More

    ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಸವಾಲು

    ನರಸಿಂಹ ನಾಯಕ್ ಬೈಂದೂರು

    ಬೈಂದೂರು ವ್ಯಾಪ್ತಿಯ ಹೊಸೂರು, ಗಂಗನಾಡು, ಅತ್ಯಾಡಿ, ಕ್ಯಾರ್ತೂರು, ಗೋಳಿಬೇರು ಮುಂತಾದ ಕಡೆ ಮೊಬೈಲ್ ನೆಟ್‌ವರ್ಕ್ ಇಲ್ಲದೆ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ ಪಡೆಯಲು ಹಾಗೂ ಮನೆಯಿಂದಲೇ ಆನ್‌ಲೈನ್ ಮೂಲಕ ಕೆಲಸ ನಿರ್ವಹಿಸುವ ಉದ್ಯೋಗಿಗಳು ತೊಂದರೆಪಡುತ್ತಿದ್ದಾರೆ.

    ಈ ಭಾಗಗಳಲ್ಲಿ ಸಮರ್ಪಕ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಅತಿ ಶೀಘ್ರವಾಗಿ ಗ್ರಾಮೀಣ ಭಾಗಗಳ ಆಯ್ದ ಕಡೆಗಳಲ್ಲಿ ಮೊಬೈಲ್ ಟವರ್ ಸ್ಥಾಪಿಸುವುದಾಗಿ ಸಂಸದರೂ ತಿಳಿಸಿದ್ದರು. ಆದರೆ ಈವರೆಗೆ ಹಳ್ಳಿಗಳಿಗೆ ಮೊಬೈಲ್ ಟವರ್ ಬಂದಿಲ್ಲ. ಮನೆಯಿಂದ ಎರಡು ಮೂರು ಕಿ.ಮೀ. ದೂರ ನಡೆದು ನೆಟ್‌ವರ್ಕ್ ಸಿಗುವ ಸ್ಥಳ ಶೋಧಿಸಿ ಬೆಳಗ್ಗೆ 9ರಿಂದ 12ರವರೆಗೆ ಬಳಿಕ ಸಾಯಂಕಾಲ 4ರಿಂದ 5.30ರ ತನಕ ಕುಳಿತುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಕೂಡ ಕಾಡು ಗುಡ್ಡವೆನ್ನದೆ ನೆಟ್‌ವರ್ಕ್ ಸಿಗುವ ಸ್ಥಳ ಅರಸಿ ಕುಳಿತುಕೊಳ್ಳಬೇಕಾಗಿದೆ. ಮಕ್ಕಳ ರಕ್ಷಣೆಗಾಗಿ ಪಾಲಕರೂ ಕಾಡಿನ ಡೇರೆಯಲ್ಲಿ ಕುಳಿತುಕೊಳ್ಳಬೇಕಾಗಿದೆ. ಆದ್ದರಿಂದ ಶೀಘ್ರ ಹಳ್ಳಿ ಹಳ್ಳಿಗೂ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಶೀಘ್ರ ಗ್ರಾಮಾಂತರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿ ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

    ಕಾಲ್ತೋಡು ಗ್ರಾಪಂ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು ಕಂಗಲಾಗಿದ್ದಾರೆ, ಇಲ್ಲಿನ ಜನ ನೆಟ್‌ವರ್ಕ್‌ಗಾಗಿ ಗುಡ್ಡಗಳನ್ನು ಏರಬೇಕಾಗಿದೆ. ಸಂಬಂಧಪಟ್ಟವರು ಶೀಘ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಾರ್ಯಶೀಲರಾಗಬೇಕು.
    ಪ್ರಸನ್ನಕುಮಾರ್ ಜೈನ್ ಬ್ಯಾಟಿಯಾಣಿ
    ಖಾಸಗಿ ಕಂಪನಿ ಉದ್ಯೋಗಿ

    ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಸಮಸ್ಯೆ ಆಗುತ್ತಿರುವುದು ಹಾಗೂ ಅಲ್ಲಿನ ವಾಸ್ತವತೆ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ನೆಟ್‌ವರ್ಕ್ ಸಮಸ್ಯೆಯಿರುವ ಮಕ್ಕಳ ಪಾಲಕರನ್ನು ಶಾಲೆಗೆ ಕರೆಸಿ ಅಭ್ಯಾಸ ಹಾಳೆ (ವರ್ಕ್‌ಶೀಟ್) ಕೊಡಲಾಗುತ್ತದೆ. ಚಂದನಾ ವಾಹಿನಿ ಇದ್ದವರಿಗೆ ವೇಳಾಪಟ್ಟಿಯನ್ನು ಶಿಕ್ಷಕರ ಮೂಲಕ ಕೊಡಲಾಗುತ್ತದೆ. ನೆಟ್‌ವರ್ಕ್ ಇದ್ದವರಿಗೆ ವಾಟ್ಸಾೃಪ್ ಮೂಲಕ ಅಭ್ಯಾಸ ಹಾಳೆ ರವಾನಿಸಿ ಉತ್ತರದ ಮೌಲ್ಯಮಾಪನ ಮಾಡಲಾಗುತ್ತಿದೆ. ಮಕ್ಕಳನ್ನು ಶಾಲೆಗೆ ಕರೆಸುವುದಿಲ್ಲ. ಶಿಕ್ಷಕರು ಈ ಬಗ್ಗೆ ಗಮನಹರಿಸುತ್ತಾರೆ.
    ಅಬ್ದುಲ್ ರವೂಫ್, ಕ್ಷೇತ್ರ ಸಮನ್ವಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts