More

    ಹಿರೇಮಸಳಿಯ ಹಿರಿಮೆ ಹೆಚ್ಚಿಸಿದ ದಂಪತಿ, ಸರ್ಕಾರಿ ಶಾಲೆಗೆ ಪ್ರಯೋಗಾಲಯ ಗಿಫ್ಟ್ ! ನಿವೃತ್ತ ಅಭಿಯಂತರರ ಕಳಕಳಿಗೆ ಜನಮೆಚ್ಚುಗೆ

    ಇಂಡಿ: ಉಳ್ಳವರ ಮಕ್ಕಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಾರೆ. ಆದರೆ, ಬಡವರ ಮಕ್ಕಳಿಗೆ ಸರ್ಕಾರಿ ಶಾಲೆಯೇ ಗತಿ. ಹೀಗಾಗಿ ಗ್ರಾಮೀಣ ಭಾಗದ ಬಡವರ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಸೌಲಭ್ಯ ಸಿಗವಬೇಕೆಂಬ ನಿವೃತ್ತ ಇಂಜಿನಿಯರ್ ಕಳಕಳಿ ಮಾದರಿಯಾಗಿದೆ.

    ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 50 ಸಾವಿರ ರೂಪಾಯಿ ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸುವ ಮೂಲಕ ಗ್ರಾಮದ ಶಿವಾನಂದ ಜಿ.ಪಟ್ಟಣಶೆಟ್ಟಿ ಹಾಗೂ ಅವರ ಕುಟುಂಬಸ್ಥರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಲಮಟ್ಟಿಯ ಕೆಪಿಸಿಎಲ್ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಾನಂದ ಅವರು ಇದೀಗ ನಿವೃತ್ತಿ ಜೀವನ ಕಳೆಯಲು ಸ್ವಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಕಲಿಕೆಗೆ ಪ್ರಯೋಗಾಲಯ ಇಲ್ಲದ್ದನ್ನು ಗಮನಿಸಿ 50 ಸಾವಿರ ರೂ.ವೆಚ್ಚದಲ್ಲಿ ಸಾಮಗ್ರಿ ಖರೀದಿಸಿ ಪ್ರಯೋಗಾಲಯ ಸ್ಥಾಪಿಸಿದ್ದಾರೆ. ಪ್ರಯೋಗಾಲಯಕ್ಕೆ ಸರ್.ಸಿ.ವಿ. ರಾಮನ್ ಅವರ ಹೆಸರು ಇರಿಸಲಾಗಿದ್ದು, ಮಕ್ಕಳು ಸಂತುಷ್ಟರಾಗಿದ್ದಾರೆ.

    ಶಿವಾನಂದ ಅವರ ಪುತ್ರ ಸಿದ್ಧೇಶ್ವರ ಬೆಂಗಳೂರಿನ ಮೆಟ್ರೋ ಕೇಂದ್ರದಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದು ತಂದೆಯ ಕಾಳಜಿ ಮೆಚ್ಚಿ ಗ್ರಾಮಕ್ಕೆ ಬಂದು ಪ್ರಯೋಗಾಲಯಕ್ಕೆ ಸಾಥ್ ನೀಡಿದ್ದಾರೆ. ಶಿವಾನಂದ ಕುಟುಂಬಸ್ಥರ ಕಳಕಳಿಗೆ ಅಭಿನಂದನೆ ಸಲ್ಲಿಸಿರುವ ಶಾಲೆ ಆಡಳಿತ ಮಂಡಳಿ ಶಿವಾನಂದ ಅವರ ಧರ್ಮಪತ್ನಿ ಅನ್ನಪೂರ್ಣ ಹಾಗೂ ಪುತ್ರ ಸಿದ್ಧೇಶ್ವರ ಅವರ ಸಮ್ಮುಖದಲ್ಲಿಯೇ ಸೋಮವಾರ ಪ್ರಯೋಗಾಲಯ ಉದ್ಘಾಟಿಸಿದ್ದಲ್ಲದೇ ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವ ಸಮರ್ಪಿಸಿದೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಕಸ್ತೂರಿಬಾಯಿ ದೊಡಮನಿ, ಎಸ್‌ಡಿಎಂಸಿ ಅಧ್ಯಕ್ಷ ಪೀರಪ್ಪ ಭಿ.ಭಾವಿಕಟ್ಟಿ, ಬಿಆರ್‌ಪಿ ಐ.ಜೆ. ಆಳೂರ, ಸಿಆರ್‌ಪಿ ಎಸ್.ಎಸ್. ಕ್ಯಾತಾ, ಮುಖ್ಯ ಗುರು ಆನಂದ ಕೆಂಭಾವಿ, ಶಿವಾನಂದ ಕ್ಷತ್ರಿ, ಮನೋಜಗೌಡ ಪಾಟೀಲ, ರೇವಣಸಿದ್ದ ಪಟ್ಟಣಶೆಟ್ಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts