More

    ಸ್ವಸ್ಥ ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ, ಕುಂಚಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿ ಅಭಿಮತ

    ತ್ಯಾಮಗೊಂಡ್ಲು: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮತ್ತು ಊರಿನ ಸಂಸ್ಕೃತಿ ಹೆಚ್ಚಿಸುವಲ್ಲಿ ಮಠ ಮಾನ್ಯಗಳ ಪಾತ್ರ ದೊಡ್ಡದಿದೆ ಎಂದು ಹೊಸದುರ್ಗದ ಶ್ರೀ ಕ್ಷೇತ್ರ ಕುಂಚಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿ ಹೇಳಿದರು.

    ಪಟ್ಟಣದ ದೊಡ್ಡಬೆಲೆ ರಸ್ತೆಯಲ್ಲಿರುವ ಬ್ರಹ್ಮ ಚೈತನ್ಯ ಸದ್ಗುರು ಶ್ರೀ ಶೇಷಾವದೂತರ 128ನೇ ಆರಾಧನಾ ಮಹೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಭಜನೆ, ಧ್ಯಾನದಿಂದ ನೆಮ್ಮದಿ, ಉಲ್ಲಾಸ ದೊರಕುತ್ತದೆ. ಗುರುಗಳಿಂದ ಜೀವನದಲ್ಲಿ ಮುನ್ನಡೆಯಲು ಸೂಕ್ತ ಮಾರ್ಗದರ್ಶನ ದೊರಕುತ್ತದೆ. ತಾತಪ್ಪನವರ ಗದ್ದುಗೆ ಪುರಾತನವಾಗಿದ್ದು, ಸಿದ್ಧ ಸ್ಥಳವಾಗಿ ರೂಪುಗೊಂಡಿದೆ ಎಂದರು.

    ಇಂದು ಜನರು ಹಣ ಎಷ್ಟು ಬೇಕಾದರೂ ನೀಡಲು ಸಿದ್ಧವಿದ್ದಾರೆ. ಆದರೆ ಅವರ ಬಳಿ ಭಗವಂತನಿಗೆ ನೀಡಲು ಸಮಯವಿಲ್ಲ, ತಾನೇ ಸೃಷ್ಟಿಸಿದ ಪ್ರಾಣಿಗಳಲ್ಲಿ ಮನುಷ್ಯನಷ್ಟು ಸ್ವಾರ್ಥಿ ಯಾರೂ ಇಲ್ಲ, ನರನಿಂದ ನಾರಾಯಣನಾಗುವ ಶಕ್ತಿ ಮನುಷ್ಯನಿಗಿದ್ದರೂ ಸಾಧನೆ ಮಾಡದೇ ನರನಾಗೇ ಜೀವನ ಮುಗಿಸುತ್ತಿದ್ದಾನೆ. ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಕಡಿಮೆಯಾಗುತ್ತಿದೆ. ಈ ಭಾವನೆ ಬದಲಾಗಬೇಕು ಎಂದರು.
    ಹನಿಗೂಡಿದರೆ ಹಳ್ಳ ಎಂಬಂತೆ ಭಕ್ತರು ನೀಡುವ ಸಣ್ಣ ಕಾಣಿಕೆಯು ಕೂಡ ಮುಂದೆ ದೊಡ್ಡ ಮೊತ್ತವಾಗುತ್ತದೆ. ಆದ್ದರಿಂದ ಎಲ್ಲರೂ ಈ ಉತ್ತಮ ಕಾರ್ಯದಲ್ಲಿ ನೆರವಾಗಿ ಟ್ರಸ್ಟ್‌ನಿಂದ ನಡೆಯುವ ಕಾರ್ಯಕ್ರಮಗಳಿಗೆ ಎಲ್ಲರು ಸಹಕರಿಸಬೇಕು ಎಂದರು.

    ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಹುಚ್ಚಪ್ಪ ಮಾತನಾಡಿ, ಟ್ರಸ್ಟ್‌ನಿಂದ ಸಮುದಾಯ ಭವನ, ವೃದ್ಧಾಶ್ರಮ ಮತ್ತು ಗೋಶಾಲೆ ನಿರ್ಮಿಸಲು ಗುರುಗಳ ಸಂಕಲ್ಪವಾಗಿದೆ. ಇದರ ಜತೆ ನಿತ್ಯ ಅನ್ನದಾಸೋಹವಾಗಬೇಕಾಗಿದೆ. ಆದ್ದರಿಂದ ಗುರು ಭಕ್ತರು ಸಹಕರಿಸಬೇಕು ಎಂದು ಕೋರಿದರು.

    ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರಮದಾನದಲ್ಲಿ ಪಟ್ಟಣದ ಶ್ರೀ ಸಿದ್ದೇಶ್ವರ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು
    ಭಕ್ತರಾದ ಬೆಂಗಳೂರಿನ ರಾಮಮೂರ್ತಿ, ಶೇಷಕುಮಾರ್, ಟ್ರಸ್ಟ್ ಖಜಾಂಚಿ ಟಿ.ಎಲ್.ರಾಜು, ನಿರ್ದೇಶಕ ಲಕ್ಷ್ಮಿನಾರಾಯಣ್, ಸ್ವಾಮಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts