More

    ದೆಹಲಿ ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿ, ಇಷ್ಟು ದೊಡ್ಡಮಟ್ಟದ ಸಾವುನೋವಿಗೆ ಪೊಲೀಸರ ವೈಫಲ್ಯವೂ ಕಾರಣವೆಂದ ಬಿಜೆಪಿ ಮುಖ್ಯಸ್ಥ

    ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ಬಗ್ಗೆ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್​ ತಿವಾರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಪ್ರತಿಭಟನಾಕಾರರ ನಡುವೆ ಶುರುವಾದ ಕಲ್ಲುತೂರಾಟ ದೊಡ್ಡ ಸಂಘರ್ಷಕ್ಕೇ ನಾಂದಿಯಾಗಿ ಕೋಮು ಗಲಭೆ ಎನಿಸಿಕೊಂಡು ಹಲವರ ಪ್ರಾಣವೇ ಹೋಗಿದೆ. ಅದರಲ್ಲೂ ಈಶಾನ್ಯ ದೆಹಲಿಯಂತೂ ಸಂಪೂರ್ಣ ರಕ್ತಸಿಕ್ತವಾಗಿ ಬದಲಾಗಿತ್ತು. ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಮನೋಜ್​ ತಿವಾರಿ, ಪರಿಸ್ಥಿತಿಯ ಉಲ್ಬಣಕ್ಕೆ ಒಂದರ್ಥದಲ್ಲಿ ಪೊಲೀಸರ ವೈಫಲ್ಯವೇ ಕಾರಣ ಎಂದಿದ್ದಾರೆ.

    ದೆಹಲಿ ಹಿಂಸಾಚಾರದ ಬಗ್ಗೆ ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ. ಹಲವು ಜನರ ಪ್ರಾಣ ಹೋಗಿದ್ದು ತುಂಬ ದುಃಖ ತಂದಿದೆ. ಪೊಲೀಸರು ಹಿಂಸಾಚಾರ ನಡೆಯುತ್ತಿರುವ ಪ್ರದೇಶಗಳ ವಾಸ್ತವವನ್ನು ಸರಿಯಾದ ಸಮಯದಲ್ಲಿ ಅರಿತುಕೊಂಡು ಕಾರ್ಯ ನಿರ್ವಹಿಸಲಿಲ್ಲ. ಅವರು ಇನ್ನೂ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಅದೆಷ್ಟೋ ಜನರ ಜೀವ ಉಳಿಯುತ್ತಿತ್ತು ಎಂದು ಮನೋಜ್​ ತಿವಾರಿ ಹೇಳಿದ್ದಾರೆ.

    ಹಾಗಂತ ತಿವಾರಿಯವರು ಸಂಪೂರ್ಣವಾಗಿ ಪೊಲೀಸರನ್ನೇ ಹೊಣೆ ಮಾಡಲಿಲ್ಲ. ಗಲಾಟೆ ಹೆಚ್ಚುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡರು. ​ಬಿಗಿ ಭದ್ರತೆ ನಿಯೋಜಿಸುವುದರೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂಬುದನ್ನು ಅವರು ಒಪ್ಪಿಕೊಂಡರು. ಇದು ಎಲ್ಲರ ವೈಫಲ್ಯ. ಇಷ್ಟು ದೊಡ್ಡ ಮಟ್ಟದ ಹಿಂಸಾಚಾರ ನಡೆಯಬಹುದು ಎಂಬ ಅಂದಾಜು ಕೂಡ ಯಾರಿಗೂ ಇರಲಿಲ್ಲ. ಪೊಲೀಸರಾದರೂ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಆಮ್​ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಎರಡೂ ಪಕ್ಷಗಳು ಜನರ ದಿಕ್ಕುತಪ್ಪಿಸುವ ಕೆಲಸ ಮಾಡಿವೆ ಎಂದು ಹೇಳಿದರು.

    ದೆಹಲಿ ಹಿಂಸಾಚಾರದಲ್ಲಿ ಮೊದಲು ಆಪ್​ ಕೌನ್ಸಿಲರ್​ ತಾಹಿರ್​ ಹುಸೇನ್​ ಹೆಸರು ಕೇಳಿಬಂತು. ಅದಾದ ಬಳಿಕ ಕಾಂಗ್ರೆಸ್​ ಮಾಜಿ ಕೌನ್ಸಿಲರ್​ ಇಶ್ರಾತ್​ ಜಹಾನ್​ ಕೈವಾಡ ಇರುವುದು ಬೆಳಕಿಗೆ ಬಂತು. ಇವೆರಡೂ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.

    ಕಳೆದ ಮೂರುನಾಲ್ಕು ದಿನಗಳಿಂದಲೂ ಹಿಂಸಾಚಾರ ನಡೆಯುತ್ತಿರುವ ಪ್ರದೇಶಗಳಿಂದ ಯಾರೇ ಕರೆ ಮಾಡಿದರೂ ಅವರಿಗೆ ನಾನು ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts