More

    ನಾಲ್ಕು ಜಾನುವಾರು ಸಜೀವ ದಹನ

    ಅಕ್ಕಿಆಲೂರ: ದನದ ಕೊಟ್ಟಿಗೆಯಲ್ಲಿ ಇಡಲಾಗಿದ್ದ ಚಿಮಣಿ ದೀಪದಿಂದ ಬೆಂಕಿ ಅವಘಡ ಸಂಭವಿಸಿ ನಾಲ್ಕು ಜಾನುವಾರು ಸಜೀವ ದಹನವಾದ ದಾರುಣ ಘಟನೆ ಸಮೀಪದ ಬೆಳಗಾಲಪೇಟೆ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

    ಗ್ರಾಮದ ಕುಂಬಾರ ಓಣಿಯ ರೈತ ಫಕೀರಪ್ಪ ಜಾನುಗುಂಡಿ ಅವರ ಎತ್ತು, ಎಮ್ಮೆ, ಆಕಳು ಮತ್ತು ಆಕಳು ಕರು ಮೃತಪಟ್ಟಿವೆ.

    ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ದನದ ಗುಡಿಸಲಿನಲ್ಲಿ ಬೆಳಕಿರಲಿ ಎಂಬ ಉದ್ದೇಶದಿಂದ ಎಂದಿನಂತೆ ಶುಕ್ರವಾರ ರಾತ್ರಿ ರೈತ ಫಕೀರಪ್ಪ ಚಿಮಣಿ ದೀಪ ಹಚ್ಚಿ ಮನೆಗೆ ಬಂದಿದ್ದಾರೆ. ತಡರಾತ್ರಿ 2 ಗಂಟೆ ಸುಮಾರಿಗೆ ದೀಪ ದನದ ಮನೆಗೆ ತಾಗಿ ಬೆಂಕಿ ಆವರಿಸಿಕೊಂಡಿದೆ. ಗುಡಿಸಲಿಗೆ ಬೆಂಕಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಗ್ನಿ ಶಾಮಕದಳದವರು ಸ್ಥಳಕ್ಕೆ ಬರುವಷ್ಟರಲ್ಲಿ ಎತ್ತು, ದಿನಕ್ಕೆ 8 ಲೀಟರ್ ಹಾಲು ನೀಡುತ್ತಿದ್ದ ಎಮ್ಮೆ, ಆಕಳು ಕರು ಮತ್ತು ಗರ್ಭ ಧರಿಸಿದ್ದ ಆಕಳು ಕೊನೆಯುಸಿರೆಳೆದಿದ್ದವು.

    ಕಣ್ಣೀರಿಟ್ಟ ಸಾರ್ವಜನಿಕರು: ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಕೊಟ್ಟಿಗೆಯಲ್ಲಿ ಸತ್ತು ಬಿದ್ದಿದ್ದ ಜಾನುವಾರುಗಳನ್ನು ನೋಡಿ ಕಣ್ಣೀರಿಟ್ಟರು. ಪ್ರೀತಿಯಿಂದ ಸಾಕಿದ್ದ ಹಾಗೂ ಬಡ ಕುಟುಂಬಕ್ಕೆ ಆಸರೆಯಾಗಿದ್ದ ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿದ್ದರಿಂದ ಜಾನುಗುಂಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಜನಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಕೆ. ಮೋಹನಕುಮಾರ ರೈತ ಫಕೀರಪ್ಪ ಅವರಿಗೆ 5 ಸಾವಿರ ರೂ. ಧನ ಸಹಾಯ ಮಾಡಿ, ಒಂದು ಆಕಳು ಕೊಡಿಸುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts