More

    ಯಕ್ಷಗಾನ ವೇಷತೊಟ್ಟು ಪ್ರಚಾರಕ್ಕಿಳಿದ ಜಿಪಂ ಸಿಇಒ

    ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಇಬ್ಬರು ಅಭ್ಯರ್ಥಿ ಸೇರಿ ಒಟ್ಟು 10 ಮಂದಿ ಚುನಾವಣಾ ಕಣದಲ್ಲಿ, ಮತಬೇಟೆ ಆರಂಭಿಸಿದ್ದಾರೆ. ಇತ್ತ ಜಿಲ್ಲಾ ಸ್ವೀಪ್​ ಸಮಿತಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾದ್ಯಂತ ವಿವಿಧ ಪ್ರಕಾರಗಳಲ್ಲಿ ಜನಜಾಗೃತಿ ಮೂಡಿಸುತ್ತಿದೆ.
    ರಾಜ್ಯದಲ್ಲಿಯೇ ವಿಶೇಷವಾಗಿ ಉಡುಪಿ ಜಿಲ್ಲಾ ಸ್ವೀಪ್​ ಸಮಿತಿ ಮತಜಾಗೃತಿಗಾಗಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಐಎಎಸ್​, ಐಪಿಎಸ್​, ಕೆಎಎಸ್​ ಅಧಿಕಾರಿಗಳೇ ಯಕ್ಷಗಾನ ವೇಷ ಧರಿಸಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

    ವೇಷತೊಟ್ಟ ಅಧಿಕಾರಿ:
    ಜಿಲ್ಲಾ ಪಂಚಾಯಿತಿಯ ಸಿಇಒ ಪ್ರತಿಕ್​ ಬಾಯಲ್​ ಅವರೇ ಜಿಲ್ಲಾ ಸ್ವೀಪ್​ ಸಮಿತಿಯ ಅಧ್ಯಕ್ಷರೂ ಆಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮನ್ನು ಮನಸಾ ತೊಡಗಿಸಿಕೊಂಡಿದ್ದಾರೆ. ಕರಾವಳಿಯ ಪ್ರಸಿದ್ಧ ಕಲೆಯಾದ ಯಕ್ಷಗಾನಕ್ಕೆ ಮನಸೋತ ಅವರು, ವೇಷ ತೊಟ್ಟು ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

    ಮಹಿಳಾ ಅಧಿಕಾರಿಗಳ ಸಾಥ್​:
    ಪ್ರತಿಕ್​ ಅವರೊಂದಿಗೆ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​.. ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್​. ಅವರೂ ಸಹ ಯಕ್ಷಗಾನ ಪೋಷಾಕಿನೊಂದಿಗೆ ಮತಜಾಗೃತಿಯಲ್ಲಿ ತೊಡಗಿದ್ದಾರೆ. ನೃತ್ಯ, ಮಾತುಗಾರಿಕೆ ಮೂಲಕ ಮತದಾನದ ಶ್ರೇಷ್ಠತೆ ಹಾಗೂ ಮತಹಕ್ಕು ಚಲಾಯಿಸುವ ಕುರಿತು ಅರಿವು ಮೂಡಿಸುತ್ತಿದ್ದಾರೆ. ಕರಾವಳಿ ಕಾವಲು ಪಡೆಯ ಪೊಲೀಸ್​ ಅಧೀಕ್ಷಕ ಮಿಥುನ್​ ಅವರೂ ಸಹ ಬಡಗುತಿಟ್ಟು ಯಕ್ಷಗಾನ ಶೈಲಿಯ ವೇಷಭೂಷಣ ತೊಟ್ಟು ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮತಜಾಗೃತಿ ಮೂಡಿಸಿದರು.

    ಅಭ್ಯರ್ಥಿಗಳಿಂದ ಗೆಲುವಿಗಾಗಿ ಮತಬೇಟೆ
    ಏ.26ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಮತಬೇಟೆ ಆರಂಭಿಸಿದ್ದಾರೆ. ಗೆಲುವಿನಲ್ಲಿ ಒಂದು ಮತವೂ ಬಹುಮುಖ್ಯ ಆಗಿರುವುದರಿಂದ ಕರಾವಳಿಯ ಮೂಲದವರು ಬೆಂಗಳೂರು, ಮುಂಬಯಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದ್ದಾರೆ. ಅವರಲ್ಲಿ ಅನೇಕರ ಮತದಾನದ ಹಕ್ಕು ಇಲ್ಲಿಯೇ ಇದೆ. ಹೀಗಾಗಿ ಅವರೆಲ್ಲ ಯಾರು? ಎಲ್ಲಿದ್ದಾರೆ ಎಂದು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೆ ಮತ ಚಲಾಯಿಸಲು ಊರಿಗೆ ಬರುವಂತೆ ಪ್ರೇರೇಪಿಸಲು ಪ್ರಮುಖ ನಗರಗಳಲ್ಲಿ ತಮ್ಮ ಅಭ್ಯರ್ಥಿಯೊಂದಿಗೆ ಕ್ಷೇತ್ರದ ಶಾಸಕರೊಡಗೂಡಿ ಸಭೆಯನ್ನೂ ಆಯೋಜಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಒಟ್ಟು 137 ಮಂದಿ ಎನ್​ಆರ್​ಐ ಮತದಾರರು ನೋಂದಣಿ ಮಾಡಿಸಿಕೊಂಡಿದ್ದು, ಅವರನ್ನು ಸಂಪರ್ಕಿಸಲೂ ಯತ್ನಿಸುತ್ತಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಗಿಂತ ಹೆಚ್ಚಿನ ಮತದಾನ ಆಗುವಂತಾಗಲು ಜಿಲ್ಲಾ ಸ್ವೀಪ್​ ಸಮಿತಿಯಿಂದ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಶೇ.100 ಮತದಾನ ಆಗಬೇಕು ಎನ್ನುವುದು ನಮ್ಮ ಗುರಿಯಾಗಿದ್ದು, ಮತದಾನದ ಮಹತ್ವವನ್ನು ತಿಳಿಸುತ್ತಿದ್ದೇವೆ. ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳ್ಳಲು ಹಾಗೂ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ತಪ್ಪದೇ ಎಲ್ಲ ಮತದಾರರು ಹಕ್ಕು ಚಲಾಯಿಸಬೇಕು ಎಂದು ವಿನಂತಿಸುತ್ತೇನೆ.

    ಪ್ರತಿಕ್​ ಬಾಯಲ್​.
    ಉಡುಪಿ ಜಿಪಂ ಸಿಇಒ, ಜಿಲ್ಲಾ ಸ್ವೀಪ್​ ಸಮಿತಿ ಅಧ್ಯಕ್ಷ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts