More

    ಸಂವಿಧಾನ ಶೋಷಿತರ ಧರ್ಮಗ್ರಂಥ

    ಬಸವನಬಾಗೇವಾಡಿ: ಧ್ವನಿ ಇಲ್ಲದವರಿಗೆ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಸಂವಿಧಾನ ಎಂದು ಶಿಕ್ಷಕ ಬಸವರಾಜ ಹಂಚಲಿ ಹೇಳಿದರು
    ಪಟ್ಟಣದ ಬಸವಭವನದಲ್ಲಿ ತಾಲೂಕಾಡಳಿತ, ಪುರಸಭೆ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

    ಶೋಷಿತರಿಗೆ ಸಂವಿಧಾನವೇ ರಾಷ್ಟ್ರೀಯ ಧರ್ಮ ಗ್ರಂಥ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ದೇಶದಲ್ಲಿ ಗುಡಿ, ಗುಂಡಾರ ನಿರ್ಮಿಸಿದರೆ ನೂರ ಜನ ಭಿಕ್ಷುಕರು ಹುಟ್ಟುತ್ತಾರೆ. ಒಂದು ಶಾಲೆ ನಿರ್ಮಿಸಿದರೆ ನೂರಾರು ವಿದ್ವಾಂಸರು ಸಂಶೋಧಕರು ಹುಟ್ಟುತ್ತಾರೆ. ಈ ತತ್ವದಡಿಯಲ್ಲಿ ಶಿಕ್ಷಣ, ಹೋರಾಟ, ಸಂಘಟನೆ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೋರಾಟ ಮಾಡಿದರು ಎಂದರು.

    ಪುರಸಭೆ ಸದಸ್ಯ ಅಶೋಕ ಹಾರಿವಾಳ, ಮಾಜಿ ಸದಸ್ಯ ಸಂಗಮೇಶ ಓಲೇಕಾರ, ಡಿಎಸ್‌ಎಸ್ ಮುಖಂಡರಾದ ಅರವಿಂದ ಸಾಲವಾಡಗಿ, ಅಶೋಕ ಚಲವಾದಿ, ಮಹಾಂತೇಶ ಸಾಸಾಬಾಳ ಮಾತನಾಡಿ, ಸಂವಿಧಾನವು ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯದ ತಿಳುವಳಿಕೆಯನ್ನು ಒಳಗೊಂಡಿದೆ. ಇಂದಿನ ನಮ್ಮ ಯುವಕರು ಸಂವಿಧಾನದ ಮಹತ್ವವು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.

    ವೀರರಾಣಿ ಕಿತ್ತೂರ ಚನ್ನಮ್ಮಳ ವೃತ್ತಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಸುಮಂಗಲೆಯರು ಆರತಿ ಬೆಳಗಿ ಸ್ವಾಗತಿಸಿದರು. ನಂತರ ಜಾಥಾ ಹಾಗೂ ಸ್ಥಬ್ಧ ಚಿತ್ರ, ಕುಂಭಮೇಳ, ಡೊಳ್ಳುವಾದ್ಯ, ಗ್ರಾಮೀಣ ಕುಣಿತಗಳ ಮೂಲಕ ಬಸವೇಶ್ವರ ವೃತ್ತದ ಮಾರ್ಗವಾಗಿ ಬಸವ ಭವನಕ್ಕೆ ಆಗಮಿಸಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾಜಕಲ್ಯಾಣ ಉಪನಿರ್ದೇಶಕ ಪುಡಂಲಿಕ ಮಾನವರ, ತಾಪಂ ಇಒ ಡಾ. ಯುವರಾಜ ಹನಗಂಡಿ, ಬಿಇಒ ವಸಂತ ರಾಠೋಡ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ, ಪರಶುರಾಮ ದಿಂಡವಾರ, ಗುರು ಗುಡಿಮನಿ, ರಮೇಶ ಮ್ಯಾಗೇರಿ, ತಮ್ಮಣ್ಣ ಕಾನಾಗಡ್ಡಿ, ಗಂಗಾಧರ ಸೌದಾಗರ, ಶಿವಾನಂದ ಮಂಗಾನವರ, ಶೇಖರ ಗೊಳಸಂಗಿ, ಬಸವಣ್ಣ ದೇಸಾಯಿ, ಜಗದೇವಿ ಗುಂಡಳ್ಳಿ, ರವಿ ರಾಠೋಡ, ಶಿವಾನಂದ ಡೋಣೂರ, ಸಂಜು ಕಲ್ಯಾಣಿ, ಪಿ.ಐ. ವಿಜಯ ಮುಳಗುಂಡಿ, ಪಿಎಸ್‌ಐ ರಾಜು ಬೀಳಗಿ ಇತರರಿದ್ದರು.

    ಪುರಸಭೆ ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ ಸ್ವಾಗತಿಸಿದರು. ಶಿವಾನಂದ ಮಡಿಕೇಶ್ವರ, ಕೊಟ್ರೇಶ ಹೆಗಡ್ಯಾಳ ನಿರೂಪಿಸಿದರು. ಬಿ.ವಿ. ಚಕ್ರಮನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts