More

    ನೀವು ದುಡ್ಡಿಟ್ಟಿರುವ ಬ್ಯಾಂಕ್ ಸುರಕ್ಷಿತವೇ?

    ನೀವು ದುಡ್ಡಿಟ್ಟಿರುವ ಬ್ಯಾಂಕ್ ಸುರಕ್ಷಿತವೇ?

    | ಸಿ.ಎಸ್. ಸುಧೀರ್
    2020ರಲ್ಲಿ ಯೆಸ್ ಬ್ಯಾಂಕ್ ಬಿಕ್ಕಟ್ಟಿನ ನಂತರ ಖಾಸಗಿ ವಲಯಕ್ಕೆ ಸೇರಿದ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಹಿವಾಟಿನ ಮೇಲೆ ಆರ್​ಬಿಐ ಒಂದು ತಿಂಗಳ ನಿರ್ಬಂಧ ಹೇರಿದೆ. ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಕರ್ನಾಟಕದ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್​ಗಳಲ್ಲಿ ಗ್ರಾಹಕರಿಗೆ ಈ ಹಿಂದೆ ಆದ ಸಮಸ್ಯೆಗಳು ಬ್ಯಾಂಕಿಂಗ್ ಕ್ಷೇತ್ರದ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಯಾವ ಬ್ಯಾಂಕ್​ನಲ್ಲಿ ದುಡ್ಡಿಟ್ಟರೆ ಸೇಫ್? ಈಗಾಗಲೇ ನೀವು ಖಾತೆ ಹೊಂದಿರುವ ಬ್ಯಾಂಕ್ ಸುರಕ್ಷಿತವೇ? ಹೀಗೆ ಹಲವು ಅನುಮಾನಗಳಿಗೆ ಉತ್ತರ ನೀಡುವ ಮಾಹಿತಿ ಇಲ್ಲಿದೆ.

    ಬ್ಯಾಂಕ್​ಗಳ ನಿಯಂತ್ರಣ ಹೇಗೆ? ಯಾವುದೇ ಬ್ಯಾಂಕ್ ಮೂರು ಪ್ರಮುಖ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತದೆ. ಹಣಕಾಸಿನ ವಿಚಾರಕ್ಕೆ ಬಂದಾಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​​ಬಿಐ) ಪರಮಾಧಿಕಾರ ಹೊಂದಿದೆ. ಷೇರುಗಳ ವಹಿವಾಟಿನ ವಿಚಾರದಲ್ಲಿ ನಿರ್ಧಾರಗಳನ್ನು ನೀತಿ ನಿಯಮಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ( ಸೆಬಿ) ತೀರ್ಮಾನಿಸುತ್ತದೆ. ಹಾಗೆಯೇ ಬ್ಯಾಂಕ್​ಗಳು ನಡೆಸುವ ಇನ್ಶೂರೆನ್ಸ್ ವಹಿವಾಟಿಗೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ( ಐಆರ್​ಡಿಎಐ) ನಿಯಂತ್ರಣ ಸಂಸ್ಥೆಯಾಗಿದೆ. ಮೇಲಿನ ಎಲ್ಲ ಸಂಸ್ಥೆಗಳ ನಿಯಂತ್ರಣಕ್ಕೆ ಒಂದು ಬ್ಯಾಂಕ್ ಒಳಪಡುತ್ತದೆ. ಇಷ್ಟೆಲ್ಲಾ ನಿಯಂತ್ರಣ ಸಂಸ್ಥೆಗಳಿದ್ದರೂ ಬ್ಯಾಂಕ್​ಗಳು ಹಳಿ ತಪ್ಪುತ್ತಿವೆ. ಬ್ಯಾಂಕ್​ನ ಆರ್ಥಿಕ ಸ್ಥಿತಿಗತಿಯನ್ನು ಪಾರದರ್ಶಕವಾಗಿ ಸಾರ್ವಜನಿಕರ ಮುಂದೆ ಇಡುವ ಹೊಣೆಗಾರಿಕೆಯೂ ಬ್ಯಾಂಕ್​ಗಳ ಮೇಲಿದೆ. ಹೀಗಿದ್ದರೂ ಬ್ಯಾಂಕ್​ಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ.

    ಸರಿಯಾದ ಬ್ಯಾಂಕ್ ಆಯ್ಕೆಗೆ 5 ಮಾನಡಂಡಗಳು

    1. ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ/ಸಿಎಆರ್( ಸಮರ್ಪಕ ಬಂಡವಾಳ ಅನುಪಾತ): ಕ್ಯಾಪಿಟಲ್ ಅಡ್ವಿಕ್ವೆಸಿ ರೇಷಿಯೋ ( ಸಿಎಆರ್) ಅಂದ್ರೆ ಸರಳವಾಗಿ ಬ್ಯಾಂಕ್​ನ ಮೂಲ ಬಂಡವಾಳ. ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅನಿರೀಕ್ಷಿತ ನಷ್ಟಕ್ಕೆ ಒಳಗಾದಾಗ ಅದನ್ನು ಎದುರಿಸಲು ಬ್ಯಾಂಕ್ ಹೊಂದಿರುವ ಬಂಡವಾಳದ ಮೊತ್ತವನ್ನು ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಎಂದು ವಿಶ್ಲೇಷಿಸಬಹುದು. ಸಿಎಆರ್ ಹೆಚ್ಚಿಗೆ ಇದ್ದರೆ ಬ್ಯಾಂಕ್ ಯಾವುದೇ ನಷ್ಟ ಮಾಡಿಕೊಳ್ಳದೆ ಸಂಕಷ್ಟದ ಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ. ಠೇವಣಿದಾರರು ಇಟ್ಟಿರುವ ಹಣಕ್ಕೆ ಸುರಕ್ಷತೆ ಒದಗಿಸಲು ಸಾಧ್ಯವಾಗುತ್ತದೆ. ಆರ್​ಬಿಐ ಪ್ರಕಾರ ಯಾವುದೇ ಬ್ಯಾಂಕ್​ನ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಕನಿಷ್ಠ ಶೇ 10.5ರಷ್ಟಿರಬೇಕು.

    2020ರಲ್ಲಿ ಟಾಪ್ 5 ಬ್ಯಾಂಕ್​ಗಳ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಎಷ್ಟಿದೆ?

    • ಎಚ್​​ಡಿಎಫ್​ಸಿ ಬ್ಯಾಂಕ್: ಶೇ 18.50
    • ಕೋಟಕ್ ಬ್ಯಾಂಕ್: ಶೇ 19.50
    • ಐಸಿಐಸಿಐ ಬ್ಯಾಂಕ್: ಶೇ 16.11
    • ಆಕ್ಸಿಸ್ ಬ್ಯಾಂಕ್: ಶೇ 17.53
    • ಎಸ್​​ಬಿಐ: ಶೇ 11.13

    2. ನಾನ್ ಪರ್ಫಾರ್ಮಿಂಗ್ ಅಸೆಟ್ಸ್/ ಎನ್​ಪಿಎ ( ವಸೂಲಾಗದ ಸಾಲ): ಬ್ಯಾಂಕ್​ಗಳ ಆರ್ಥಿಕ ಸದೃಢತೆ ಬಹಳ ಮುಖ್ಯವಾಗುತ್ತದೆ. ಬ್ಯಾಂಕ್ ನೀಡಿದ್ದ ಸಾಲಗಳ ಪೈಕಿ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳವಾದರೆ ಅದು ನೇರವಾಗಿ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ( ಸಮರ್ಪಕ ಬಂಡವಾಳ ಅನುಪಾತ/‘ಸಿಎಆರ್) ಮೇಲೆ ಪರಿಣಾಮ ಉಂಟು ಮಾಡುತ್ತದೆ. ಸಾಲ ನೀಡಿದ ನಂತರದಲ್ಲಿ 90 ದಿನಗಳ ಕಾಲ ಸಾಲ ಪಡೆದ ವ್ಯಕ್ತಿ ಬಡ್ಡಿ ಪಾವತಿ ಮಾಡದಿದ್ದರೆ ಅದನ್ನು ವಸೂಲಾಗದ ಸಾಲ ಎಂದು ಪರಿಗಣಿಸಲಾಗುತ್ತದೆ. ವಸೂಲಾಗದ ಸಾಲದ ಪ್ರಮಾಣ ಹೆಚ್ಚಿಗೆ ಇದ್ದರೆ ಬ್ಯಾಂಕ್​ನ ನಿರ್ವಹಣೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.

    2020ರಲ್ಲಿ ಟಾಪ್ 5 ಬ್ಯಾಂಕ್​ಗಳ ವಸೂಲಾಗದ ಸಾಲದ ಪ್ರಮಾಣ ಎಷ್ಟಿದೆ?

    • ಎಚ್​​ಡಿಎಫ್​ಸಿ ಬ್ಯಾಂಕ್: ಶೇ 1.26
    • ಕೋಟಕ್ ಬ್ಯಾಂಕ್: ಶೇ 2.20
    • ಐಸಿಐಸಿಐ ಬ್ಯಾಂಕ್: ಶೇ 5.53
    • ಆಕ್ಸಿಸ್ ಬ್ಯಾಂಕ್: ಶೇ 4.86
    • ಎಸ್​ಬಿಐ: ಶೇ 6.15

    3. ನೆಟ್ ಇಂಟರೆಸ್ಟ್ ಮಾರ್ಜಿನ್/ಎನ್​ಐಎಂ (ನಿವ್ವಳ ಬಡ್ಡಿ ಮಿತಿ): ಬ್ಯಾಂಕ್​ನ ಲಾಭಾಂಶವನ್ನು ಅಳೆಯುವ ಮಾನದಂಡಗಳ ಪ್ರೈಕಿ ನಿವ್ವಳ ಬಡ್ಡಿ ಮಿತಿ ಪ್ರಮುಖವಾದದ್ದು. ಬ್ಯಾಂಕ್​ಗಳು ಠೇವಣಿದಾರರಿಂದ ಹಣ ಪಡೆದು ಸಾಲದ ಅಗತ್ಯವಿದ್ದವರಿಗೆ , ಬಿಸಿನೆಸ್ ಮ್ಯಾನ್​ಗಳಿಗೆ ಸಾಲ ನೀಡುತ್ತವೆ. ಈ ಪ್ರಕ್ರಿಯೆಯಲ್ಲಿ ಸಾಲ ನೀಡಿರುವ ಹಣಕ್ಕೆ ಬ್ಯಾಂಕ್ ಬಡ್ಡಿ ಪಡೆದು ಠೇವಣಿದಾರರಿಗೆ ಒಂದಿಷ್ಟು ಬಡ್ಡಿ ಲಾಭವನ್ನು ವರ್ಗಾಯಿಸುತ್ತದೆ. ಠೇವಣಿ ಹಣಕ್ಕೆ ಕೊಡುವ ಬಡ್ಡಿ ಮತ್ತು ಸಾಲದ ರೂಪದಲ್ಲಿ ಹಣವನ್ನು ನೀಡುವಾಗ ಪಡೆಯುವ ಬಡ್ಡಿಯ ವ್ಯತ್ಯಾಸವನ್ನು ನೆಟ್ ಇಂಟರೆಸ್ಟ್ ಮಾರ್ಜಿನ್ ಎಂದು ಕರೆಯಲಾಗುತ್ತದೆ. ನೆಟ್ ಇಂಟರೆಸ್ಟ್ ಮಾರ್ಜಿನ್ ಹೆಚ್ಚಿಗೆ ಇದ್ದಷ್ಟೂ ಅನುಕೂಲ.

    2020 ರಲ್ಲಿ ಟಾಪ್ 5 ಬ್ಯಾಂಕ್​ಗಳ ನೆಟ್ ಇಂಟರೆಸ್ಟ್ ಮಾರ್ಜಿನ್ ಎಷ್ಟಿದೆ?

    • ಎಚ್​​ಡಿಎಫ್​ಸಿ ಬ್ಯಾಂಕ್: ಶೇ 4.30
    • ಕೋಟಕ್ ಬ್ಯಾಂಕ್: ಶೇ 4.60
    • ಐಸಿಐಸಿಐ ಬ್ಯಾಂಕ್: ಶೇ 3.73
    • ಆಕ್ಸಿಸ್ ಬ್ಯಾಂಕ್: ಶೇ 3.55
    • ಎಸ್​​ಬಿಐ: ಶೇ 3.19

    4. ಸಿಎಎಸ್​​ಎ ರೇಷಿಯೋ (ಬ್ಯಾಂಕ್​ನಲ್ಲಿರುವ ಚಾಲ್ತಿ ಮತ್ತು ಉಳಿತಾಯ ಖಾತೆಗಳಲ್ಲಿನ ಮೊತ್ತ): ಬ್ಯಾಂಕ್​ಗಳ ಚಾಲ್ತಿ ಖಾತೆ (ಕರೆಂಟ್ ಅಕೌಂಟ್ ) ಮತ್ತು ಉಳಿತಾಯ ಖಾತೆಗಳಲ್ಲಿನ ( ಸೇವಿಂಗ್ಸ್ ಅಕೌಂಟ್) ಒಟ್ಟು ಠೇವಣಿಗಳ ಅನುಪಾತವನ್ನು ಸಿಎಎಸ್​ಎ ಅನುಪಾತ (ಕಾಸಾ ರೇಷಿಯೋ) ಎನ್ನಬಹುದು. ಸಿಎಎಸ್​ಎ ತಗ್ಗಿದರೆ ಹೊರಗಿನಿಂದ ಹೆಚ್ಚಿನ ಬಡ್ಡಿ ದರ ನೀಡಿ ಬ್ಯಾಂಕ್ ಬಂಡವಾಳ ಸಂಗ್ರಹ ಮಾಡಬೇಕಾಗುತ್ತದೆ. ಸಿಎಎಸ್​ಎ ರೇಷಿಯೋ ಕಡಿಮೆ ಇದ್ದರೆ ಬ್ಯಾಂಕ್ ತನ್ನ ಬಂಡವಾಳಕ್ಕಾಗಿ ಹೆಚ್ಚು ಅವಲಂಬನೆ ಮಾಡಬೇಕಾಗುತ್ತದೆ. ಸಿಎಎಸ್​​ಎ ರೇಷಿಯೋ ಹೆಚ್ಚಿಗೆ ಇದ್ದಷ್ಟೂ ಬ್ಯಾಂಕ್ ಹೆಚ್ಚು ಸುರಕ್ಷಿತ ಎಂದರ್ಥ.

    5. ಪ್ರಾವಿಜನ್ ಕವರೇಜ್ ರೇಷಿಯೋ (ಪಿಸಿಆರ್): ವಸೂಲಾಗದ ಸಾಲಗಳಿಂದಾಗುವ ( ಎನ್​ಪಿಎಗಳಿಂದ) ಬ್ಯಾಂಕ್​ಗಾಗುವ ನಷ್ಟ ಭರಿಸಲು ಬ್ಯಾಂಕ್ ತನ್ನ ನಿಧಿಯಿಂದ ಒಂದಷ್ಟು ಹಣ ತೆಗೆದಿಡುತ್ತದೆ. ಇದೇ ಪ್ರಾವಿಜನ್ ಕವರೇಜ್ ರೇಷಿಯೋ ( ಪಿಸಿಆರ್). ಪಿಸಿಆರ್​ ಅನುಪಾತ ಶೇ. 70ಕ್ಕಿಂತ ಹೆಚ್ಚಿಗೆ ಇದ್ದರೆ ನಿರೀಕ್ಷಿತ ಅಥವಾ ಅಂದಾಜು ನಷ್ಟವನ್ನು ಎದುರಿಸಲು ಬ್ಯಾಂಕ್ ಪೂರ್ವತಯಾರಿ ಮಾಡಿಕೊಂಡಿದೆ ಎಂದು ಹೇಳಬಹುದು.

    ಬ್ಯಾಂಕ್​ನಲ್ಲಿ 5 ಲಕ್ಷ ರೂಪಾಯಿಕ್ಕಿಂತ ಹೆಚ್ಚು ಹಣ ಇಡಬೇಡಿ!

    • ಫೆಬ್ರವರಿ 2020ರ ಕೇಂದ್ರ ಬಜೆಟ್​​ನಲ್ಲಿ ಡೆಪಾಸಿಟ್ ಇನ್ಶೂರೆನ್ಸ್ 1 ಲಕ್ಷದಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ. ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಬ್ಯಾಂಕ್​ನಲ್ಲಿ ನೀವು 5 ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಹಣ ಇಟ್ಟಿದ್ದರೆ ಆ ಹಣ ನಿಮಗೆ ಸಿಗುವುದಿಲ್ಲ. ಯಾಕಂದ್ರೆ ಡೆಪಾಸಿಟ್ ಇನ್ಶೂರೆನ್ಸ್ ಸ್ಕೀಂ ಅಡಿಯಲ್ಲಿ ಸದ್ಯ ಸುರಕ್ಷತೆ ಇರುವುದು 5 ಲಕ್ಷ ರೂಪಾಯಿಗೆ ಮಾತ್ರ.
    • ಹೆಚ್ಚು ಬಡ್ಡಿ ಲಾಭ ಗಳಿಸುವ ಆಸೆಯಿಂದ ಸಣ್ಣ ಪುಟ್ಟ ಬ್ಯಾಂಕ್ ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಬೇಡಿ.
    • ಸಹಕಾರಿ ಬ್ಯಾಂಕ್​ಗಳಲ್ಲಿ ಎಫ್​ಡಿಗೆ ಸಿಕ್ಕಾಪಟ್ಟೆ ಬಡ್ಡಿ ಕೊಡುತ್ತಾರೆ. ಆದರೆ ಅಲ್ಲಿಡುವ ಹಣಕ್ಕೆ ಅಷ್ಟೇ ರಿಸ್ಕ್ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಪೂರ್ವಾಪರ ಅರಿತು ನಿರ್ಧಾರ ಕೈಗೊಳ್ಳಿ.
    • ಒಂದೇ ಖಾತೆಯಲ್ಲಿ ಹಚ್ಚಿಗೆ ಹಣ ಇಡಬೇಡಿ. ಎರಡರಿಂದ ಮೂರು ಖಾತೆ ಆರಂಭಿಸಿ ಎಲ್ಲ ಅಕೌಂಟ್​​ನಲ್ಲೂ ಒಂದಷ್ಟು ಠೇವಣಿ ಇಡುವುದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಹಣಕ್ಕೆ ಹೆಚ್ಚು ಸುರಕ್ಷತೆ ಸಿಗುತ್ತದೆ.

    (ಲೇಖಕರು ಇಂಡಿಯನ್ ಮನಿ ಡಾಟ್ ಕಾಂ ಸಂಸ್ಥಾಪಕ – ಸಿಇಒ)

    ಡಿಜಿಟಲ್ ಇಂಡಿಯಾ ಈಗ ಜೀವನಮಾರ್ಗ: ತಂತ್ರಜ್ಞಾನವೇ ಮೊದಲು ಎಂದರು ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts