More

    ವೈವಿಧ್ಯಮಯ ಆಚರಣೆಗಳ ಸೊಬಗು

    medhaಮೇಧಾ ಪ್ರಹ್ಲಾದಾಚಾರ್ಯ ಜೋಶಿ
    ಆಶ್ವಯುಜ ಮಾಸದ ನಿಯಾಮಕನು ಯಜ್ಞಾ-ಪದ್ಮನಾಭ. ಆಶ್ವಿಜಮಾಸದ ಶುಕ್ಲಪ್ರತಿಪತ್​ನಿಂದ ನವಮಿಯವರೆಗೂ ನವರಾತ್ರಿ ಉತ್ಸವವಿರುತ್ತದೆ. ಈ ನವರಾತ್ರಿಯ ಒಂದೊಂದು ದಿನವು ಒಂದೊಂದು ವಿಶೇಷ ಆಚರಣೆಗಳಿಂದ ಕೂಡಿದೆ. ಈ ಒಂಬತ್ತು ದಿನಗಳಲ್ಲಿ ವಿಶೇಷ ದೀಪಾರಾಧನೆ, ಘಟ್ಟಸ್ಥಾಪನೆ, ಶ್ರೀನಿವಾಸನ ಪೂಜೆ, ಶ್ರೀವೇದವ್ಯಾಸ ಹಾಗೂ ಸರಸ್ವತಿಪೂಜೆ, ದುರ್ಗಾಪೂಜೆ, ವೆಂಕಟೇಶಮಾಹಾತ್ಮೆ್ಯ ಪಾರಾಯಣ ಹಾಗೂ ಶ್ರವಣ. ಹೀಗೆ ನವರಾತ್ರೋತ್ಸವದಲ್ಲಿ ಅನೇಕ ಪೂಜೆ, ಆಚರಣೆಗಳು ನಡೆಯುತ್ತವೆ. ಈ ಕುರಿತ ಮಾಹಿತಿ ಇಲ್ಲಿದೆ.

    ಶ್ರೀನಿವಾಸದೇವರ ನವರಾತ್ರಿ: ತಿರುಪತಿ ಶ್ರೀನಿವಾಸದೇವರು ಕುಲದೈವನಾಗಿರುವವರ ಮನೆಗಳಲ್ಲಿ ವೆಂಕಟೇಶದೇವರ ನವರಾತ್ರಿ ಇರುತ್ತದೆ. ನಿತ್ಯದಲ್ಲಿಯೂ ಶ್ರೀಭೂಸಹಿತ ಶ್ರೀವೆಂಕಟೇಶದೇವರ ಪೂಜೆ ನಡೆಯುತ್ತದೆ. ಬೇಳೆ ಹೂರಣದಿಂದ ವೆಂಕಟೇಶದೇವರಿಗೆ ಆರತಿ, ನೈವೇದ್ಯಗಳು ಒಂಬತ್ತುದಿನ ನಡೆಯುತ್ತವೆ. ಮನೆಯ ಹಿರಿಯ ಪುರುಷರು ಅಥವಾ ಉಪನೀತ ಬಾಲಕರು ಒಂಬತ್ತುದಿನವೂ ಮನೆ-ಮನೆಗಳಿಗೆ ಗೋಪಾಳಕ್ಕೆ ಹೋಗುವ ಪದ್ಧತಿಯೂ ಇದೆ. ವೈಶಾಖಶುದ್ಧ ದಶಮೀ ದಿನದಂದು ಶ್ರೀನಿವಾಸನು ಶ್ರೀಪದ್ಮಾವತಿಯನ್ನು ವಿವಾಹವಾದನು. ವಿವಾಹದ ನಂತರದಲ್ಲಿ ನೂತನ ದಂಪತಿ ಆರು ತಿಂಗಳವರೆಗೂ ಬೆಟ್ಟವನ್ನು ಹತ್ತಲಿಲ್ಲ. ವೈಶಾಖದಿಂದ ಆಶ್ವಯುಜ ಮಾಸದವರೆಗೆ ಅಲ್ಲಲ್ಲಿ ವಿಹರಿಸಿ ನಂತರ ಆಶ್ವಯುಜದಲ್ಲಿ ಬೆಟ್ಟವನ್ನು ಹತ್ತುತ್ತಾರೆ. ಹೀಗೆ ವಿವಾಹದ ಆರುತಿಂಗಳ ನಂತರ ಬೆಟ್ಟಕ್ಕೆ ಆಗಮಿಸಿದ ಶ್ರೀನಿವಾಸ-ಪದ್ಮಾವತಿಯರನ್ನು ಬ್ರಹ್ಮದೇವರು ವೈಭವದಿಂದ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಿಂದ ಸ್ವಾಗತಿಸಿದರು. ಇದೇ ‘ಬ್ರಹ್ಮೋತ್ಸವ’ ಎಂದು ಪ್ರಸಿದ್ಧವಾಗಿದೆ. ಶ್ರೀನಿವಾಸ ಕಲ್ಯಾಣ ಪಾರಾಯಣ ಹಾಗೂ ಪ್ರವಚನಗಳನ್ನು ಮಾಡುವುದು ವಿಶೇಷವಾಗಿ ಕಲ್ಯಾಣಪ್ರದವಾಗಿದೆ.

    ಶರನ್ನವರಾತ್ರಿ: ಈ ಒಂಬತ್ತು ದಿನಗಳಲ್ಲಿ ದೇವಿಯ ಪೂಜೆ ಬಹಳ ಮಹತ್ತ ್ವನ್ನು ಪಡೆದಿದೆ. ಈ ಶರದೃತುವಿನಲ್ಲಿ ದೇವಿಯ ಪೂಜೆಯನ್ನು ಮಾಡಿದವನಿಗೆ ಎಲ್ಲ ಶೋಕಗಳು, ಕಷ್ಟಗಳು ಪರಿಹಾರವಾಗುತ್ತವೆ. ಶತ್ರುಬಾಧೆ ನಿವಾರಣೆಯಾಗುತ್ತದೆ. ದುರ್ಗಾದೇವಿಯನ್ನು ಮೊದಲ ಮೂರು ದಿನಗಳಲ್ಲಿ ಮಹಾಕಾಳಿ ಎಂದು, ಮಧ್ಯದ ಮೂರುದಿನಗಳಲ್ಲಿ ಮಹಿಷಾಸುರನನ್ನು ಸಂಹರಿಸಿದ ಮಹಾಲಕ್ಷ್ಮೀ ಎಂಬ ಅನುಸಂಧಾನದಿಂದಲೂ, ಕೊನೆಯ ಮೂರುದಿನಗಳಲ್ಲಿ ಬ್ರಹ್ಮಜ್ಞಾನಪ್ರಚೋದಕಳಾದ, ಜ್ಞಾನಪ್ರಚಾರದ ಕಾರ್ಯವನ್ನು ಮಾಡುವ ಮತ್ತು ಮಾಡಿಸುವ ಸರಸ್ವತೀದೇವಿಯನ್ನು ಪೂಜಿಸುವ ಸಂಪ್ರದಾಯವಿದೆ.

    ಕುಮಾರಿಕಾಪೂಜೆ: ನವರಾತ್ರಿಯಲ್ಲಿ ಪ್ರತಿನಿತ್ಯವೂ ಕುಮಾರಿಯರ ಪೂಜೆಯನ್ನು ಮಾಡುತ್ತಾರೆ. ಕುಮಾರಿಯರು ಎಂದರೆ ಎರಡು ವರ್ಷದಿಂದ ಹತ್ತು ವರುಷದವರೆಗಿನ ಬಾಲಕಿಯರು. ಕುಮಾರಿ, ತ್ರಿಮೂರ್ತಿನೀ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಭದ್ರಾ ಎಂದು ಒಂಬತ್ತು ದುರ್ಗೆಯ ರೂಪಗಳನ್ನು ಕುಮಾರಿಯರಲ್ಲಿ ಆವಾಹಿಸಿ ಪೂಜಿಸುತ್ತಾರೆ.

    ತ್ರೇತಾಯುಗದಲ್ಲಿನ ಗೆಲುವು: ಸೀತಾಮಾತೆಯನ್ನು ರಾವಣನ ಲಂಕೆಯಿಂದ ಬಿಡಿಸಿಕೊಂಡು ಬರಲು ನಡೆದ ಘೊರಯುದ್ಧದಲ್ಲಿ ಶ್ರೀರಾಮಚಂದ್ರನು ಇದೇ ದಶಮಿಯಂದು ರಾವಣನನ್ನು ಸಂಹರಿಸುತ್ತಾನೆ. ಕಾಮುಕನ ಮೇಲೆ ಮರ್ಯಾದಾ ಪುರುಷೋತ್ತಮನ ಜಯವನ್ನು ಬಿಂಬಿಸುವುದೇ ವಿಜಯದಶಮಿ. ಶ್ರೀರಾಮಚಂದ್ರನ ವಿಜಯದ ದ್ಯೋತಕವಾಗಿ ಇಂದಿಗೂ ಎಲ್ಲೆಡೆ ವಿಜಯದಶಮಿಯಂದು ರಾವಣನ ಪ್ರತಿಕೃತಿಯನ್ನು ದಹಿಸುತ್ತಾರೆ. ದಶಶಿರನನ್ನು ರಾಮನು ಸಂಹರಿಸಿದ ದಿನ ದಶ-ಹರ ಅಥವಾ ದಸರಾ ಎಂದು ಕರೆಯಲ್ಪಟ್ಟಿತು.

    ಬನ್ನಿ ವಿನಿಮಯ: ಪಾಂಡವರು ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸವನ್ನು ಮುಗಿಸಿ ನವಮಿ ದಿನ ತಮ್ಮ ಶಸ್ತ್ರಗಳನ್ನೆಲ್ಲ ಶಮೀವೃಕ್ಷದಿಂದ ಇಳಿಸಿಕೊಂಡು, ದಶಮಿಯ ದಿನ ವನವಾಸಾಂತ್ಯಗೊಳಿಸಿ ಮರಳಿದರು. ದುರ್ಯೋಧನಾದಿಗಳು ವಿರಾಟ್ ರಾಜನ ಗೋವುಗಳನ್ನು ಕಟ್ಟಿಹಾಕಿದ್ದರು. ಪಾಂಡವರು ದುರ್ಯೋಧನಾದಿಗಳನ್ನು ಜಯಿಸಿ ಗೋವುಗಳನ್ನು ಬಿಡಿಸಿ ವಿರಾಟ್ ರಾಜನಿಗೆ ಮರಳಿಸಿದರು. ಅಂದಿನ ದಿನವೇ ವಿಜಯದಶಮಿ ಎಂದು ಆಚರಿಸಲಾಗುತ್ತಿದೆ. ಹೀಗೆ ಇದು ಶ್ರೀಕೃಷ್ಣನ ಪ್ರಿಯರಾದ ಪಾಂಡವರ ವಿಜಯದ ದಿನ. ಅಂದಿನ ದಿನ ಶಮೀವೃಕ್ಷದ ಅಂತರ್ಯಾಮಿಯಾದ ಶ್ರೀಲಕ್ಷಿ ್ಮನರಸಿಂಹದೇವರನ್ನು ಪೂಜಿಸಬೇಕು. ಗುರುಹಿರಿಯರಿಗೆ ಬನ್ನಿಯ ಪತ್ರಗಳನ್ನು ಸಮರ್ಪಿಸಿ ಆಶೀರ್ವಾದ ಪಡೆಯಬೇಕು. ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಳ್ಳಬೇಕು.

    ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ|
    ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ||

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts