More

    ರಾಜ್ಯ ಬಿಜೆಪಿಯಲ್ಲಿ ಉತ್ಸಾಹ; ಕಾಂಗ್ರೆಸ್​ಗೆ ಹಿಮಾಚಲ ಸಮಾಧಾನ, ಎಲ್ಲ ಪಕ್ಷಗಳಿಗೂ ಸಂದೇಶ

    ರುದ್ರಣ್ಣ ಹರ್ತಿಕೋಟೆ

    ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್​ಗೆ ಸಿಹಿ-ಕಹಿ ಎರಡರ ಅನುಭವವನ್ನೂ ನೀಡಿದೆ.

    ಗುಜರಾತ್ ಗೆದ್ದ ಬಿಜೆಪಿ ಹಿಮಾಚಲದಲ್ಲಿ ಮುಗ್ಗರಿಸಿದೆ. ಹಿಮಾಚಲದಲ್ಲಿ ಮತ್ತೆ ಪ್ರಭುತ್ವ ಸಾಧಿಸಿದ ಕಾಂಗ್ರೆಸ್ ಗುಜರಾತ್​ನಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಆದ್ದರಿಂದ ಈ ಫಲಿತಾಂಶದಿಂದ ರಾಜ್ಯದಲ್ಲಿ ಯಾವುದೇ ಪಕ್ಷ ಬೀಗುವಂತಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. 2023ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ

    ಹೊಸ ಸರ್ಕಾರ ಅಸ್ತಿತ್ವದಲ್ಲಿರಬೇಕು. ಆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಎರಡು ರಾಜ್ಯ ಹಾಗೂ ದೆಹಲಿ ಮಹಾನಗರಪಾಲಿಕೆ ಚುನಾವಣೆ ಫಲಿತಾಂಶವನ್ನು ರಾಜಕೀಯ ವಲಯದಲ್ಲಿ ತಾಳೆ ಹಾಕಲಾಗುತ್ತಿದೆ.

    ಗುಜರಾತ್, ಹಿಮಾಚಲಪ್ರದೇಶ, ದೆಹಲಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಗುಜರಾತ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಉಳಿದೆರಡು ಕಡೆ ಅಧಿಕಾರ ಕಳೆದುಕೊಂಡಿದೆ. ಆಮ್​ದಿ್ಮ ಹಾಗೂ ಕಾಂಗ್ರೆಸ್ ತಲಾ ಒಂದು ಕಡೆ ಗೆಲುವು ಸಾಧಿಸಿವೆ. ಆ ದೃಷ್ಟಿಯಿಂದ ನೋಡಿದಾಗ ಈ ಫಲಿತಾಂಶಗಳು ರಾಜ್ಯದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲವೆಂದು ಹೇಳುತ್ತಾರೆ ರಾಜಕೀಯ ಪಂಡಿತರು.

    ಬಿಜೆಪಿಗೆ ಉತ್ಸಾಹ: ಗುಜರಾತ್​ನಲ್ಲಿ ಬಿಜೆಪಿ ಸತತ ಏಳನೇ ಬಾರಿ ಗೆದ್ದಿರುವುದು ಸಹಜವಾಗಿಯೇ ಪಕ್ಷದ ರಾಜ್ಯ ಘಟಕದಲ್ಲಿ ಮತ್ತೆ ಗೆದ್ದೇ ಬಿಟ್ಟೆವು ಎಂಬ ಉತ್ಸಾಹವನ್ನು ಮೂಡಿಸಿದೆ. ಅದೇ ಕಾಲಕ್ಕೆ ಗುಜರಾತ್​ನಲ್ಲಿ ಪಕ್ಷ ಕೈಗೊಂಡ ಕೆಲ ನಿರ್ಧಾರಗಳು ರಾಜ್ಯದಲ್ಲಿಯೂ ಆದರೆ ಏನು ಮಾಡಬೇಕು ಎಂಬ ಆತಂಕವೂ ಪಕ್ಷದಲ್ಲಿನ ಹಿರಿಯರನ್ನು ಕಾಡುತ್ತಿದೆ. ಮೋದಿ ಪ್ರಚಾರದುದ್ದಕ್ಕೂ ಗುಜರಾತ್ ಮಗ, ಗುಜರಾತಿಗರ ಕೈಯಲ್ಲಿ ಇರುವ ಕೇಂದ್ರ ಸರ್ಕಾರದ ಭವಿಷ್ಯ ಇಲ್ಲಿನ ಫಲಿತಾಂಶದ ಮೇಲೆ ನಿಂತಿದೆ ಎಂದೇ ಭಾವನಾತ್ಮಕವಾಗಿ ಅಲ್ಲಿನ ಜನರನ್ನು ಕಟ್ಟಿ ಹಾಕಿದರು. ಅದು ಉತ್ತಮ ಫಲಿತಾಂಶಕ್ಕೆ ಕಾರಣವಾಯಿತು.

    ಗುಜರಾತ್​ನಲ್ಲಿ ಹಾಲಿ 35 ಶಾಸಕರಿಗೆ ಟಿಕೆಟ್ ನೀಡಲಿಲ್ಲ. ಮಾಜಿ ಮುಖ್ಯಮಂತ್ರಿ, ಮಂತ್ರಿಗಳನ್ನು ಕೈಬಿಡಲಾಯಿತು. ಕಾಂಗ್ರೆಸ್​ನಿಂದ ಕರೆತಂದ ಶಾಸಕರಿಗೆ ಟಿಕೆಟ್ ನೀಡಲಾಯಿತು. ಆ ಅಂಶವೇ ಈಗ ರಾಜ್ಯದ ಹಿರಿಯರಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿದೆ. ಪಕ್ಷದ ಅನೇಕ ಹಿರಿಯ ಮುಖಂಡರು ಟಿಕೆಟ್ ಕೈ ತಪ್ಪಿದರೆ, ತಮ್ಮ ವಂಶದವರಿಗೆ ನೀಡದಿದ್ದರೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿಯೂ ಅನೇಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.

    ರಾಜ್ಯದಲ್ಲಿ ಸರ್ಕಾರ ಎದುರಿಸುತ್ತಿರುವ ಶೇ.40 ಪರ್ಸೆಂಟ್ ಸೇರಿದಂತೆ ಅನೇಕ ಆರೋಪಗಳಿಂದ ಸೃಷ್ಟಿಯಾಗುತ್ತಿರುವ ಆಡಳಿತವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಸಾಧ್ಯವೇ ಎಂಬುದಕ್ಕೆ ಹಿಮಾಚಲಪ್ರದೇಶ ಹಾಗೂ ದೆಹಲಿ ಪಾಲಿಕೆ ಫಲಿತಾಂಶ ಉತ್ತರ ನೀಡುತ್ತವೆ.

    ಗುಜರಾತ್​ನಲ್ಲಿ ಪ್ರತಿಪಕ್ಷವೇ ಇಲ್ಲದಂತಾಗಿತ್ತು. ಅಹ್ಮದ್ ಪಟೇಲ್ ನಿಧನದ ನಂತರ ಅಲ್ಲಿ ಕಾಂಗ್ರೆಸ್​ಗೆ ಇದ್ದ ಏಕೈಕ ನಾಯಕ ಎಂದರೆ ಜಿಗ್ನೇಶ್ ಮೇವಾನಿ ಮಾತ್ರ. ಉಳಿದವರನ್ನು ಬಿಜೆಪಿ ಆಪರೇಷನ್ ಮಾಡಿತ್ತು. ಆದರೆ ಕರ್ನಾಟಕದ ಸ್ಥಿತಿ ಆ ರೀತಿಯಲ್ಲಿ ಇಲ್ಲ. ಅಲ್ಲಿಯಂತೆ ಇಲ್ಲಿ ಕಾಂಗ್ರೆಸ್ ದುರ್ಬಲವಾಗಿಲ್ಲ. ಹಿಮಾಚಲಪ್ರದೇಶದ ರೀತಿಯಲ್ಲಿಯೇ ನಾಯಕತ್ವ ಸಹ ಬಲವಾಗಿದೆ. ಆದ್ದರಿಂದ ಗುಜರಾತ್ ಗೆಲುವಿನಲ್ಲಿ ಬಿಜೆಪಿ ಮೈ ಮರೆಯುವಂತಿಲ್ಲ.

    ಕಾಂಗ್ರೆಸ್​ಗೆ ಗುಟುಕುನೀರು: ಗುಜರಾತ್​ನಲ್ಲಿ ಹೀನಾಯವಾಗಿ ಸೋತಿದ್ದರೂ ಹಿಮಾಚಲಪ್ರದೇಶದಲ್ಲಿ ಬಿಜೆಪಿ ವಿರುದ್ಧ ಗಳಿಸಿರುವ ಗೆಲುವು ಕಾಂಗ್ರೆಸ್ ಪಾಲಿಗೆ ಗುಟುಕುನೀರು ಸಿಕ್ಕಂತೆ ಆಗಿದೆ. ನಾಯಕತ್ವ ಬಲವಾಗಿದ್ದರೆ ಗೆಲ್ಲಬಹುದು ಎಂಬುದನ್ನು ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದೆ. ಗುಂಪುಗಾರಿಕೆ ಇದ್ದರೆ ಕಷ್ಟವಾಗಲಿದೆ. ಹಿಮಾಚಲಪ್ರದೇಶದಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ ಮೂಡದಂತೆ ನೋಡಿಕೊಂಡಿದ್ದರಿಂದಲೇ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಅದು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿಗೆ ಪಾಠವಾಗಬೇಕಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

    ರಾಜ್ಯದಲ್ಲಿಯೂ ಪ್ರಭಾವಿ ಮುಖಂಡರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಆರಂಭಿಸಿದೆ. ಕಾಂಗ್ರೆಸ್ ಗುಂಪುಗಾರಿಕೆಯಲ್ಲಿ ಮೈಮರೆತರೆ ಪ್ರಭಾವಿಗಳನ್ನು ಗುಜರಾತ್​ನಂತೆಯೇ ಕಳೆದುಕೊಳ್ಳಬೇಕಾಗುತ್ತದೆ. ಒಗ್ಗಟ್ಟಿನಿಂದ ಇದ್ದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಬಹುದು. ಇಲ್ಲದಿದ್ದರೆ ಕಷ್ಟದ ಸ್ಥಿತಿ ಎದುರಾಗುತ್ತದೆ.

    ಕಾಂಗ್ರೆಸ್​ಗೆ ಭಯ ತಂದ ಸಣ್ಣ ಪಕ್ಷಗಳು: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್, ಆಮ್ ಆದ್ಮಿ, ಓವೈಸಿಯ ಎಐಎಂಐಎಂ ಪಕ್ಷಗಳು ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಲಿವೆ. ಗುಜರಾತ್​ನಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್​ನ ಮತಬುಟ್ಟಿಯನ್ನು ಕಿತ್ತು ಕೊಂಡಿದೆ. ಆಮ್ ಆದ್ಮಿ ನಗರಪ್ರದೇಶಕ್ಕೆ ಸೀಮಿತ ಎಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿತ್ತು, ಆದರೆ ಆ ಭಾವನೆ ಈಗ ಕಳಚಿದೆ. ರಾಜ್ಯದಲ್ಲಿಯೂ ಆ ರೀತಿ ಆದರೆ ಎಂಬ ಭಯ ಮತ್ತು ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಇಷ್ಟು ದಿನ ಇದ್ದ ನಿರಾಳಭಾವವನ್ನು ಈ ಫಲಿತಾಂಶ ದೂರ ಮಾಡಿದೆ. ಹೆಚ್ಚು ಬೆವರು ಹರಿಸಬೇಕಾದ ಸ್ಥಿತಿ ನಿರ್ವಣವಾಗಿದೆ.

    ಜೆಡಿಎಸ್ ಸ್ಥಿತಿ: ಪ್ರಾದೇಶಿಕ ಪಕ್ಷ ಜೆಡಿಎಸ್ ಈಗಾಗಲೇ ಪಂಚರತ್ನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಚಾರ ಆರಂಭಿಸಿದೆ. ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಲ್ಲ. ಆದರೆ, ರಾಜ್ಯದಲ್ಲಿ ಜೆಡಿಎಸ್​ಗೆ ನೆಲೆ ಇದೆ. ಅಲ್ಲಿನ ಫಲಿತಾಂಶ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಪ್ರಭಾವಿಗಳು ಪಕ್ಷ ಬಿಡದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಅಷ್ಟೇ.

    ತೆಲಂಗಾಣ ಗುರಿ

    ಕರ್ನಾಟಕವನ್ನು ಗೆದ್ದು ನಂತರ ದಕ್ಷಿಣದಲ್ಲಿ ತೆಲಂಗಾಣ ರಾಜ್ಯವನ್ನು ಹಿಡಿಯಬೇಕೆಂದು ಬಿಜೆಪಿ ಯೋಜನೆ ರೂಪಿಸಿದೆ. ಅದಕ್ಕಾಗಿಯೇ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿದೆ. ಇಲ್ಲಿ ಗೆದ್ದರೆ ಮಾತ್ರ ದಕ್ಷಿಣದಲ್ಲಿ ವಿಜಯಯಾತ್ರೆ ಮುಂದುವರಿಸಬಹುದು ಎಂಬ ಕಾರಣಕ್ಕಾಗಿ ಈ ತಿಂಗಳ ಅಂತ್ಯದಿಂದಲೇ ಬಿಜೆಪಿ ವರಿಷ್ಠರು ರಾಜ್ಯದ ಕಡೆ ಬರಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts