More

    ಬ್ರಹ್ಮಾವರ ತಾಲೂಕು ಕೇಂದ್ರವಾದರೂ ಕಡತಕ್ಕೆ ಅಲೆದಾಟ ತಪ್ಪಿಲ್ಲ

    ಶಿವರಾಮ ಆಚಾರ್ಯ ಬಂಡಿಮಠ ಬ್ರಹ್ಮಾವರ

    ಹಲವಾರು ಹೋರಾಟ, ಜನಾಂದೋಲನ ಪರಿಣಾಮನವಾಗಿ ಬ್ರಹ್ಮಾವರ ತಾಲೂಕು ರಚನೆಯಾಗಿತ್ತು. ಆದರೆ ತಾಲೂಕು ಘೋಷಣೆಯಾಗಿ ಮೂರೂವರೆ ವರ್ಷ ಕಳೆದರೂ ಹಲವಾರು ಅಗತ್ಯದ ಕಡತಗಳು ಮಾತ್ರ ಇನ್ನೂ ಉಡುಪಿಯಲ್ಲಿಯೇ ಉಳಿದಿದ್ದು, ಸಾರ್ವಜನಿಕರು ಉಡುಪಿಗೆ ತೆರಳುವುದು ತಪ್ಪಿಲ್ಲ.

    ಬಹುತೇಕ ಗ್ರಾಮೀಣ ಭಾಗದಿಂದ 30 ಕಿ.ಮೀ. ದೂರದಿಂದ ಸಾರ್ವಜನಿಕರಿಗೆ ಅಗತ್ಯ ಕೆಲಸಗಳಿಗೆ ಬೇಕಾಗುವ ಕಡತಗಳು ಇಲ್ಲಿ ಇಲ್ಲದ ಕಾರಣ ಉಡುಪಿಗೆ ಅಲೆದಾಡುವ ಸ್ಥಿತಿಯಿಂದ ಹೈರಾಣಾಗಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ತಾಲೂಕಿನ ಭೂಸುಧಾರಣೆ, ಜನನ, ಮರಣ, ದರ್ಕಾಸ್ತು , ಪಡಿತರ ಚೀಟಿಯ ಬದಲಾವಣೆಗೆ ತಿದ್ದುಪಡಿ ಸೇರಿದಂತೆ ಅನೇಕ ಕೆಲಸಗಳಿಗೆ ದೂರದ ಉಡುಪಿಗೆ ಹೋಗಬೇಕಾಗಿದೆ.

    ಕೆಲವು ವರ್ಷದ ಹಿಂದೆ ಬ್ರಹ್ಮಾವರದಲ್ಲಿ ಹೊಸದಾಗಿ ತಾಲೂಕು ಕಚೇರಿ ಕಟ್ಟಡ ರಚನೆಯಾದರೂ ಎಲ್ಲ ಕಡತಗಳನ್ನು ಇರಿಸಿಕೊಳ್ಳುವಷ್ಟು ಜಾಗ ಇಲ್ಲಿ ಇಲ್ಲ ಎನ್ನುವ ಕಾರಣದಿಂದ ಉಡುಪಿಯನ್ನೇ ಅವಲಂಬಿಸಬೇಕಾಗಿದೆ. ಹಳೇ ಪ್ರವಾಸಿ ಮಂದಿರದ ಬಳಿ ಮಿನಿ ವಿಧಾನಸೌಧ ಕಾಮಗಾರಿ ನಡೆಯುತ್ತಿದ್ದು, ಅದು ಮುಕ್ತಾಯಗೊಂಡ ಬಳಿಕ ಅನೇಕ ಕಚೇರಿಗಳು ಅಲ್ಲಿ ವರ್ಗಾವಣೆ ಆಗುವಾಗ ಕಡತಗಳು ಬರಲಿವೆ ಎಂದು ಹೇಳಲಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರ ತಾಲೂಕಿಗೆ ಸಂಬಂಧಪಟ್ಟ ಕಡತಗಳು ಬ್ರಹ್ಮಾವರದಲ್ಲಿಯೇ ಸಿಗುವಂತೆ ಆಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

    ಸರ್ಕಾರ ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ ಕಂಡು ಬರುತ್ತದೆ. ಈಗಿನ ಕಟ್ಟಡ ನಿರ್ಮಾಣಗೊಳ್ಳುವಾಗ ನಾನೂ ಗಮನ ಸೆಳೆದಿದ್ದೆ. ಈಗಿರುವ ಮಾದರಿಗಿಂತ 2 ಮಹಡಿಯ ಕಟ್ಟಡ ನಿರ್ಮಿಸಬೇಕಿತ್ತು. ಆದರೆ ಇಲಾಖೆ ಸ್ಪಂದಿಸಲಿಲ್ಲ. ಬ್ರಹ್ಮಾವರ ತಾಲೂಕಿಗೆ ಸಂಬಂಧಿಸಿದ ಕಡತಗಳನ್ನು ಉಡುಪಿಯಿಂದ ಕೂಡಲೇ ವರ್ಗಾಯಿಸುವಂತೆ ಕಂದಾಯ ಕಾರ್ಯದರ್ಶಿಗೆ ಮತ್ತು ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.
    – ಬಿ.ಭುಜಂಗ ಶೆಟ್ಟಿ ಬ್ರಹ್ಮಾವರ
    ಮಾಜಿ ಅಧ್ಯಕ್ಷರು, ಉಡುಪಿ ಜಿಪಂ

    ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ಸ್ಥಳದ ಸಮಸ್ಯೆಯಿಂದಾಗಿ ಅನೇಕ ಕಡತಗಳು ಉಡುಪಿ ತಾಲೂಕು ಕಚೇರಿಯಲ್ಲಿವೆ. ಕೆಲವೊಂದು ಕೋಟದಲ್ಲಿವೆ. ಮಿನಿ ವಿಧಾನ ಸೌಧ ಎಷ್ಟು ಬೇಗ ಆಗುತ್ತದೋ ಆವಾಗ ಎಲ್ಲವನ್ನೂ ಬ್ರಹ್ಮಾವರಕ್ಕೆ ತರಲಾಗುವುದು. ಸಾರ್ವಜನಿಕರು ಆ ತನಕ ಸಹಕರಿಸಬೇಕು.
    -ರಾಜಶೇಖರ ಮೂರ್ತಿ
    ತಹಸೀಲ್ದಾರ್, ಬ್ರಹ್ಮಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts