು ಆಟೋಟ, ಶಾರೀರಿಕ ಹಾಗೂ ವ್ಯಾಯಾಮ ಸೇರಿ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ವಿನಿಯೋಗಿಸಬೇಕು. ಈ ಉದ್ದೇಶದಿಂದ ಶಾಲಾ ಮೈದಾನ/ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಸರ್ಕಾರದ ಅನುಮತಿ ಇಲ್ಲದೆ ಬಳಸಬಾರದು ಹಾಗೂ ಅನುಮತಿ ನೀಡಬಾರದು ಎಂದು ತಿಳಿಸಲಾಗಿದೆ. ಇದರಂತೆ ಶಾಲಾ ಆಟಳಿತ ಮಂಡಳಿಗಳು, ಉಸ್ತುವಾರಿ ಅಧಿಕಾರಿಗಳು ಪಾಲಿಸುವಂತೆ ಸೂಚನೆ ನೀಡಿದೆ.

    ಕೆಲವು ದುಷ್ಕರ್ಮಿಗಳು ಡಿ.1ರಂದು ನಗರದ ಸುಮಾರು 45 ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಕರೆ ಬೆದರಿಕೆ ಹಾಕಿದ್ದರು. ಶಾಲಾ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರು ಭಯಭೀತರಾಗಿದ್ದರು. ಸದ್ಯ ಪ್ರಕರಣವು ತನಿಖೆ ಹಂತದಲ್ಲಿದೆ.

    ಶಾಲಾ ಸಂರಕ್ಷಣಾ ನೀತಿ ಜಾರಿಗೊಳಿಸಲು ಆಗ್ರಹ

    ನ್ಯಾಯಾಲಯಗಳು, ವಕೀಲರು, ಆಸ್ಪತ್ರೆಗಳು, ವೈದ್ಯರು ಮತ್ತು ಇತರರು ವಿವಿಧ ನೀತಿಗಳ ಮೂಲಕ ಕಾನೂನು ರಕ್ಷಣೆಯನ್ನು ಹೊಂದಿದ್ದಾರೆ. ಆದರೆ, ಶಾಲೆಗಳಲ್ಲಿ ಯಾವುದೇ ರೀತಿಯ ಅಪರಾಧಗಳು ಸಂಭವಿಸಿದಲ್ಲಿ ಶಾಲೆ, ಸಿಬ್ಬಂದಿ ಮತ್ತು ಶಾಲೆಯ ಆಸ್ತಿಗಳಿಗೆ ಯಾವುದೇ ಕಾನೂನು ರಕ್ಷಣೆ ಇರುವುದಿಲ್ಲ. ಆದ್ದರಿಂದ, ಶಾಲೆ ಮತ್ತು ಅದರ ಆಸ್ತಿಯನ್ನು ರಕ್ಷಿಸಲು ಸರ್ಕಾರವು ಶಾಲಾ ಸಂರಕ್ಷಣಾ ನೀತಿಯನ್ನು ತರಬೇಕು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.

    ಶಾಲಾ ಆವರಣವು ನಿಜವಾಗಿಯೂ ಸೂಕ್ಷ್ಮ ವಲಯವಾಗಿದೆ. ಆದರೆ, ಬಹುತೇಕ ಸರ್ಕಾರಿ ಶಾಲೆಗಳ ಆವರಣ ಮತ್ತು ಮೈದಾನಗಳು ರಾಜ್ಯಾದ್ಯಂತ ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ. ತನ್ವೀರ್ ಸೇಠ್ ಅವರು ಶಿಕ್ಷಣ ಸಚಿವರಾಗಿದ್ದ ವೇಳೆ ಶಾಲಾ ಆವರಣವನ್ನು ಶೂನ್ಯ ಸಹಿಷ್ಣು ವಲಯ ಎಂದು ಘೋಷಿಸಲು ಮತ್ತು ಯಾವುದೇ ರೀತಿಯ ಅಪರಾಧಗಳು, ಪ್ರತಿಭಟನೆಗಳು ಮತ್ತು ಇತರ ಸಮಾಜ ವಿರೋಧಿ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಚರ್ಚಿಸಿದ್ದೇವು. ಈ ಹಿನ್ನೆಲೆಯಲ್ಲಿ ಶಾಲೆ ಮತ್ತು ಅದರ ಪಾಲುದಾರರ ರಕ್ಷಣೆಗೆ ಪ್ರತ್ಯೇಕ ನೀತಿ ಜಾರಿಗೊಳಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts