More

    3ನೇ ಪ್ರವೇಶ ಪತ್ರದ ಪ್ರತಿಯೂ ಚೂರು ಚೂರು..!

    ಗೊಳಸಂಗಿ: ತಾನೊಂದು ಬಗೆದರೆ ದೈವವೊಂದು ಬಗೆ ಹರಿಯಿತೆಂಬಂತೆ ಪಿಯು ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯ ಭವಿಷ್ಯ ಡೋಲಾಯಮಾನ ಸ್ಥಿತಿಗೆ ಬಂದೊದಗಿರುವ ಸಂಗತಿ ಅಚ್ಚರಿಯಾದರೂ ಸತ್ಯವಾದ ಘಟನೆ ಗೊಳಸಂಗಿಯಲ್ಲಿ ಗೋಚರಿಸಿದೆ.

    ಮಾ. 9ರಂದು ಆರಂಭಗೊಂಡ ಪರೀಕ್ಷೆಗೆ ಗ್ರಾಮದ ಪವಿತ್ರಾ ಪುಂಡಲೀಕ ಗುಡ್ಡದ (18) ಹಾಜರಾಗಲು ಉತ್ಸುಕಳಾಗಿದ್ದಳು. ಅಂತೆಯೇ 3 ರಂದು ಕಾಲೇಜಿನಿಂದ ಪರೀಕ್ಷಾ ಕೇಂದ್ರದ ಪ್ರವೇಶ ಪತ್ರ ತಂದಿದ್ದಳು.

    ಏತನ್ಮಧ್ಯೆ ಮನೆಯಲ್ಲಿಟ್ಟಿದ್ದ ಪ್ರವೇಶ ಪತ್ರ 7 ರಂದು ಏಕಾಏಕಿ ಸುಟ್ಟು ಭಸ್ಮಗೊಂಡಿತು. ಇದಾದ ಬಳಿಕ ಆತಂಕದ ನಡುವೆಯೇ ಅದೇ ದಿನ ಕಾಲೇಜಿನಿಂದ ದ್ವಿತೀಯ ಪ್ರತಿ ತಂದು ಪಕ್ಕದ ಮನೆಯಲ್ಲಿರಿಸಲಾಗಿತ್ತು. ಅದೂ ಕೂಡ 8ರಂದು ಇಟ್ಟ ಜಾಗದಲ್ಲಿಯೇ ತುಂಡರಿಸಿ ವಿದ್ಯಾರ್ಥಿನಿ, ಸಂಬಂಧಿಕರು ಮತ್ತು ಗ್ರಾಮಸ್ಥರ ಆತಂಕ ಇನ್ನಷ್ಟು ಇಮ್ಮಡಿಗೊಳಿಸಿತ್ತು.

    ತದನಂತರ ಪುನಃ ಕಾಲೇಜಿನಿಂದ ಮೂರನೇ ಪ್ರತಿಯನ್ನು ವಿದ್ಯಾರ್ಥಿನಿಯ ಸಂಬಂಧಿಕರು ತಂದು ಗುರುವಾರ ಮೊದಲ ದಿನದ ಪರೀಕ್ಷೆಗೆ ನಿಡಗುಂದಿಗೆ ಕಳಿಸಿದ್ದರು. ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿನಿ ತನ್ನ ಸ್ಥಳ ಹುಡುಕುವಾಗ ಕ್ಲಿಪ್‌ಬೋರ್ಡ್‌ನಲ್ಲಿಟ್ಟಿದ್ದ ಮೂರನೇ ಪ್ರವೇಶ ಪತ್ರವೂ ಕೂಡ ತುಂಡರಿಸಿರುದ್ದು, ಸಂಶಯಕ್ಕೆ ಕಾರಣವಾಗಿದೆ.

    ಒಂದು ಬಾರಿ ಸುಟ್ಟು ಭಸ್ಮ, ಮತ್ತೆರಡು ಬಾರಿ ಪ್ರವೇಶ ಪತ್ರ ತುಂಡಾಗಿದೆ. ಪ್ರವೇಶ ಪತ್ರವಿಲ್ಲದೆ ಕೋರಿಕೆಯ ಮೇರೆಗೆ ಗುರುವಾರ ಕನ್ನಡ ವಿಷಯದ ಪರೀಕ್ಷೆಯನ್ನು ವಿದ್ಯಾರ್ಥಿನಿ ಬರೆದಿದ್ದಾಳೆ. ಮಾ. 13ರಂದು ನಡೆಯಲಿರುವ ಅರ್ಥಶಾಸ್ತ್ರ (ಎಕನಾಮಿಕ್ಸ್) ಪರೀಕ್ಷೆಗೆ ಪ್ರವೇಶ ಪತ್ರದ ಮೂಲ ಪ್ರತಿಯನ್ನು ತರಬೇಕು ಎಂದು ಕೊಠಡಿ ಮೇಲ್ವಿಚಾರಕರು ಹೇಳಿದ್ದಾರೆ. ಮುಂದೇನು ಮಾಡುವುದು ಎಂದು ವಿದ್ಯಾರ್ಥಿನಿ ಸಂಬಂಧಿಕರು ಚಿಂತೆಗೀಡಾಗಿದ್ದಾರೆ.

    ಗೊಳಸಂಗಿಯ ವಿದ್ಯಾರ್ಥಿ ಪವಿತ್ರಾ ಗುಡ್ಡದ ಅವರ ಪ್ರವೇಶ ಪತ್ರ ಹಾನಿಯಾಗಿರುವ ವಿಷಯವನ್ನು ‘ವಿಜಯವಾಣಿ’ ಪತ್ರಿಕೆಯಲ್ಲಿ ಬಂದ ವರದಿಯಿಂದ ಗಮನಿಸಿದ್ದೇನೆ. ವಿದ್ಯಾರ್ಥಿನಿಯ ಪರೀಕ್ಷೆಗೆ ಪ್ರವೇಶ ಪತ್ರವೊಂದೇ ಮಾನದಂಡವಾಗದ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.
    ಎಸ್.ಎನ್. ಬಗಲಿ, ಡಿಡಿಪಿಯು ವಿಜಯಪುರ.

    ಗ್ರಾಮಸ್ಥರು ಏನಂತಾರೆ..?
    10 ವರ್ಷದ ಹಿಂದೆ ಹೆತ್ತಪ್ಪ ವರ್ಷದ ಹಿಂದೆ ಹೆತ್ತಮ್ಮಳನ್ನು ಕಳೆದುಕೊಂಡ ವಿದ್ಯಾರ್ಥಿನಿ ಪವಿತ್ರಾಳಿಗೆ ಒಡಹುಟ್ಟಿದ ಇಬ್ಬರು ಅಕ್ಕಂದಿರಲ್ಲಿ ಓರ್ವಳ ಮದುವೆಯಾಗಿದೆ. ಇನ್ನೊಬ್ಬ ಅಕ್ಕ ಈಕೆಯ ಕಲಿಕೆಗೆ ಆಧಾರ. ಕಿತ್ತು ತಿನ್ನುವ ಬಡತನದ ಜತೆಗೆ ಹೆತ್ತವರ ಅಗಲಿಕೆಯಿಂದ ವಿದ್ಯಾರ್ಥಿನಿ ಹೀಗೆ ಮಾಡುತ್ತಿರಬಹುದೇ? ಮಾನಸಿಕ ತಜ್ಞರ ಬಳಿ ಆಕೆಯನ್ನು ಕರೆದೊಯ್ದರೆ ಗುಣಮುಖಳಾಗಬಹುದೇನೋ? ಎಂದು ಕೆಲವರು ಹೇಳಿದರೆ ಇನ್ನೂ ಹಲವರು ಕಲಿಕೆಯಲ್ಲಿ ಜಾಣೆಯಾದ ಆಕೆಗೆ ಪರೀಕ್ಷಾ ಭೀತಿ ಎಂಬುದಿಲ್ಲ. ವಾಮಾಚಾರದ ಕುತಂತ್ರದಲ್ಲಿ ವಿದ್ಯಾರ್ಥಿನಿ ಸಿಲುಕಿರಬಹುದೇ ಎಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts