More

    ಗೊಂದಲ ಮೂಡಿಸಿದ ಕೋವಿಡ್ ನಿಯಮಾವಳಿ

    ಕಾರವಾರ: ಸರ್ಕಾರ ಮುನ್ಸೂಚನೆ ನೀಡದೇ ಕರ್ಫ್ಯೂ ನಿಯಮಾವಳಿ ಬದಲಾಯಿಸಿದ್ದರಿಂದ ಜಿಲ್ಲೆಯ ವ್ಯಾಪಾರಸ್ಥರು ಶುಕ್ರವಾರ ಗೊಂದಲಕ್ಕೀಡಾದರು. ವಾರಾಂತ್ಯದ ಎರಡು ದಿನ ಮಾತ್ರ ಕರ್ಫ್ಯೂ ಎಂದಿದ್ದ ಜಿಲ್ಲಾಧಿಕಾರಿ ಹೇಳಿಕೆ ನಂಬಿಕೊಂಡಿದ್ದರು. ಜಿಲ್ಲೆಯ ವಿವಿಧ ಉಪವಿಭಾಗಾಧಿಕಾರಿಗಳು ಸಭೆ ಮಾಡಿ ಇದನ್ನೇ ಹೇಳಿದ್ದರು. ಶುಕ್ರವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರು ಬಂದು ಬಾಗಿಲು ಮುಚ್ಚಿಸಲು ಮುಂದಾದರು. ಕೆಲವೆಡೆ ವ್ಯಾಪಾರಸ್ಥರು ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದರು. ಕೆಲವು ಅಂಗಡಿಗಳನ್ನು ಮಾತ್ರ ಮುಚ್ಚುವ ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಾರಸ್ಥರು ಅಸಮಾಧಾನ ಹೊರ ಹಾಕಿದರು.
    ಬಟ್ಟೆ, ಬಂಗಾರ, ಮೊಬೈಲ್, ಸ್ಟೇಶನರಿ, ಗೂಡಂಗಡಿಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿದರು. ಹೋಟೆಲ್​ಗಳು, ಬೇಕರಿಗಳು, ಹಣ್ಣು, ತರಕಾರಿ, ಇತರ ನಿರ್ಮಾಣ ಸಾಮಗ್ರಿ, ಪೆಟ್ರೋಲ್ ಬಂಕ್, ಮೀನು ಮಾರುಕಟ್ಟೆ, ಮಾಂಸದ ಅಂಗಡಿಗಳು ತೆರೆದಿದ್ದವು. ಜನಸಂಚಾರ ಎಂದಿನಕ್ಕಿಂತ ಕೊಂಚ ಜಾಸ್ತಿಯೇ ಇತ್ತು. ಲಾಕ್​ಡೌನ್ ಆಗುವ ಭಯದಲ್ಲಿ ಜನ ತರಕಾರಿ, ಮೀನು, ಮೊಟ್ಟೆ ಕೊಳ್ಳಲು ಮುಗಿಬಿದ್ದರು. ಪೆಟ್ರೋಲ್ ಬಂಕ್​ಗಳಲ್ಲಿ ಉದ್ದದ ಸರತಿ ಸಾಲೇ ಇತ್ತು.
    ದೇಶಪಾಂಡೆಗೆ ಪಾಸಿಟಿವ್: ಹಳಿಯಾಳ- ಜೊಯಿಡಾ- ದಾಂಡೇಲಿ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಕೋವಿಡ್ ಇರುವುದು ಖಚಿತವಾಗಿದೆ. ಈ ಕುರಿತು ಅವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ತಮ್ಮ ಸಂಪರ್ಕದಲ್ಲಿರುವವರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಐಸೋಲೇಶನ್​ನಲ್ಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರು ಕೋವಿಡ್ ಲಸಿಕೆ ಪಡೆದಿದ್ದರು.
    193 ಜನರಿಗೆ ಕೋವಿಡ್: ಶುಕ್ರವಾರದ ವರದಿಯಂತೆ ಜಿಲ್ಲೆಯ 193 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಕಾರವಾರದ 42, ಅಂಕೋಲಾದ 12, ಕುಮಟಾದ 24, ಹೊನ್ನಾವರದ 5, ಭಟ್ಕಳದ 12, ಶಿರಸಿಯ 24, ಸಿದ್ದಾಪುರದ 25, ಯಲ್ಲಾಪುರದ 17, ಮುಂಡಗೋಡಿನ 3, ಹಳಿಯಾಳ ಹಾಗೂ ದಾಂಡೇಲಿ ಸೇರಿ 25, ಜೊಯಿಡಾದ 4 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 875 ಕ್ಕೆ ಏರಿಕೆಯಾಗಿದೆ. 761 ಜನ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 193 ಜನ ಆಸ್ಪತ್ರೆಗಳಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 16871 ಜನರಿಗೆ ಕೋವಿಡ್ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts