More

    ಕೋವಿಡ್ ಲಸಿಕೆ ಕಲ್ಪಿತ ಪ್ರಯೋಗಕ್ಕೆ ಚಾಲನೆ

    ಧಾರವಾಡ: ಕೋವಿಡ್ ಲಸಿಕೆ ಪ್ರಯೋಗದ ಅಣಕು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.

    ಜಿಲ್ಲೆಯಲ್ಲಿ ಒಟ್ಟು 8 ಆಸ್ಪತ್ರೆಗಳಲ್ಲಿ ತಲಾ 25 ಆರೋಗ್ಯ ಸಿಬ್ಬಂದಿಯೊಂದಿಗೆ ಅಣಕು ಪ್ರದರ್ಶನ ನಡೆಸಲಾಯಿತು. ಲಸಿಕೆ ನೀಡಲು ಸ್ಥಾಪಿಸಿರುವ ಪ್ರವೇಶ ಮತ್ತು ನೋಂದಣಿ ಕೊಠಡಿ, ಲಸಿಕಾ ಕೊಠಡಿ, ಕೋವಿನ್ ಸಾಫ್ಟ್​ವೇರ್​ನಲ್ಲಿ ನೋಂದಣಿ ಮಾಡುವ ಕ್ರಮ, ಲಸಿಕೆ ಸಂಗ್ರಹ, ಸಾಗಣೆ, ಡಿ-ಫ್ರೀಜ್ ಕಾರ್ಯದ ಸಿದ್ಧತೆ, ಇತರ ಸೌಲಭ್ಯಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

    ನಂತರ ಮಾತನಾಡಿದ ಅವರು, ಲಸಿಕೆ ನೀಡಿದ 30 ನಿಮಿಷದ ಬಳಿಕ ರೋಗಿಯ ಆರೋಗ್ಯ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣ ತುರ್ತು ಚಿಕಿತ್ಸೆ ನೀಡಲು ಹಾಗೂ ಹೆಚ್ಚಿನ ಚಿಕಿತ್ಸೆ ನೀಡಲು ಬೇರೆ ಆಸ್ಪತ್ರೆಗೆ ರೋಗಿ ಸ್ಥಳಾಂತರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ 22 ಸಾವಿರ ಆರೋಗ್ಯ ಕಾರ್ಯಕರ್ತರು, ಕರೊನಾ ಸೇನಾನಿಗಳಿಗೆ ಲಸಿಕೆ ನೀಡಲು 110 ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರತಿ ಕೇಂದ್ರದಲ್ಲಿ ಐವರು ಲಸಿಕಾಧಿಕಾರಿಗಳು ಕರ್ತವ್ಯ ನಿರ್ವಹಿಸುವರು. ದಿನಕ್ಕೆ ಸುಮಾರು 100 ಜನರಿಗೆ ಲಸಿಕೆ ನೀಡುವ ಗುರಿ ಇದೆ ಎಂದರು.

    ಬಳಿಕ ಕಲಘಟಗಿ ರಸ್ತೆಯ ಪುರೋಹಿತ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸತ್ತೂರಿನ ಎಸ್​ಡಿಎಂ ಆಸ್ಪತ್ರೆಗೆ ಭೇಟಿ ನೀಡಿ ಲಸಿಕಾ ತಾಲೀಮು ಪರಿಶೀಲಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಆರ್​ಸಿಎಚ್​ಒ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್., ಪುರೋಹಿತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪರಶುರಾಮ, ಇತರರು ಇದ್ದರು.

    ಹುಬ್ಬಳ್ಳಿ ವರದಿ: ಕಿಮ್ಸ್ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೋವಿಡ್ ಕಲ್ಪಿತ ಲಿಸಿಕೆ ತಾಲೀಮು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಕಿಮ್ಸ್ ಆಸ್ಪತ್ರೆಯಲ್ಲಿ 10 ಲಸಿಕೆ ಕೇಂದ್ರ ತೆರೆಯಲಾಗುವುದು.

    ಕಿಮ್ಸ್​ನ ಎಲ್ಲ ಸಿಬ್ಬಂದಿಗೆ ಇಲ್ಲಿಯೇ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಲಸಿಕಾ ಅಭಿಯಾನ ಜರುಗುವುದು ಎಂದು ಹೇಳಿದರು.

    ಜಿಲ್ಲೆಯ 61 ಶೈತ್ಯಾಗಾರದಲ್ಲಿ ಲಸಿಕೆ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಜಿಲ್ಲೆಗೆ 98 ಲೀಟರ್ ಸಾಮರ್ಥ್ಯ ಐಎಲ್​ಆರ್ (ಐಸ್ ಲೈನಲ್ಡ್ ರೆಫ್ರಿಜಿರೇಟರ್) ನೀಡಲಾಗಿದೆ. ಇದರಲ್ಲಿ 21,600 ಲಸಿಕೆ ಡೋಸ್​ಗಳನ್ನು ಸಂಗ್ರಹಿಸಬಹುದು. ಅಗತ್ಯ ಬಿದ್ದರೆ ಜಿಲ್ಲಾ ಆಸ್ಪತ್ರೆಯ ಔಷಧ ಉಗ್ರಾಣ ಕೇಂದ್ರ ಶೈತ್ಯಾಗಾರದಲ್ಲಿ ಕೋವಿಡ್ ಲಸಿಕೆಗಳನ್ನು ಸಂಗ್ರಹಿಸಿಡಲಾಗುವುದು.

    | ಡಾ. ಎಸ್.ಎಂ. ಹೊನಕೇರಿ

    ಜಿಲ್ಲಾ ಆರ್​ಸಿಎಚ್ ಅಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts