More

    ಮಣಿಂದರ್ ಮಿಂಚಿನಾಟ, ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್‌ಗೆ ಗೆಲುವು

    ಬೆಂಗಳೂರು: ನಾಯಕ ಮಣಿಂದರ್ ಸಿಂಗ್ (16) ನಡೆಸಿದ 11 ಯಶಸ್ವಿ ರೈಡಿಂಗ್ ಹಾಗೂ ಡಿೆಂಡರ್ ಶುಭಂ ಶಿಂಧೆ (11) ಭರ್ಜರಿ ಟ್ಯಾಕಲ್‌ಗಳ ನೆರವಿನಿಂದ ಬೆಂಗಾಲ್ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ 48-38 ಅಂಗಳ ಅಂತರದಿಂದ ತಮಿಳ್ ತಲೈವಾಸ್ ಎದುರು ಭರ್ಜರಿ ಗೆಲುವು ದಾಖಲಿಸಿದೆ.

    ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಚರಣದ ಭಾನುವಾರದ ಮೊದಲ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ಬೆಂಗಾಲ್ ವಾರಿಯರ್ಸ್‌ ಬಳಿಕ ಸಂಘಟಿತ ಪ್ರದರ್ಶನ ಮೂಲಕ ತಿರುಗೇಟು ನೀಡಿತು. ರೈಡರ್ ನರೇಂದರ್ (13) ನಿರ್ವಹಣೆಯಿಂದ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ ತಮಿಳ್ ತಲೈವಾಸ್, ಮೊದಲ 20 ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡವನ್ನು ಎರಡು ಬಾರಿ ಆಲೌಟ್ ಬಲೆಗೆ ಕೆಡವಿ 27-21 ಅಂಕಗಳ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ತಮಿಳ್ ತಲೈವಾಸ್ ತಂಡವನ್ನು 2 ಬಾರಿ ಆಲೌಟ್ ಮಾಡಿದ ಬೆಂಗಾಲ್ ವಾರಿಯರ್ಸ್‌ ತಂಡ ರೋಚಕ ಗೆಲುವು ಕಂಡಿತು.

    3ನೇ ನಿಮಿಷದಲ್ಲಿ ನರೇಂದರ್ ಅವರನ್ನು ಟ್ಯಾಕಲ್ ಮಾಡಿದ ಬೆಂಗಾಲ್ 6-3ರ ಮುನ್ನಡೆ ಸಾಧಿಸಿತು. ಇದರಿಂದ ತಲೈವಾಸ್ ಮೇಲೆ ಒತ್ತಡ ಹೇರಿದ ವಾರಿಯರ್ಸ್‌, ಆಲೌಟ್ ಅಂಕದ ಜತೆಗೆ 7ನೇ ನಿಮಿಷದಲ್ಲಿ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿತು. ಆದಾಗ್ಯೂ, ನರೇಂದರ್, ಶ್ರೀಕಾಂತ್ ಜಾಧವ್ ಅವರನ್ನು ಟ್ಯಾಕಲ್ ಮಾಡಿದರೆ, ನಿತಿನ್ ಸಿಂಗ್ ರೇಡ್ ಮೂಲಕ ಗಮನ ಸೆಳೆದು ಎರಡೂ ತಂಡಗಳ ನಡುವಿನ ಅಂತರವನ್ನು ತಗ್ಗಿಸಿದರು. ನರೇಂದರ್ ಮಿಂಚುವುದನ್ನು ಮುಂದುವರಿಸಿದ ಪರಿಣಾಮ ತಲೈವಾಸ್ ತಂಡವು ಎದುರಾಳಿ ವಾರಿಯರ್ಸ್‌ ತಂಡದ ಸದಸ್ಯರನ್ನು ಇಬ್ಬರಿಗೆ ಇಳಿಸಿತು.

    13ನೇ ನಿಮಿಷದಲ್ಲಿ ಬೆಂಗಾಲ್ ತಂಡವನ್ನು ಆಲೌಟ್ ಮಾಡಿದ ವಾರಿಯರ್ಸ್‌ ಹಿನ್ನಡೆಯನ್ನು 15-16ಕ್ಕೆ ತಗ್ಗಿಸಿತು. ಆದರೆ 15ನೇ ನಿಮಿಷದಲ್ಲಿ ತಲೈವಾಸ್ 18-17ರ ಮುನ್ನಡೆ ಸಾಧಿಸುವಲ್ಲಿ ತಲೈವಾಸ್ ಆಟಗಾರರು ಯಶಸ್ವಿಯಾದರು. ವಿರಾಮದ ಮೊದಲು ತಲೈವಾಸ್ ಮತ್ತೊಂದು ಆಲ್ ಔಟ್ ಮಾಡಿ 27-21ರಲ್ಲಿ ಉತ್ತಮ ಮುನ್ನಡೆ ಸಾಧಿಸುವವರೆಗೂ ಎರಡೂ ತಂಡಗಳು ಮುನ್ನಡೆಗಾಗಿ ಪ್ರಬಲ ಪೈಪೋಟಿ ನಡೆಸಿದವು.

    ದ್ವಿತೀಯಾರ್ಧದ ಆರಂಭದ ನಿಮಿಷಗಳಲ್ಲಿ ತಲೈವಾಸ್ ಮತ್ತು ವಾರಿಯರ್ಸ್‌ ತಂಡ ರಕ್ಷಣಾತ್ಮಕ ಆಟ ಪ್ರದರ್ಶಿಸಿತು. ಆದಾಗ್ಯೂ ತಮಿಳುನಾಡು 29-23 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ಮಣಿಂದರ್ ಸಿಂಗ್ ಸೂಪರ್ ರೈಡ್ ಮೂಲಕ ತಮ್ಮ ತಂಡಕ್ಕೆ ಅಂತರವನ್ನು 26-29ಕ್ಕೆ ಇಳಿಸಲು ಸಹಾಯ ಮಾಡಿದರು. 29ನೇ ನಿಮಿಷದಲ್ಲಿ ತಲೈವಾಸ್ ತಂಡದ ಅಂಗಳವನ್ನು ಖಾಲಿ ಮಾಡಿಸಿದ ವಾರಿಯರ್ಸ್ 31-29ರ ಮತ್ತೆ ಮುನ್ನಡೆ ಕಂಡುಕೊಂಡಿತು.
    35ನೇ ನಿಮಿಷದಲ್ಲಿ ಮಣಿಂದರ್ ಸಿಂಗ್ ರೇಡ್ ಮೂಲಕ ತಂಡಕ್ಕೆ ಅಂಕ ತಂದರಲ್ಲದೆ, ಎದುರಾಳಿಯನ್ನು ಮತ್ತೊಮ್ಮೆ ಆಲೌಟ್ ಮಾಡಲು ನೆರವಾದರು. ಹೀಗಾಗಿ ವಾರಿಯರ್ಸ್‌ 41-33ರಲ್ಲಿ ಮುನ್ನಡೆ ಸಾಧಿಸಿತು. ನಂತರ, ಬಂಗಾಳ ತಂಡವು ಪಂದ್ಯದ ಉಳಿದ ಅವಧಿಯವರೆಗೂ ಮುನ್ನಡೆಯಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಂಡಿತು ಮತ್ತು ಅಂತಿಮವಾಗಿ 10 ಅಂಕಗಳ ವಿಜಯವನ್ನು ಸಾಧಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts