More

    ಕಾಂಗ್ರೆಸಿಗರಿಗೆ ಸಿಎಂ ಬಹಿರಂಗ ಸವಾಲು: ದಮ್ಮು, ತಾಕತ್ತಿದ್ದರೆ ಕೇಸರಿ ಅಲೆ ತಡೆಯಿರಿ

    ಬೆಂಗಳೂರು: ಶಹಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೀನರಡ್ಡಿ ಯಾಳಗಿ ಪರ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ನಡೆಸಿದರು.

    ಸೇಡಂನಿಂದ ಭೀಮರಾಯನ ಗುಡಿಗೆ ಹೆಲಿಕಾಪ್ಟರ್​​ನಲ್ಲಿ ಬಂದಿಳಿದ ಬೊಮ್ಮಾಯಿ, ಸಿ.ಬಿ. ಕಮಾನ್ನಿಂದ ಬಸವೇಶ್ವರ ವೃತ್ತದವರೆಗೆ ಅಲಂಕೃತ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಸಿಎಂ ನೋಡಲು ಗ್ರಾಮೀಣ ಭಾಗದಿಂದ ಸಾವಿರಾರು ಜನ ಆಗಮಿಸಿದ್ದರು. ಕೊರಳಿದ್ದ ಕೇಸರಿ ಶಲ್ಯವನ್ನು ಎತ್ತಿ ತಿರುವಿದ ಬೊಮ್ಮಾಯಿ, ಈ ಬಾರಿ ನಮ್ಮದೇ ಸರ್ಕಾರ ಎಂಬರ್ಥದಲ್ಲಿ ಸಂದೇಶ ಸಾರಿದರು.

    ಬಸವೇಶ್ವರ ವೃತ್ತದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ದೇಶವನ್ನು ಒಡೆದ ಕಾಂಗ್ರೆಸ್ ನಂತರದ ಅವಯಲ್ಲಿ ಸಮಾಜವನ್ನು ಒಡೆಯುವ ಮೂಲಕ ಆಶಾಂತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ನಿಮಗೆ ಧಮ್ ಇದ್ದರೆ, ತಾಕತ್ ಇದ್ದರೆ ಕೇಸರಿಪಡೆ ಅಲೆಯನ್ನು ನಿಲ್ಲಿಸಿ, ರಾಹುಲ್ ಗಾಂಧಿ ಬರಲಿ, ಮಲ್ಲಿಕಾರ್ಜುನ್​ ಖರ್ಗೆ ಬರಲಿ ಕಲ್ಯಾಣ ಭಾಗದಲ್ಲಿ ಕೇಸರಿ ಝಂಡಾ ಹಾರಿಸಿಯೇ ಸಿದ್ಧ ಎಂದು ಸವಾಲೆಸೆದರು.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಅಕಾರದಲ್ಲಿದ್ದಾಗ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಕೈ ಹಾಕಿ ಮಣ್ಣು ಮುಕ್ಕಿದೆ. ಸಣ್ಣಪುಟ್ಟ ಸಮುದಾಯಗಳನ್ನು ಒಡೆಯುವ ಪ್ರಯತ್ನ ಮಾಡಿದ್ದೀರಿ. 130 ಕೋಟಿ ರೂ.ಖರ್ಚು ಮಾಡಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಆಯೋಗ ರಚಿಸಿ, ವರದಿ ಸಹ ಪಡೆದಿತ್ತು. ಆದರೆ ಯಾಕೆ ಅದನ್ನು ಬಹಿರಂಗ ಪಡಿಸಲಿಲ್ಲ ಎಂದು ಹೆಸರು ಹೇಳದೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

    ಕಾಂಗ್ರೆಸ್​ನದ್ದು ಎಲೆಕ್ಷನ್​ ಮುಗಿಯುವ ತನಕ ಮಾತ್ರ ಗ್ಯಾರೆಂಟಿ, ನಂತರ ಗಳಗಂಟಿ. ಅವರ ಬಣ್ಣದ ಮಾತುಗಳನ್ನು ಜನತೆ ಕೇಳಲು ಈಗ ಸಿದ್ಧರಿಲ್ಲ. ನಮ್ಮದು ಡಬ್ಬಲ್ ಇಂಜಿನ್ ಸರ್ಕಾರ ಆಡಿದಂತೆ ಮಾಡಿ ತೋರಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಬಿಜೆಪಿ ಹೆಚ್ಚಿನ ಅಂತರದೊಂದಿಗೆ ವಿಜಯಶಾಲಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ತಮ್ಮ ಭಾಷಣದ ಉದಕ್ಕೂ ಕಾಂಗ್ರೆಸ್ಸನ್ನು ಹಿಗ್ಗಾ-ಮಗ್ಗಾ ಝಾಡಿಸಿದ ಬೊಮ್ಮಾಯಿ, ಸಿದ್ಧರಾಮಯ್ಯ ಲಿಂಗಾಯತ ಮುಖ್ಯಮಂತ್ರಿಗಳೆಲ್ಲರೂ ಭ್ರಷ್ಟರು ಎಂದು ಹೇಳಿಕೆ ನೀಡುವ ಮೂಲಕ ಬೆಂಕಿ ಹಚ್ಚಿದ್ದಾರೆ. ಸಮಾಜದಲ್ಲಿನ ದುರ್ಬಲ ವರ್ಗ ತಮ್ಮ ಹಕ್ಕನ್ನು ಕೇಳಿದರೆ, ಅದನ್ನು ಭಿಕ್ಷೆ ಎಂದು ಕೈ ನಾಯಕರು ತಿಳಿದುಕೊಂಡಿದ್ದಾರೆ. ನಾನು ಮೀಸಲಾತಿ ಪ್ರಮಾಣ ಹೆಚ್ಚಿಸಿ ಆದೇಶ ಮಾಡಿದಾಗ ಕಾಂಗ್ರೆಸ್ನವರು ಜೇನು ಗೂಡಿಗೆ ಕೈಹಾಕಿದ್ದಾರೆ ಎಂದು ನನ್ನನ್ನು ಹೆದರಿಸುವ ಪ್ರಯತ್ನ ಮಾಡಿದರು. ಆದರೆ, ನಾನು ಸಹ ರಾಜಕೀಯ ಮನೆತನದಿಂದ ಬಂದವನಾಗಿದ್ದು, ಅವರ ತಂತ್ರ,ಕುತಂತ್ರಕ್ಕೆ ಮಣಿದಿಲ್ಲ ಎಂದು ಟಾಂಗ್ ನೀಡಿದರು.

    ಶಹಾಪುರದಲ್ಲಿನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಕಾರಕ್ಕೆ ತರಲು ಮತದಾರ ಮುಂದಾಗಬೇಕು. ನಮ್ಮ ಅಭ್ಯರ್ಥಿ ಅಮೀನರಡ್ಡಿ ಯಾಳಗಿ ಜತೆ ಶಾಸಕ ರಾಜುಗೌಡ ಎಂಬ ದೊಡ್ಡ ಶಕ್ತಿ ಇದೆ. ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ, ಈ ಭಾಗದ ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡಲು ಪಣ ತೊಡುವಂತೆ ಕರೆ ನೀಡಿದರು.

    ಪ್ಲಾಸ್ಟಿಕ್​​ ಸರ್ಜರಿ ಬಳಿಕ ಹೃದಯಾಘಾತದಿಂದ ಪ್ರಾಣ ಬಿಟ್ಟ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts