More

    ಆಕರ್ಷಿಸಲಿದೆ ‘ದಸರಾ ಕಿಶೋರಿ’ ಕಾಳಗ


    ಅವಿನಾಶ್ ಜೈನಹಳ್ಳಿ ಮೈಸೂರು
    ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ‘ದಸರಾ ಕಿಶೋರಿ’ ಕಾಳಗ ಆಕರ್ಷಿಸಲಿದೆ..!
    ದಸರಾ ಕುಸ್ತಿ ಪಂದ್ಯಾವಳಿಗಳು ಸೆ.26 ರಿಂದ ಅ.1ರವರೆಗೆ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕುಸ್ತಿ ಪ್ರೇಮಿಗಳಿಗೆ ರೋಚಕ ಅನುಭವ ನೀಡಲಿದೆ.


    ಮಹಿಳಾ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ 2019 ರಂತೆಯೇ ಈ ಬಾರಿಯೂ ‘ದಸರಾ ಕಿಶೋರಿ’ ಪ್ರಶಸ್ತಿ ನೀಡಲು ದಸರಾ ಕುಸ್ತಿ ಉಪ ಸಮಿತಿ ಮುಂದಾಗಿದೆ. ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಗೆಲ್ಲುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಬೆಳ್ಳಿ ಗದೆ, ನಗದು ಬಹುಮಾನ, ಪೇಟ ಮತ್ತು ಪ್ರಶಸ್ತಿಪತ್ರ ನೀಡಲು ಚಿಂತಿಸಲಾಗಿದೆ.
    ‘ದಸರಾ ಕಿಶೋರಿ’ ಜತೆಗೆ ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಗಳ ಕುಸ್ತಿಯೂ ಇರಲಿದೆ. ಈ ಪೈಕಿ ಯಾವ ವಿಭಾಗದ ಕುಸ್ತಿಗೆ ಯಾವ ಪ್ರಶಸ್ತಿ ನೀಡಬೇಕು ಎಂಬುದು ಇನ್ನೂ ನಿಗದಿಯಾಗಿಲ್ಲ.


    ಆದರೆ ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಭಾಗದಲ್ಲಿ ‘ದಸರಾ ಕುಮಾರ’, ರಾಜ್ಯ ಮಟ್ಟದ ವಿವಿಧ ವಿಭಾಗದ ಕುಸ್ತಿ ಗೆಲ್ಲುವವರಿಗೆ ಪ್ರತಿಷ್ಠಿತ ‘ದಸರಾ ಕಂಠೀರವ’, ಮತ್ತು ‘ದಸರಾ ಕೇಸರಿ’ ಪ್ರಶಸ್ತಿ ನೀಡಲು ಚರ್ಚಿಸಲಾಗುತ್ತಿದೆ.
    ನಾಡಕುಸ್ತಿ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯ ಮಟ್ಟದ ಪುರುಷರ ಗ್ರೀಕೋ ರೋಮನ್ ಕುಸ್ತಿ, ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ, ರಾಜ್ಯ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿಗಳನ್ನು ಆಯೋಜಿಸಲು ಕುಸ್ತಿ ಉಪ ಸಮಿತಿ ಹಾಗೂ ಕ್ರೀಡಾ ಉಪ ಸಮಿತಿಗಳು ಮುಂದಾಗಿವೆ.

    ಮತ್ತೆ ವಿಜೃಂಭಿಸಲಿದೆ ನಾಡಕುಸ್ತಿ
    ಈ ಬಾರಿ ಒಂದು ವಾರ ಕಾಲ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಾಡಕುಸ್ತಿ ಪರಂಪರೆ ಮತ್ತೆ ವಿಜೃಂಭಿಸಲಿದೆ.
    ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದಸರಾ ಅಖಾಡದ ಮಟ್ಟಿ ಮೇಲೆ ಪಟ್ಟು ಹಾಕಲು ಹಾತೊರೆಯುತ್ತಾರೆ. ತಮಗೂ ಕುಸ್ತಿ ಮಾಡಲು ಅವಕಾಶ ಸಿಕ್ಕರೆ ಸಾಕೆಂದು ನೂರಾರು ಸ್ಥಳೀಯ ಪೈಲ್ವಾನರು ಚಡಪಡಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ನಾಡಕುಸ್ತಿ, ದೊಡ್ಡಕುಸ್ತಿ, ಮಾರ್ಫಿಟ್ ಕುಸ್ತಿಯ ಗಮ್ಮತ್ತು ಸವಿಯಲು ಕುಸ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗಾಗಿ ಪ್ರತಿನಿತ್ಯ 30ಕ್ಕೂ ಹೆಚ್ಚಿನ ನಾಡಕುಸ್ತಿ ಹಾಗೂ 4 ರಿಂದ 5 ಮಾರ್ಫಿಟ್ ಕುಸ್ತಿಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಮಾರ್ಫಿಟ್ ಕುಸ್ತಿಗೆ ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಭಾಗಗಳ ಸ್ಟಾರ್ ಕುಸ್ತಿಪಟುಗಳನ್ನು ಕರೆತರಲು ಚರ್ಚಿಸಲಾಗುತ್ತಿದೆ. ಒಟ್ಟಿನಲ್ಲಿ ದಸರಾ ನಾಡಕುಸ್ತಿಯಲ್ಲಿ ನೂರಾರು ಪೈಲಾನರು ಕೆಮ್ಮಣ್ಣು ಮಟ್ಟಿಯಲ್ಲಿ ತೊಡೆ ತಟ್ಟಲು ಕಾತರರಾಗಿದ್ದಾರೆ.

    ಎರಡು ವರ್ಷದ ಬಳಿಕ ಸಂಭ್ರಮ
    ವಿಶ್ವವಿಖ್ಯಾತ ಮೈಸೂರು ದಸರಾಗೂ ಕುಸ್ತಿಗೂ ಅವಿನಾಭಾವ ಸಂಬಂಧ. ದಸರಾ ಬಂತೆಂದರೆ ಕುಸ್ತಿಪಟುಗಳಿಗೆ ಏನೋ ಸಂಭ್ರಮ. ದೇಶದ ಮೂಲೆ ಮೂಲೆಗಳಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುವ ಪೈಲ್ವಾನರ ನಡುವೆ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ನಡೆಯುವ ಹಣಾಹಣಿ ರೋಚಕ ಅನುಭವ ನೀಡುತ್ತದೆ. ಆದರೆ, ಮಹಾಮಾರಿ ಕರೊನಾ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ಎರಡು ವರ್ಷ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗಿತ್ತು. ಹೀಗಾಗಿ ದಸರಾ ಕುಸ್ತಿ ಪಂದ್ಯಾವಳಿಗಳು ರದ್ದಾಗಿದ್ದವು. ಇದರಿಂದ ಕುಸ್ತಿ ಅಭಿಮಾನಿಗಳು ನಿರಾಸೆ ಅನುಭವಿಸಿದ್ದರು. ಆದರೆ ಈ ಬಾರಿ ಸರ್ಕಾರ ಅದ್ದೂರಿ ದಸರಾ ಆಚರಣೆಗೆ ಸಿದ್ಧತೆ ಕೈಗೊಂಡಿರುವುದರಿಂದ ಸಹಜವಾಗಿಯೇ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಕುಸ್ತಿ ಪಂದ್ಯಾವಳಿಗೆ ಜೀವಕಳೆ ಬಂದಿದೆ.

    ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸೆ.26 ರಿಂದ ಅ.1 ರವರೆಗೆ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಾಡಕುಸ್ತಿ, ದೊಡ್ಡಕುಸ್ತಿ, ಮಾರ್ಫಿಟ್ ಕುಸ್ತಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ‘ದಸರಾ ಕಿಶೋರಿ’, ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಯ ಕುಸ್ತಿಗಳನ್ನು ಆಯೋಜಿಸಲಾಗುತ್ತದೆ. ಇದಕ್ಕೆ ಹಿರಿಯ ಪೈಲ್ವಾನರ ಮಾರ್ಗದರ್ಶನ ಪಡೆಯಲಾಗುತ್ತದೆ.
    ಹರ್ಷವರ್ಧನ್, ಕಾರ್ಯದರ್ಶಿ, ದಸರಾ ಕುಸ್ತಿ ಉಪ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts