More

    ದಾನಿಗಳ ಹೆಸರು ಚಿರಸ್ಥಾಯಿ

    ಮುದ್ದೇಬಿಹಾಳ: ದಾನಿಗಳು ಮರಣದ ನಂತರವೂ ತಾವು ಮಾಡಿದ ದಾನ ಕಾರ್ಯಗಳ ಹೆಸರಿನಲ್ಲಿ ಜೀವಂತವಾಗಿರುತ್ತಾರೆ. ಇಂಥವರ ಶರೀರ ಮಾತ್ರ ಮರಣ ಹೊಂದಿರುತ್ತದೆಯೇ ಹೊರತು ಹೆಸರು ಬಹುಕಾಲ ಉಳಿದಿರುತ್ತದೆ. ಶರಣರು, ಮಹಾತ್ಮರು ಇಂಥ ಬದುಕಿಗೆ ಆದ್ಯತೆ ನೀಡಿದ್ದರು. ನಾವು ಬದುಕುತ್ತಿರುವ ಸಮಾಜಕ್ಕೆ ಏನನ್ನಾದರೂ ಕೊಟ್ಟು ಹೋಗುವಂಥವರಾಗಬೇಕು ಎಂದು ಧಾರವಾಡ ಜಿಲ್ಲೆ ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

    ಇಲ್ಲಿನ ನಾಲತವಾಡ ರಸ್ತೆ ಪಕ್ಕದಲ್ಲಿರುವ ಬಾಪೂಜಿ ವಿದ್ಯಾ ಸಂಸ್ಥೆಯ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಂಸ್ಥೆ ಮತ್ತು ಕಾಲೇಜಿನ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ ಬಸವಭಾವ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳಿಗೆ ಬಸವ ತತ್ವ, ಸಂಸ್ಕಾರ ಕುರಿತ ಕಾರ್ಯಕ್ರಮಗಳು ಕಾಲೇಜುಗಳಲ್ಲಿ ಹೆಚ್ಚೆಚ್ಚು ನಡೆಯಬೇಕು. ಇವರಿಗೆ ಶ್ರದ್ದೆ, ಪರಿಶ್ರಮ ಬಹಳ ಮುಖ್ಯ. ಕಠಿಣ ಪರಿಶ್ರಮ ಇಲ್ಲದಿದ್ದರೆ ಜೀವನದಲ್ಲಿ ಮುಂದೆ ಬರೋಕಾಗಲ್ಲ. ಜೀವನದಲ್ಲಿ ಏನೇ ಸಾಧನೆ ಮಾಡಿದರೂ ಹಡೆದವರನ್ನು ಮರೆಯಬಾರದು. ತಂದೆ, ತಾಯಿ, ಗುರು ಮತ್ತು ವಿದ್ಯೆ ಕಲಿತ ಶಾಲೆಯನ್ನು ಯಾವತ್ತು ಮರೆಯಬಾರದು ಎಂದರು.

    ದತ್ತಿದಾನಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ತಮ್ಮ ತಂದೆಯವರ ಸ್ಮರಣಾರ್ಥ ಸಮಾಜೋಪಯೋಗಿ ಕೆಲಸ ಮಾಡುವುದಾಗಿ ತಿಳಿಸಿದರು.

    ಮಹಾಮನೆ ಬಳಗದ ಬಿ.ವಿ. ಕೋರಿ ಮಾತನಾಡಿ, ಮುದ್ದೇಬಿಹಾಳದಲ್ಲಿ ಬಸವ ಭಕ್ತರೆಲ್ಲ ಸೇರಿ ಕಟ್ಟಿಸಲು ಉದ್ದೇಶಿಸಿರುವ ಬಸವ ಭವನಕ್ಕೆ ಆರಂಭಿಕ ದೇಣಿಗೆಯಾಗಿ ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ 25ಸಾವಿರ ರೂ. ದೇಣಿಗೆ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ ಅವರು, ದತ್ತಿ ಚಟುವಟಿಕೆ, ದಾನಿಗಳ ಸಹಕಾರದ ಕುರಿತು ಮಾತನಾಡಿದರು.
    ನಿವೃತ್ತ ಶಿಕ್ಷಕ ಎಸ್.ಎಚ್. ಮುದ್ನಾಳ, ನ್ಯಾಯವಾದಿ ಎಸ್.ಬಿ. ಬಾಚಿಹಾಳ ಅವರು ಗುರುವಿನ, ಹಿರಿಯರ ಮತ್ತು ದಾನ ಧರ್ಮದ ಮಹತ್ವ ಕುರಿತು ಮಾತನಾಡಿದರು.

    ಲಕ್ಷ್ಮೀಬಾಯಿ ದೇಸಾಯಿ, ದಿ. ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸುಧೀರ ನಾವದಗಿ, ಸಿ.ಪಿ. ಸಜ್ಜನ, ಮುತ್ತಣ್ಣ ಕಡಿ, ಪುರಸಭೆ ಸದಸ್ಯೆ ವೀರೇಶ ಹಡಲಗೇರಿ, ಶಿಕ್ಷಕಿ ಮಹಾದೇವಿ ವಾಲಿ, ರಾಹುಲ್ ಪಾಟೀಲ, ಆರ್.ಬಿ. ರೂಢಗಿ ಇತರರಿದ್ದರು.

    ವಿದ್ಯಾರ್ಥಿನಿಯರಾದ ಸಂಗಮ್ಮ ಮನಗೂಳಿ, ಚನ್ನಮ್ಮ ಕರಡಿ ಪ್ರಾರ್ಥಿಸಿದರು. ಸಂಗೀತ ಶಾಲೆಯ ಪ್ರಾಂಶುಪಾಲ ಸಂಗಮೇಶ ಶಿವಣಗಿ ವಚನ ಗಾಯನ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷ ಎಸ್.ಎಂ. ನೆರಬೆಂಚಿ ಸ್ವಾಗತಿಸಿ, ಬಸವೇಶ್ವರ ಮತ್ತು ಲಿಂ. ಚನ್ನಣ್ಣ ದೇಸಾಯಿ ಭಾವಚಿತ್ರಗಳಿಗೆ ಸಾಮೂಹಿಕವಾಗಿ ಪುಷ್ಪನಮನದ ಮೂಲಕ ಬಸವಭಾವ ಪೂಜೆ ನೆರವೇರಿಸಿದರು. ಸಿ.ಜಿ. ನಾಗರಾಳ ಪ್ರಾಸ್ತಾವಿಕ ಮಾತನಾಡಿದರು. ಹಿರಿಯರಾದ ಬಿ.ಪಿ. ಪಾಟೀಲ, ಸಿ.ಬಿ. ಇಟಗಿ ಅತಿಥಿಗಳಿಗೆ ಗೌರವ ರಕ್ಷೆ ನೀಡಿದರು. ಬಿ.ವಿ. ಕೋರಿ ನಿರೂಪಿಸಿದರು. ಬಸವರಾಜ ನಾಲತವಾಡ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts