ನವದೆಹಲಿ: ಚೀನಾಕ್ಕೆ ಒಕ್ಕರಿಸಿರುವ ಕೊರೊನಾ ವೈರಸ್ ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದೆ. ಭಾರತದಲ್ಲೂ ಸಹ ಆತಂಕ ಮೂಡಿದೆ. ಚೀನಾದಿಂದ ಬರುವ ಎಲ್ಲರನ್ನೂ ಏರ್ಪೋರ್ಟ್ನಲ್ಲಿಯೇ ವೈರಸ್ ಪತ್ತೆ ಹಚ್ಚುವ ಸ್ಕ್ರೀನಿಂಗ್ ಟೆಸ್ಟ್ಗೆ ಒಳಪಡಿಸಲಾಗುತ್ತಿದೆ.
ಈ ಮಧ್ಯೆ, ಸದ್ಯ ಚೀನಾದಲ್ಲಿರುವ ಯಾವುದೇ ಭಾರತೀಯರಿಗೂ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ಭಾರತ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರಿ, ವುಹಾನ್ ಮತ್ತು ಹುಬೈ ಪ್ರಾಂತ್ಯದಲ್ಲಿ ನೆಲೆಸಿರುವ, ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸೇರಿ ಎಲ್ಲ ಭಾರತೀಯರೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಇದುವರೆಗೂ ಯಾವ ಭಾರತೀಯನೂ ಸೋಂಕಿಗೆ ತುತ್ತಾಗಿಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಚೀನಾದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಇಂದು 56ಕ್ಕೆ ಏರಿದೆ. ಸುಮಾರು 2008 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ 23 ಮಂದಿ ಬೇರೆ ದೇಶದವರು ಎಂದು ವರದಿಯಾಗಿದೆ. (ಏಜೆನ್ಸೀಸ್)