More

    ನಾರಾಯಣಗೌಡ ಬಂಧನ ಪ್ರಕರಣ: ಜ.6ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

    ಬೆಂಗಳೂರು: ಅನ್ಯ ಭಾಷೆಯ ನಾಮಲಕಗಳನ್ನು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿ ಸಂಘಟನೆಯ ೩೨ ಕಾರ್ಯಕರ್ತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜ.೬ಕ್ಕೆ ಆದೇಶ ಕಾಯ್ದಿರಿಸಿದೆ.


    ದೇವನಹಳ್ಳಿಯ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆದೇಶ ಕಾಯ್ದಿರಿಸಿದ್ದು, ಹೀಗಾಗಿ, ಬಂಧಿತರಿಗೆ ಇನ್ನೂ ನಾಲ್ಕು ದಿನ ಜೈಲು ಶಿಕ್ಷೆ ಮುಂದುವರಿಯಲಿದೆ.


    ಮಾಲ್, ಹೋಟೆಲ್‌ಗಳೂ ಸೇರಿದಂತೆ ವಾಣಿಜ್ಯ ಕಟ್ಟಡಗಳ ನಾಮಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ಡಿ.೨೭ರಂದು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾರ್ಯಕರ್ತರು ಮಾಲ್, ಹೋಟೆಲ್‌ಗಳ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿ, ಒಳ ನುಗ್ಗಲು ಯತ್ನಿಸಿದ್ದರು. ಅಲ್ಲದೆ, ಅನ್ಯ ಭಾಷೆಯ ನಾಮಲಕಗಳು, ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಕಿತ್ತೆಸೆದಿದ್ದರು. ಈ ಸಂಬಂಧ ನಗರದ ಹಲವು ಠಾಣೆಗಳಲ್ಲಿ ನಾರಾಯಣಗೌಡ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದವು.


    ಪೊಲೀಸರ ಮೇಲೆ ಹಲ್ಲೆ, ಕರ್ತವ್ಯ ನಿರ್ವಹಣೆಗೆ ಅಡ್ಡಿ, ಸಾರ್ವಜನಿಕ ಆಸ್ತಿಗೆ ಹಾನಿ, ದೊಂಬಿ, ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಆರೋಪದಡಿ ಪೊಲೀಸರು ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದರು. ಬಳಿಕ ನಾರಾಯಣಗೌಡ ಹಾಗೂ ಕಾರ್ಯಕರ್ತರು ಬಿಡುಗಡೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ದೇವನಹಳ್ಳಿಯ ನ್ಯಾಯಾಲಯವು ಜ.೬ಕ್ಕೆ ಆದೇಶ ಕಾಯ್ದಿರಿಸಿತು. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಾರಾಯಣಗೌಡ ಮತ್ತು ಕಾರ್ಯಕರ್ತರು ನ್ಯಾಯಾಲಯದ ಆದೇಶ ಪ್ರಕಟವಾಗುವವರೆಗೆ ಜೈಲಿನಲ್ಲೇ ಕಾಲ ಕಳೆಯಬೇಕಿದೆ.


    ದೇವರ ಮೊರೆ ಹೋದ ಕಾರ್ಯಕರ್ತೆಯರು:
    ಈ ನಡುವೆ ಕರವೇ ಮಹಿಳಾ ಘಟಕದ ಕಾರ್ಯಕರ್ತೆಯರು ನಾರಾಯಣಗೌಡರ ಬಿಡುಗಡೆಗಾಗಿ ಶಕ್ತಿ ದೇವತೆ ಬನಶಂಕರಿಯ ಮೊರೆ ಹೋಗಿದ್ದಾರೆ. ಕರವೇ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ನೇತೃತ್ವದಲ್ಲಿ ಬನಶಂಕರಿಗೆ ಪೂಜೆ ಸಲ್ಲಿಸಿದ ಕಾರ್ಯಕರ್ತೆಯರು ಪ್ರಸಾದದೊಂದಿಗೆ ನಾರಾಯಣಗೌಡರ ಭೇಟಿಗಾಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ತೆರಳಿದರು.
    ಜೈಲಿನ ಬಳಿ ಅಶ್ವಿನಿಗೌಡ ಮಾತನಾಡಿ, ಕರವೇ ಮಹಿಳಾ ಹೋರಾಟಗಾರರ ಕುಟುಂಬದವರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಸರ್ಕಾರ ಪೊಲೀಸ್ ಬಲ ಬಳಸಿ ಸಂಘಟನೆಯ ಹೋರಾಟ ಹತ್ತಿಕ್ಕುತ್ತಿದೆ. ಪೊಲೀಸರು ನಗರದ ಹಲವೆಡೆ ಸಂಘಟನೆಯ ಮಹಿಳಾ ಕಾರ್ಯಕರ್ತೆಯರನ್ನು ಬಂಧಿಸಲು ಯತ್ನಿಸಿದ್ದಾರೆ. ಸರ್ಚ್ ವಾರಂಟ್ ಇಲ್ಲದೆ ಕಾರ್ಯಕರ್ತೆಯರ ಮನೆಗಳಿಗೆ ನುಗ್ಗಿ ಶೋಧ ನಡೆಸುತ್ತಿದ್ದಾರೆ. ಕನ್ನಡಪರ ಹೋರಾಟಗಾರರನ್ನು ಪೊಲೀಸರು ಭಯೋತ್ಪಾದಕರಂತೆ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
    ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಕನ್ನಡಿಗರ ಮತ ಬೇಕು, ಕಾಂಗ್ರೆಸ್ ಮುಖಂಡರ ಮಾತನ್ನು ಕನ್ನಡಪರ ಹೋರಾಟಗಾರರು ಕೇಳಬೇಕು. ಕಾಂಗ್ರೆಸ್, ಕನ್ನಡಪರ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದೆ. ಆದರೆ, ಈಗ ಕನ್ನಡಪರ ಹೋರಾಟಗಾರರ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts