More

    ಭಗವದ್ಗೀತೆ ಅಸ್ಮಿತೆಗೊಂದು ಸಂಹಿತೆ

    ಭಗವದ್ಗೀತೆ ಅಸ್ಮಿತೆಗೊಂದು ಸಂಹಿತೆನಮ್ಮ ಮಾತೃಭೂಮಿ ‘ಭಾರತ’ ಎಂಬುದರ ನೈಜ ಅರ್ಥವೇ ರೋಮಾಂಚಕಾರಿ. ಇದು ‘ಭಾರತ ಮಾತೆ’ ಅಷ್ಟೇ ಅಲ್ಲ, ಜ್ಞಾನದ ಬೀಡು! ಮಾನವಾಭ್ಯುದಯದ ಸುದೀರ್ಘ ಪಯಣದಲ್ಲಿ ದಿಕ್ಕು ತಪ್ಪುತ್ತಿದ್ದ ಮಾನವ ಸಂಕುಲಕ್ಕೆ ಸನ್ಮಾರ್ಗದೋರಿ, ಚಲನಾತ್ಮಕವಾದ ವಿಶ್ವವನ್ನು ‘ಜಗತ್’ ಎಂದೂ, ಕ್ರಿಯಾಶೀಲವಾದ್ದರಿಂದ ‘ಪ್ರಕೃತಿ’ ಎಂದೂ ಪರಿಚಯಿಸಿದ ಕೀರ್ತಿ ಭಾರತೀಯರದ್ದು. ಭಾವನೆಗಳ ಉದಾತ್ತೀಕರಣ ಮತ್ತು ಪವಿತ್ರೀಕರಣವೇ ಆಧ್ಯಾತ್ಮ ಎಂಬುದನ್ನು ಜಗತ್ತಿಗೆ ಮನಗಾಣಿಸಿ, ‘ಲೌಕಿಕ ಮತ್ತು ಪಾರಮಾರ್ಥಿಕ ಜೀವನಗಳನ್ನು ವಿರೋಧಿಗಳೆಂದು ಪ್ರತ್ಯೇಕಿಸಲಾಗದು, ಜೀವನವನ್ನು ಲೌಕಿಕ ಹಂತದಿಂದ ಆರಂಭಿಸಿ ಆಧ್ಯಾತ್ಮಿಕವಾಗಿ ರೂಪಿಸಿಕೊಳ್ಳುವುದೇ ಮಹೋನ್ನತವಾದ ವಿಕಾಸ’ ಎಂಬ ಲೋಕಶಿಕ್ಷಣ ಜಗತ್ತಿಗೆ ದೊರೆತದ್ದು ಭಾರತದಿಂದಾದ್ದರಿಂದ ಇದು ವಿಶ್ವಗುರು. ಈ ಮಹತ್ತರ ಹಾಗೂ ಗಹನ ವಿಚಾರಗಳನ್ನು ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯ ಇಂದು ವಿಶ್ವದ ಮುಂದಿದೆ. ಭಾರತೀಯರಿಗಂತೂ ತುರ್ತು ಅಗತ್ಯವೇ ಆಗಿದೆ.

    ಅನಾದಿಕಾಲದಿಂದಲೂ ಭಾರತವು ‘ಮನುಷ್ಯನಿರ್ವಣ ಧರ್ಮ ಮತ್ತು ಮನುಷ್ಯನಿರ್ವಣ ಶಿಕ್ಷಣ’ಕ್ಕೆ ಒತ್ತು ನೀಡುತ್ತಾ ಬಂದಿದೆ. ಪ್ರಸ್ಥಾನತ್ರಯಗಳೆಂದೇ ಪರಿಗಣಿತವಾದ ವೇದೋಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಸಹಸ್ರಾರು ವರ್ಷಗಳಿಂದ ಜ್ಞಾನದ ದೀವಟಿಕೆಯಾಗಿ ಬೆಳಕನ್ನೀಯುತ್ತಾ ಸಾಗಿವೆ. ಸನಾತನ ಹಿಂದೂಧರ್ಮವು ವ್ಯಕ್ತಿ ನಿರ್ವಿುತ ಅಥವಾ ವ್ಯಕ್ತಿ ಆಧಾರಿತ ಧರ್ಮವಾಗಿರದೇ ತತ್ತಾ್ವಧಾರಿತವಾಗಿರುವುದರಿಂದಲೇ ಇದಕ್ಕೆ ಚಿರಂಜೀವತ್ವವಿದೆ. ‘ಹಿಂದೂ ಧರ್ಮಕ್ಕೆ ಸಂಸ್ಥಾಪಕರಿದ್ದಾರೆಯೇ?’ ಎಂಬ ಅವಿವೇಕದ ಪ್ರಶ್ನೆಗೆ ‘ಗುರುತ್ವಾಕರ್ಷಕ ಬಲವನ್ನು ನ್ಯೂಟನ್ ಕಂಡುಹಿಡಿಯುವ ಮೊದಲು ಅದು ಇರಲಿಲ್ಲವೇ?’ ಎಂಬುದೇ ವಿವೇಕದ ಉತ್ತರ! ‘ಹಿಂದೂಧರ್ಮದಲ್ಲಿ ವಸಿಷ್ಠರು, ಯಾಜ್ಞವಲ್ಕ್ಯರು ಜನ್ಮವೆತ್ತಿದರೇ ಹೊರತು ಅವರುಗಳಿಂದ ಹಿಂದೂಧರ್ಮ ಜನ್ಮ ತಾಳಿದ್ದಲ್ಲ’ ಎಂಬ ಸ್ವಾಮಿ ವಿವೇಕಾನಂದರ ಮಾತು ಮನನಯೋಗ್ಯ.

    ವಿಖ್ಯಾತರು ಕಂಡಂತೆ: ಇತಿಹಾಸಜ್ಞ ವಿಲ್ ಡ್ಯೂರೆಂಟ್, ‘ಮಾನವ ಇತಿಹಾಸದಲ್ಲಿ ಸಾರ್ವಕಾಲಿಕವಾದ ಶ್ರೇಷ್ಠ ಕ್ರಾಂತಿ ಯಾವುದೆಂದರೆ ಮಾನವನ ಮನಸ್ಸನ್ನು ಶ್ರೇಷ್ಠ ವಿಚಾರಗಳಿಂದ ಉದಾತ್ತೀಕರಿಸುತ್ತಾ ಅವನ ಚಾರಿತ್ರ್ಯವೃದ್ಧಿಗೆ ಗಮನವೀಯುವ ಕಾರ್ಯ! ಜಗತ್ತಿನಲ್ಲಿ ಸಾರ್ವಕಾಲಿಕವಾಗಿ ಶ್ರೇಷ್ಠ ಕ್ರಾಂತಿಕಾರರೆಂದು ನಿರ್ಭಿಡೆಯಿಂದ ಹೆಸರಿಸಬಹುದಾದರೆ ಅವರು ತತ್ತ್ವಜ್ಞಾನಿಗಳು ಮತ್ತು ಸಂತರು. ಭಾರತದ ಚರಿತ್ರೆ ನಿರ್ವಣವಾಗುತ್ತಾ ಸಾಗಿದೆ, ಭಾರತೀಯ ನಾಗರಿಕತೆ ಸೃಜನಶೀಲತೆಯನ್ನು ಸಂರಕ್ಷಿಸಿಕೊಂಡು ಮುನ್ನಡೆದಿದೆ. ಆದ್ದರಿಂದ ಈಜಿಪ್ಟ್, ಬ್ಯಾಬಿಲೋನಿಯಾ ಅಥವಾ ಅಸ್ಸಿರಿಯಾದ ಚರಿತ್ರೆಗಳಿಗೆ ಪೂರ್ಣವಿರಾಮ ಹಾಕುವಂತೆ ಭಾರತದ ಚರಿತ್ರೆಗೆ ಹಾಕಲಾಗದು…’ ಎಂದಿದ್ದಾನೆ. ಜರ್ಮನ್ ಚಿಂತಕ ಪಾಲ್​ಡ್ಯೂಸನ್, ‘ಜಗತ್ತಿನ ಅತ್ಯಂತ ಪ್ರಾಚೀನ ಸ್ವತಂತ್ರ ಚಿಂತಕರೆನಿಸಿದ ಉಪನಿಷತ್ ಋಷಿಗಳು ಭಗವಂತನನ್ನು ಕಂಡುಕೊಳ್ಳುವುದರ ಮೂಲಕ ಶಾಶ್ವತ ಕೀರ್ತಿಗೆ ಪಾತ್ರರಾಗಿದ್ದಾರೆ. ವ್ಯಷ್ಟಿಯ ಅಂತರಾತ್ಮವು ಹಾಗೂ ಅನಂತ ಪ್ರಕೃತಿ ಮತ್ತದರ ಆವಿರ್ಭಾವಗಳ ಅಂತಃಸತ್ಯವಾದ ಬ್ರಹ್ಮವು ಒಂದೇ ಎಂಬುದನ್ನು ಗುರ್ತಿಸಿದರು’ ಎಂದಿದ್ದಾನೆ.

    ಅಮೆರಿಕಾದ ಪಾದ್ರಿ ರಾಬರ್ಟ್ ಅರ್ನೆಸ್ಟ್ ಹ್ಯೂಮ್ ಹೇಳುತ್ತಾರೆ: ‘ಉಪನಿಷತ್ತುಗಳ ಆನಂದಕರ ಮತ್ತು ಶ್ಲಾಘ್ಯ ಲಕ್ಷಣಗಳಲ್ಲಿ ಗಮನೀಯವಾದುದೆಂದರೆ ಸತ್ಯಾನ್ವೇಷಣೆಯ ಬಗ್ಗೆ ಅದು ತೋರುವ ಅತ್ಯುನ್ನತ ಶ್ರದ್ಧೆ…’. ಶ್ರೀಮದ್ರಾಮಾಯಣ ಮತ್ತು ಭಗವದ್ಗೀತೆಯನ್ನು ಸಂಸ್ಕರಿಸಿ ಪ್ರಕಟಿಸಿದ ಕೀರ್ತಿ ಜರ್ಮನಿಯ ಶೆಲೆಗಲ್ ಸೋದರರದ್ದು. ಇತಿಹಾಸದಲ್ಲಿ ಅಕ್ಷಮ್ಯ ಲೂಟಿಕೋರನೆಂದೇ ಕುಪ್ರಸಿದ್ಧನಾದ ಘಸ್ನಿ ಮಹಮದನೊಂದಿಗೆ ಭಾರತಕ್ಕೆ ಆಗಮಿಸಿದ್ದ ಆತನ ಸ್ನೇಹಿತ ಆಲ್​ಬರೂನಿ,‘ ಭಗವದ್ಗೀತೆ ನನ್ನ ಬದುಕಿಗೆ ಮಾನವೀಯ ಆಯಾಮವನ್ನು ಪರಿಚಯಿಸಿತು’ ಎಂದನಲ್ಲದೆ ಭಾರತೀಯ ಭಾಷೆ, ಸಂಸ್ಕೃತಿ, ಖಗೋಳಶಾಸ್ತ್ರ ಮತ್ತು ಸನಾತನ ಮೌಲ್ಯಗಳ ಅಧ್ಯಯನಗೈದು, ‘ಇಂಡಿಯಾ’ ಎಂಬ ಗ್ರಂಥ ರಚಿಸಿ, ಕೃತಜ್ಞತೆ ಸಲ್ಲಿಸಿದ್ದಾನೆ. ತತ್ತ್ವಜ್ಞಾನಿ ಶೊಪನ್ ಹೋವರ್, ‘ಹಿಂದೂಧರ್ಮವನ್ನಾಗಲಿ, ಬೌದ್ಧಧರ್ಮವನ್ನಾಗಲಿ ಕ್ರೈಸ್ತಧರ್ಮವು ತನ್ನ ಮತಪ್ರಚಾರಗಳಿಂದ ಸ್ಥಾನಪಲ್ಲಟ ಮಾಡುವುದು ಅಸಾಧ್ಯ. ವ್ಯತಿರಿಕ್ತವಾಗಿ ಸಂಸ್ಕೃತ ಭಾಷಾಧ್ಯಯನದಿಂದ ಮತ್ತು ಪ್ರಚಾರದಿಂದ ಹಿಂದೂಧರ್ಮಶಾಸ್ತ್ರಗಳು ಯೂರೋಪ್ ಖಂಡವನ್ನು ವೈಚಾರಿಕವಾಗಿ ಆಕ್ರಮಿಸಲು ಶಕ್ತವಾಗಿದೆ’ ಎಂದಿದ್ದಾರೆ.

    ಚಾರ್ಲ್ಸ್ ವಿಲ್ಕಿನ್ಸ್​ನ ಭಗವದ್ಗೀತಾ ಆಂಗ್ಲ ಭಾಷಾನುವಾದಕ್ಕೆ ಮುನ್ನುಡಿ ಬರೆಯುತ್ತಾ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್, ‘ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯವು ಅಳಿದು ಹೋದ ಬಹುಕಾಲದ ನಂತರವೂ ಮತ್ತು ಅದರ ಸಂಪತ್ತು, ಅಧಿಕಾರಿಗಳು ನೆನಪಿನಿಂದಲೂ ಅಳಿಸಿಹೋದ ನಂತರವೂ ಭಾರತೀಯ ದಾರ್ಶನಿಕರು ಮಾತ್ರ ನೆನಪಿನಲ್ಲುಳಿದಿರುತ್ತಾರೆ’ಎಂದಿದ್ದಾನೆ. ಸರ್ ಎಡ್ವಿನ್ ಆರ್ನಾಲ್ಡ್​ರ ‘ಸ್ವರ್ಗೀಯ ಗಾನ’ ಪ್ರಸಿದ್ಧಿ ಪಡೆದಿದೆ. ಎಮರ್​ಸನ್ ಥೋರೋ, ಇಲಿಯೆಟ್, ಹಕ್ಸಲೇ, ಹೇಯಿನ್, ಹರ್ಮನ್ ಹೆಸ್ಸೆ, ವಾಲ್ಟ್​ವಿಟ್ಮನ್ ಮೊದಲಾದವರು ಭಗವದ್ಗೀತೆಯಿಂದ ಪ್ರಭಾವಿತರಾದವರು. ಭಾರತದ ನೆಲದಲ್ಲಿ ಬಾಲಗಂಗಾಧರ ತಿಲಕರು ‘ಗೀತಾರಹಸ್ಯ’, ಅರವಿಂದರು ‘ಎಸ್ಸೇಸ್ ಆನ್ ಗೀತಾ’, ಎಂ.ಕೆ.ಗಾಂಧಿಯವರು ‘ಅನಾಸಕ್ತಿ ಯೋಗ’, ಸ್ವಾಮಿ ರಂಗನಾಥಾನಂದರು ‘The universal message of Bhagavadgita’ ಎಂಬ ಶೀರ್ಷಿಕೆಗಳಲ್ಲಿ ಗೀತಾಭಾಷ್ಯ ಬರೆದಿದ್ದಾರೆ. ಬೈಬಲ್ ಹೊರತುಪಡಿಸಿದರೆ ಪ್ರಪಂಚದಲ್ಲಿ ಅತ್ಯಧಿಕ ಪ್ರಸಾರವಾದ ಸದ್ಗ›ಂಥ ಭಗವದ್ಗೀತೆಯಾಗಿದ್ದು, ಭಾರತೀಯ ಮುಖ್ಯ ಭಾಷೆಗಳು ಮತ್ತು ವಿಶ್ವದ ಪ್ರಮುಖ ಭಾಷೆಗಳಲ್ಲಿ ಆರು ಸಾವಿರಕ್ಕೂ ಅಧಿಕ ಪ್ರಕಾರಗಳಲ್ಲಿ ಪ್ರಕಟವಾಗಿದೆ!

    ಅಗ್ರಸಂತ ಸ್ವಾಮಿ ವಿವೇಕಾನಂದರು, ‘ಭಗವದ್ಗೀತೆಯು ಉಪನಿಷತ್ತುಗಳ ಕುರಿತಾದ ವ್ಯಾಖ್ಯಾನ ಮತ್ತು ಇದು ಶೃತಿಗೆ ಸಮಾನ… ವೇದೋಪನಿಷತ್ತುಗಳಲ್ಲಿ ಅಡಕವಾಗಿದ್ದ ಸತ್ಯವನ್ನು ಹೊರತೆಗೆದು ಜನಸಾಮಾನ್ಯರಿಗೂ ಅವರಾಡುವ ಭಾಷೆಯಲ್ಲೇ ಬೋಧಿಸಿದ ಬುದ್ಧದೇವನು ಧಾರ್ವಿುಕ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ತಂದುಕೊಟ್ಟ, ವೇದಾಂತ ಪ್ರತಿಪಾದಿಸಿದ ಕರ್ಮಯೋಗದ ಆದರ್ಶವನ್ನಿತ್ತ ಸಮಾಜ ಸುಧಾರಕ…’ ಎಂದಿದ್ದಾರೆ.

    ಜಗತ್ತಿನ ಉತ್ಕೃಷ್ಟ ಬೋಧನೆಗಳು ದೇವಾಲಯ, ಗುಹೆ ಅಥವಾ ಅರಣ್ಯಗಳಿಂದ ಮೊಳಗಿದರೆ ಭಗವದ್ಗೀತೆ ವೀರಗುರುವಿನಿಂದ ವೀರಶಿಷ್ಯನಿಗೆ ಅನುಗ್ರಹಿತವಾದ ವೀರಸಂದೇಶವಾಗಿ ಕುರುಕ್ಷೇತ್ರದ ರಣರಂಗದಲ್ಲಿ ದೊರೆತು, ಯುದ್ಧಕ್ಷೇತ್ರವನ್ನೂ ಯೋಗಕ್ಷೇತ್ರವನ್ನಾಗಿಸಬಹುದೆಂದು ಸಾಬೀತುಪಡಿಸಿದೆ!

    ಡಿವಿಜಿಯವರು, ‘ಭಗವದ್ಗೀತೆಯನ್ನು ನಮ್ಮ ಪೂರ್ವಿಕರು ಮೋಕ್ಷಶಾಸ್ತ್ರ ಎಂದರೆಂಬುದು ಅದೆಷ್ಟು ಸತ್ಯವೋ, ಅದು ಜೀವಶಾಸ್ತ್ರವೂ ಆಗಿದೆ. ಜೀವನವನ್ನು ಗೌರವಿಸಿ ಕರ್ತವ್ಯ ನಿರ್ವಹಿಸಲು ಉತ್ಸಾಹ ತುಂಬುತ್ತದೆ, ಆಪತ್ಕಾಲದಲ್ಲಿ ಧೈರ್ಯ ನೀಡಿ, ಸಂಶಯಗಳಾವರಿಸಿದಾಗ ನೆಮ್ಮದಿಯನ್ನೀಯುವ ನಂಬಿಕೆಯನ್ನು ದಯಪಾಲಿಸುತ್ತದೆ’ ಎಂದಿದ್ದಾರೆ. ‘ಭಗವದ್ಗೀತೆಯು ಜೀವನಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ, ಯೋಗಶಾಸ್ತ್ರಗಳಲ್ಲದೇ ಆತ್ಮವಿದ್ಯೆ-ಬ್ರಹ್ಮವಿದ್ಯೆಯ ಬೆಳಕನ್ನು ಅನುಗ್ರಹಿಸುತ್ತದೆ… ನಿನ್ನ ದಿವ್ಯಸ್ವರೂಪವನ್ನು ತಿಳಿ, ನಿನ್ನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊ, ತಪ್ಪುಗಳೇನೂ ಶಾಶ್ವತವಲ್ಲ, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು, ಸತ್ಕರ್ಮಗೈಯುತ್ತಾ, ಸಹಮಾನವರೊಂದಿಗೆ ಆತ್ಮೀಯವಾಗಿ ಬದುಕು ಎನ್ನುತ್ತದೆ,’ ಎಂದಿದ್ದಾರೆ ಸ್ವಾಮಿ ಪುರುಷೋತ್ತಮಾನಂದರು.

    ಅಸ್ಮಿತೆಗೊಂದು ಸಂಹಿತೆ: ಜೀವನವನ್ನು ಯಜ್ಞಕ್ಕೆ ಹೋಲಿಸುತ್ತದೆ ಗೀತೆ. ಧರ್ವನುಷ್ಠಾನದಿಂದ ಜೀವಿಗಳ ಭೌತಿಕ ಅಭಿವೃದ್ಧಿ (ಅಭ್ಯುದಯ) ಮತ್ತು ಆಧ್ಯಾತ್ಮಿಕ ಔನ್ನತ್ಯ (ನಿಃಶ್ರೇಯಸ್ಸು) ಸಾಧಿಸಬಹುದೆಂದು ಮನವರಿಕೆ ಮಾಡಿಕೊಟ್ಟವರು ವಿಶ್ವಗುರು ಶ್ರೀಶಂಕರಾಚಾರ್ಯರು. ಇತಿಹಾಸದುದ್ದಕ್ಕೂ ಮಾನವನು ಒಂದಿಲ್ಲೊಂದು ವಿಧದ ಗುಲಾಮಗಿರಿಗೆ ತಲೆಬಾಗಿದ್ದಾನೆ. ದಾಸ್ಯಮುಕ್ತನಾಗಲು ಅವನು ಹೋರಾಡುತ್ತಿರುವುದು ವಾಸ್ತವವಾದರೂ ಯಂತ್ರಗಳ ಗುಲಾಮನಾಗುತ್ತಿರುವುದು ದುರಂತ. ಆಸೆಗಳು ಮತ್ತು ಅವಶ್ಯಕತೆಗಳ ನಡುವೆ ವ್ಯತ್ಯಾಸವರಿಯದ ಮಾನವನ ಪರಿಸ್ಥಿತಿ ‘Beggars cannot be choosers’ ಎಂಬಂತಾಗಿದೆ! ಆದರೆ ಗೀತೆಯು, ‘ಮನುಷ್ಯನು ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು. ತನ್ನನ್ನು ತಾನೇ ನಾಶಮಾಡಿಕೊಳ್ಳಬಾರದು. ತನಗೆ ತಾನೇ ಬಂಧು, ಎಚ್ಚರಗೆಟ್ಟರೆ ತನಗೆ ತಾನೇ ಶತ್ರು’ ಎಂದಿದೆ!

    ‘ಮನುಷ್ಯರೆಲ್ಲರೂ ಸಮಾನರು’ ಎಂಬ ವಿಚಾರವು ಅದೆಷ್ಟೇ ಉದಾತ್ತವಾಗಿದ್ದರೂ ವಾಸ್ತವದಲ್ಲಿ ಅದು ಸತ್ಯವಲ್ಲ. ಏಕೆಂದರೆ ಪ್ರತಿಯೊಬ್ಬರೂ ವಿಕಾಸದ ವಿವಿಧ ಹಂತಗಳಲ್ಲಿ ಸಾಗುತ್ತಿರುತ್ತಾರೆ. ಆದ್ದರಿಂದ ಸ್ವಧರ್ಮವನ್ನು ಗೌರವಿಸಬೇಕು. ವ್ಯಕ್ತಿವೈಶಿಷ್ಟ್ಯವೆಂದೇ ಪರಿಗಣಿತವಾದ ಸ್ವಭಾವಕ್ಕೆ ತಕ್ಕಂತೆ ನಾವು ಕರ್ಮದಿಂದ ಬದ್ಧರಾಗಿರುತ್ತೇವೆ. ಕರ್ಮ ಮಾಡಬೇಕು, ಆದರೆ ಕರ್ಮ ಮಾಡುವುದರಿಂದ ಚಿತ್ತಶುದ್ಧಿಯಾಗುತ್ತದೆಯೇ ಹೊರತು ಆತ್ಮವಸ್ತು ಲಭಿಸದು’ ಎಂದು ಗೀತಾಭಾಷ್ಯದಲ್ಲಿ ಶ್ರೀಶಂಕರಾಚಾರ್ಯರು ಹೇಳುತ್ತಾರೆ.

    ‘ದರೋಡೆಕೋರರು ಸಕಲಸಂಪತ್ತನ್ನು ಅಪಹರಿಸುವಂತೆ ಇಂದ್ರಿಯಗಳು ವಿಷಯಗಳ ಸಾನ್ನಿಧ್ಯದಲ್ಲಿ ಮನಸ್ಸನ್ನು ಅಪಹರಿಸುತ್ತವೆ. ಆದ್ದರಿಂದ ಇತರರನ್ನು ಗೆದ್ದವರು ಶಕ್ತಿಶಾಲಿ ಎನಿಸಬಹುದಾದರೂ ತನ್ನನ್ನೇ ಗೆದ್ದವನು ಸರ್ವಶಕ್ತ, ಅದುವೇ ನಿಜವಾದ ಸ್ವಾತಂತ್ರ್ಯ’ ಎಂದಿದೆ ಗೀತೆ.

    ‘ಪೌರುಷದಿಂದ ಪ್ರಯತ್ನ ಮಾಡದಿದ್ದರೆ ಎಂಥ ದೈವಬಲವೂ ನಮ್ಮ ತಮಸ್ಸನ್ನು ಹೋಗಲಾಡಿಸದು. ಕರ್ಮಫಲಕ್ಕೆ ಜೋತುಬೀಳದೆ, ಕರ್ತವ್ಯಬುದ್ಧಿಯಿಂದ, ಸ್ವಧರ್ಮವನ್ನು ನಿಷ್ಠೆಯಿಂದ ಪರಿಗ್ರಹಿಸಿ ಕರ್ಮ ಮಾಡಿದಾಗಷ್ಟೇ ಅದು ನಿಷ್ಕಾಮ ಕರ್ಮವೆನಿಸುತ್ತದೆ. ಹತ್ತಾರು ನದಿಗಳ ಪ್ರವೇಶದಿಂದಾಗ್ಯೂ ಸಮುದ್ರವು ತನ್ನ ಅಚಲ ಸ್ವಭಾವದಿಂದ ವಿಮುಖವಾಗದು. ಅಂತೆಯೇ ಸ್ವಇಚ್ಛೆಯನ್ನು ದೂರವಿರಿಸಿ, ಭಗವದರ್ಪಣಭಾವದಿಂದ ಕರ್ತವ್ಯಗೈದಾಗಷ್ಟೇ ನಾವು ಆಸಕ್ತಿಗಳ ಮತ್ತು ಬಂಧನಗಳ ನಿಯಂತ್ರಣಕ್ಕೆ ಸಿಗುವುದಿಲ್ಲ.’ ‘ಬಿತ್ತಿದ ಬೀಜವು ಭೂಮಿಯಲ್ಲಿ ಸುರಕ್ಷಿತವಾದರೂ ಅದು ಭೂಮಿಯನ್ನು ಬಿರಿದು ಸಸಿಯಾಗಿ, ಗಿಡವಾಗಿ ಮತ್ತು ಹೆಮ್ಮರವಾಗಿ ಸಾಗಬೇಕು. ಅಂತೆಯೇ ಮಾನವನು ಮನೆ ಮತ್ತು ಕೌಟುಂಬಿಕ ಪರಿಸರಗಳ ಮೂಲಕ ಹಾದುಹೋಗಿ ವಿಶ್ವಕುಟುಂಬಿಯಾಗಿ ವಿಕಸನ ಹೊಂದಬೇಕು. ಅರ್ಥಾತ್ ನಿಕೇತನನು ಅನಿಕೇತನನಾಗಬೇಕು’ ಎಂದಿದೆ ಗೀತೆ.

    ‘ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಮತ್ತೊಂದಿಲ್ಲ. ಶ್ರದ್ಧಾವಂತನೂ, ಜ್ಞಾನನಿಷ್ಠನೂ, ಜಿತೇಂದ್ರಿಯನಾದವನು ಜ್ಞಾನವನ್ನು ಹೊಂದಿ ಪರಮಶಾಂತಿಯನ್ನು ತನ್ನದಾಗಿಸಿಕೊಳ್ಳುತ್ತಾನೆ.’

    ವರ್ಣ ವ್ಯವಸ್ಥೆ: ಗೀತೆ ಹೇಳುತ್ತದೆ-‘ತನ್ನ ತನ್ನ ಕರ್ಮದಲ್ಲಿ ತೊಡಗಿರುವ ಮಾನವನು ಅದರಲ್ಲೇ ಸಿದ್ಧಿ ಪಡೆಯುತ್ತಾನೆ.’ ಸಂಗೀತ ಕಾರ್ಯಕ್ರಮದ ಯಶಸ್ಸಿಗೆ ಗಾಯಕನಷ್ಟೇ ತಂತಿವಾದ್ಯವಾದಕರು, ಮೃದಂಗವಾದಕರು ಹಾಗೂ ತಾಳ ಹಾಕುವವವರ ಶ್ರಮವೂ ಮುಖ್ಯ. ವೇದವ್ಯಾಸ, ವಾಲ್ಮೀಕಿ, ವಿದುರ, ಗುಹ, ಶಬರಿ, ಇವರುಗಳಿಂದು ಪ್ರಾತಃಸ್ಮರಣೀಯರಾಗಿರುವುದು ಜಾತಿಯಿಂದಲ್ಲ.

    ‘ಚಾತುರ್ವರ್ಣಗಳು ಅವರುಗಳು ನಿರ್ವಹಿಸುವ ಕೆಲಸಕಾರ್ಯಗಳ ಮತ್ತು ಸ್ವಭಾವಗಳಿಗೆ ಅನುಗುಣವಾಗಿಯೇ ವಿಭಾಗಿಸಲ್ಪಟ್ಟಿವೆ. ವರ್ಣ ಹಾಗೂ ಜಾತಿ ಬೇರೆ ಬೇರೆ,’ ಎಂದಿದೆ ಗೀತೆ. ಗಮನಿಸಬೇಕಾದ್ದೆಂದರೆ, ‘ಯಾರೂ ಕೇವಲ ಜಾತಿಯಿಂದಷ್ಟೇ ದೊಡ್ಡವರಾಗುವುದಿಲ್ಲ; ದೊಡ್ಡವರಾದವರ ಜಾತಿಯನ್ನು ಹುಡುಕುವ ಕೀಳು ಗೋಜು ನಮ್ಮದಾಗದಿರಲಿ.’ ‘ಸತ್ಯ, ದಾನ, ಕ್ಷಮಾಗುಣ, ಚಾರಿತ್ರ್ಯ, ದಯೆ, ತಪಸ್ಸು ಮತ್ತು ತಿರಸ್ಕಾರಭಾವವಿಲ್ಲದಿರುವುದು ‰ ಈ ಗುಣಗಳನ್ನು ಹೊಂದಿದವನು ಬ್ರಾಹ್ಮಣ’ ಎಂದಿದ್ದಾನೆ ಯುಧಿಷ್ಠಿರ. ‘ಸತ್ತ ಪ್ರಾಣಿಗಳ ಶರೀರ ಮುಟ್ಟುವುದು ಅಸಹ್ಯ ಎನಿಸುತ್ತದೆ. ಆದರೆ ಹದಗೊಂಡ ಪ್ರಾಣಿಗಳ ಚರ್ಮವು ಗರ್ಭಗುಡಿಗೂ ಪ್ರವೇಶ ಪಡೆಯುತ್ತದೆ ಎಂದಿದ್ದಾರೆ’ ಶ್ರೀರಾಮಕೃಷ್ಣರು.

    ವಿವೇಕವಾಣಿ: ಭಾರತದ ಮೇಲೆ ದಾಳಿ ನಡೆಸಿದ ದರೋಡೆಕೋರರು ನಮ್ಮ ಪುರಾತನ ವಿಶ್ವವಿದ್ಯಾಲಯಗಳ ಅತ್ಯಮೂಲ್ಯ ಗ್ರಂಥಾಲಯಗಳನ್ನು ಸುಟ್ಟು ಅಸುರೀ ಪ್ರವೃತ್ತಿಗೆ ಸಾಕ್ಷಿಯಾದರು. ಅಂದಿನಿಂದ ಇಂದಿನವರೆಗೆ ಈ ಪುಸ್ತಕ ಸುಡುವ ವಿಕೃತ ನಡವಳಿಕೆಗಳು ಮುಂದುವರಿದಿದೆ. ಆಂಗ್ಲ ಸಾಹಿತ್ಯದಲ್ಲಿ ಮಹಾಕಾವ್ಯವೆಂದೇ ಪರಿಗಣಿತವಾದ ‘ಪ್ಯಾರಡೈಸ್ ಲಾಸ್ಟ್’ ಕೃತಿಕರ್ತೃ ಜಾನ್​ವಿುಲ್ಟನ್ ಹೇಳುತ್ತಾನೆ: ‘ಮನುಷ್ಯನನ್ನು ಕೊಂದರೆ ಅದೊಂದು ವಿಚಾರವಂತ ಪ್ರಾಣಿಯ ಅಥವಾ ದೇವರ ಪ್ರತಿರೂಪವನ್ನು ಕೊಂದಂತೆ. ಆದರೆ ಉತ್ತಮ ಗ್ರಂಥವೊಂದನ್ನು ನಾಶಮಾಡುವುದೆಂದರೆ ಬೆಲೆಕಟ್ಟಲಾರದ ವಿಚಾರವನ್ನೇ ಕೊಂದಂತೆ!’ ಫ್ರೆಂಚ್ ಕ್ರಾ›ಂತಿಯ ಕಾರಣೀಪುರುಷ ವಾಲ್ಟೇರ್ ಹೇಳುತ್ತಾನೆ: ‘ಪುಸ್ತಕಗಳು ಪ್ರಪಂಚವನ್ನು ಆಳುತ್ತವೆ.’

    Knowledge Mansion ಎಂದೇ ಗುರ್ತಿಸಲ್ಪಟ್ಟ ಶ್ರೀಮದ್ಭಗವದ್ಗೀತೆಯ ಅಧ್ಯಯನವು ಎಷ್ಟು ಮುಖ್ಯ ಎಂದು ಸ್ವಾಮಿ ರಂಗನಾಥಾನಂದರು ವಿವರಿಸುತ್ತಾರೆ: ‘ಗಾಢವಾದ ಪ್ರಾಯೋಗಿಕತೆಯನ್ನು ತನ್ನೊಡಲಲ್ಲಿ ಹುದುಗಿಟ್ಟುಕೊಂಡಿರುವ ಭಗವದ್ಗೀತೆಯನ್ನು ಭಾರತೀಯರು ಪೂರ್ವಾಗ್ರಹವಿಲ್ಲದೆ ಅಧ್ಯಯನ ಮಾಡಿದ್ದಿದ್ದರೆ ನಮ್ಮ ಮೇಲೆ ಅನ್ಯದೇಶದವರ ಆಕ್ರಮಣ ಆಗುತ್ತಿರಲಿಲ್ಲ. ದೇಶದೊಳಗಿನ ಜಾತಿಕಲಹಗಳು ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲ. ಊಳಿಗಮಾನ್ಯ ಪದ್ಧತಿಯ ಶೋಷಣೆ ಮತ್ತು ಬಹುಸಂಖ್ಯಾತರ ಬಡತನಕ್ಕೆ ಅವಕಾಶವೇ ಇರುತ್ತಿರಲಿಲ್ಲ…!’ ಪೂಜ್ಯರ ಮಾತನ್ನು ಯೋಚಿಸಿ ನೋಡಿ…

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts