More

    ಅನುಕಂಪದ ಉದ್ಯೋಗ ಕೋರಿದ್ದ ಅರ್ಜಿ ವಜಾ

    ಬೆಂಗಳೂರು: ಕುಟುಂಬವೊಂದು ಉದ್ಯೋಗದಾತರಿಂದ ಮಾಸಿಕ ಪಿಂಚಣಿ ಸೇರಿ ಸಾಕಷ್ಟು ಪರಿಹಾರ ಪಡೆದಿರುವುದನ್ನು ಗಮನಿಸಿದ ನ್ಯಾಯಪೀಠ, ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅನುಕಂಪದ ಉದ್ಯೋಗ ಕೋರಿ ಮೃತನ ವಿವಾಹಿತ ಪುತ್ರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

    ಅನುಕಂಪ ಆಧಾರದ ಮೇಲೆ ತನಗೆ ಉದ್ಯೋಗ ನೀಡಲು ಸಂಸ್ಥೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಕೆ.ಲಕ್ಷ್ಮಿ ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗ್ದಮ್ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರು, ವಿವಾಹಿತ ಮಹಿಳೆಗೆ ಮೂವರು ಹೆಣ್ಣು ಮಕ್ಕಳಿದ್ದು, ಪತಿ ಬೀದಿಬದಿ ವ್ಯಾಪಾರಸ್ಥರಾಗಿದ್ದಾರೆ. ಕುಟುಂಬ ಆರ್ಥಿಕವಾಗಿ ಅನೂಕುಲಕರ ಸ್ಥಿತಿಯಲ್ಲಿಲ್ಲ. ಹಾಗಾಗಿ ಉದ್ಯೋಗ ನೀಡುವಂತೆ ಬ್ಯಾಂಕ್‌ಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದರು.

    ಪ್ರತಿವಾದಿ ಪರ ವಕೀಲರು, ಉದ್ಯೋಗದಾತ ಸಂಸ್ಥೆ (ಕೆನರಾ ಬ್ಯಾಂಕ್) ಮೃತರ ಕಟುಂಬಕ್ಕೆ ಈಗಾಗಲೆ ಪಿಎ್, ಗ್ರಾಚ್ಯುಟಿ ಸಹಿತ ವಿವಿಧ ಸೌಲಭ್ಯಗಳು ಸೇರಿ 30 ಲಕ್ಷ ರೂ. ಪಾವತಿಸಿದೆ. ಅಲ್ಲದೆ ಮೃತರ ಪತ್ನಿ ರತ್ನಮ್ಮ ಮಾಸಿಕ 28,272 ರೂ. ಕುಟುಂಬ ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವುದನ್ನು ತಿಳಿಸಿದರು.

    ಇದನ್ನು ಪರಿಗಣಿಸಿದ ನ್ಯಾಯಪೀಠ, ಉದ್ಯೋಗದಾತರಿಂದ ನೀಡಲಾಗಿರುವ ಪ್ರಯೋಜನಗಳು ಸಾಮಾನ್ಯವಾಗಿ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ. ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದು ಕುಟುಂಬ ಎದುರಿಸುತ್ತಿರುವ ತಕ್ಷಣದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಅನುವಾಗಲು ಹೊರತಾಗಿ ಉತ್ತರಾಧಿಕಾರಿಗಳಿಗೆ ಉದ್ಯೋಗ ಕಲ್ಪಿಸುವ ನೆಪಕಷ್ಟೇ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.

    ಇದಷ್ಟೇ ಅಲ್ಲದೆ, ಮಾಸಿಕ ಕುಟುಂಬ ಪಿಂಚಣಿ ಮೃತರ ಆದಾಯ ನಷ್ಟದ ನಂತರ ಕುಟುಂಬಕ್ಕೆ ನಿರಂತರ ಆರ್ಥಿಕ ನೆರವು ನೀಡುವ ಆಕಾಂಕ್ಷೆ ಹೊಂದಿದೆ. ಪ್ರಸ್ತುತ ಪ್ರಕರಣದಲ್ಲಿ ಟರ್ಮಿನಲ್ ಪ್ರಯೋಜನಗಳ ಸ್ವೀಕೃತಿ ಹಾಗೂ ಮಾಸಿಕ ಪಿಂಚಣಿಯ ಸ್ವರೂಪವನ್ನು ಗಮನಿಸಿದರೆ, ಸತ್ತವರ ಕುಟುಂಬದ ಆರ್ಥಿಕ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ ಎಂದು ಸಮಂಜಸವಾಗಿ ಅಂದಾಜಿಸಬಹುದು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts