More

    2020ರ ಬಜೆಟ್​ ನಿರೀಕ್ಷೆ-ಸವಾಲು:​ ಹಗ್ಗದ ಮೇಲಿನ ನಡಿಗೆ

    2020ರ ಬಜೆಟ್​ ನಿರೀಕ್ಷೆ-ಸವಾಲು:​ ಹಗ್ಗದ ಮೇಲಿನ ನಡಿಗೆ2019-20 ನೇ ಸಾಲಿನ ಬಜೆಟ್ ಮಂಡನೆ ಸಮಯದಲ್ಲಿ ಸತತ 2 ತಾಸು 17 ನಿಮಿಷಗಳ ದೀರ್ಘಾವಧಿ ಭಾಷಣ ಮಾಡಿ ದಾಖಲೆ ಬರೆದಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಲ್ಲಿ ಸಾಕಷ್ಟು ಸವಾಲುಗಳಿವೆ. ಆರ್ಥಿಕ ಹಿಂಜರಿತ, ಆರ್ಥಿಕ ವೃದ್ಧಿ ದರ ( ಜಿಡಿಪಿ) 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ, ತೆರಿಗೆ ಸಂಗ್ರಹ ಕೊರತೆಯ ಮಧ್ಯೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಅನಿವಾರ್ಯತೆ 2020-21ನೇ ಸಾಲಿನ ಬಜೆಟ್​ನಲ್ಲಿದೆ. ಆರ್ಥಿಕ ಹಿಂಜರಿತ ಭಾರತಕ್ಕೆ ಮಾತ್ರ ಸೀಮಿತವಾದದ್ದಲ್ಲ. ಆದರೆ ಹಿಂಜರಿತದ ವಾತಾವರಣದಲ್ಲಿ ಸೃಷ್ಟಿಯಾಗಿರುವ ವರಮಾನ ಕೊರತೆಯ ಮಧ್ಯೆ ಜನರ ನಿರೀಕ್ಷೆಗಳನ್ನು ಈಡೇರಿಸುವುದು ಸುಲಭವಲ್ಲ.

    ವರಮಾನ ಕೊರತೆ

    ಆರ್ಥಿಕತೆ ಮಂದಗತಿಯಲ್ಲಿರುವುದರಿಂದ ಉದ್ದೇಶಿತ ತೆರಿಗೆ ಸಂಗ್ರಹದಲ್ಲಿ 2 ಲಕ್ಷ ಕೋಟಿ ರೂ. ಕೊರತೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ (2019-20 ನೇ ಸಾಲು) ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ಕಾರ್ಪೆರೇಟ್ ತೆರಿಗೆ ಕಡಿತ, ಬಂಡವಾಳ ಗಳಿಕೆ ಮೇಲಿನ ಸರ್ಚಾರ್ಜ್ ರದ್ದತಿ ಸೇರಿ ಹಲವು ಉಪಕ್ರಮಗಳನ್ನು ಘೊಷಿಸಿತು. ಸರ್ಕಾರ ಆ ಸಂದರ್ಭಕ್ಕೆ ತೆಗೆದುಕೊಂಡ ನಿರ್ಧಾರಗಳಲ್ಲಿ ಯಾವುದೇ ಲೋಪವಾಗಿಲ್ಲ. ಷೇರುಪೇಟೆ ಹೂಡಿಕೆದಾರರು ಕೂಡ ಸರ್ಕಾರದ ನಿರ್ಧಾರವನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ಪರಿಣಾಮ ಈಗಲೂ ಸೂಚ್ಯಂಕಗಳು ಸುಸ್ಥಿತಿಯಲ್ಲಿವೆ. ಆದರೆ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ  ಘೋಷಿಸಿದ ಪ್ಯಾಕೇಜ್​ನ ಪರಿಣಾಮ ಬೊಕ್ಕಸದಲ್ಲಿ ಹಣದ ಕೊರತೆ ಕಂಡುಬರುತ್ತಿದೆ. ನೇರ ತೆರಿಗೆಯಲ್ಲಿ 1.5 ಲಕ್ಷ ಕೋಟಿ ರೂ., ಜಿಎಸ್​ಟಿ ಸಂಗ್ರಹದಲ್ಲಿ 50 ಸಾವಿರ ಕೋಟಿ ರೂ. ಹಿನ್ನಡೆಯಾಗಿದೆ. ಕಾರ್ಪೆರೇಟ್ ತೆರಿಗೆ ಕಡಿತದಿಂದ ಕೇಂದ್ರಕ್ಕೆ 1.45 ಲಕ್ಷ ಕೋಟಿ ರೂ.ನಷ್ಟು ನಷ್ಟವಾಗಿದೆ. ಬಂಡವಾಳ ಗಳಿಕೆ ಮೇಲಿನ ಸರ್ಚಾರ್ಜ್ ರದ್ದತಿಯಿಂದ 1,400 ಕೋಟಿ ರೂ. ಕೊರತೆ ಉದ್ಭವಿಸಿದೆ.

    ಆರ್ಥಿಕ ಬೆಳವಣಿಗೆಗೆ ಆದ್ಯತೆ

    2019-20 ನೇ ಸಾಲಿನಲ್ಲಿ 8 ತಿಂಗಳ ಅವಧಿಯಲ್ಲಿ ಸರ್ಕಾರ ಸುಮಾರು 18.20 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಖರ್ಚು ಕಡಿಮೆ ಮಾಡಿ ವಿತ್ತೀಯ ಕೊರತೆ ತಗ್ಗಿಸುವುದು ಸರ್ಕಾರದ ಆದ್ಯತೆಯ ವಿಷಯವಾಗಬೇಕು, ನಿಜ. ಆದರೆ ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ವಿತ್ತೀಯ ಕೊರತೆ ಬಗ್ಗೆ ಸದ್ಯಕ್ಕೆ ತಲೆಕೆಡಿಸಿಕೊಂಡರೆ ಪ್ರಯೋಜನವಿಲ್ಲ. ಇದೇ ದಿಕ್ಕಿನಲ್ಲಿ ಸರ್ಕಾರವೂ ಮುನ್ನಡೆಯುತ್ತಿದೆ. ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ಬಜೆಟ್​ನಲ್ಲೂ ಹೊಸ ಘೊಷಣೆಗಳಾಗುವ ಸಾಧ್ಯತೆ ಇದೆ.

    ಉದ್ಯೋಗ ಸೃಷ್ಟಿಗೆ ಬಲ

    ಕುಂಠಿತಗೊಂಡಿರುವ ಆರ್ಥಿಕತೆಗೆ ಬಲ ತುಂಬುವಲ್ಲಿ ಉದ್ಯೋಗ ಸೃಷ್ಟಿ ಮಹತ್ತರ ಪಾತ್ರ ವಹಿಸುತ್ತದೆ. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು, ಸ್ಟಾರ್ಟಪ್​ಗಳು, ರಸ್ತೆ ನಿರ್ವಣ, ರೈಲ್ವೆ ವಿಸ್ತರಣೆ, ಗೃಹ ನಿರ್ಮಾಣ ಸೇರಿ ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರ ಮನಸ್ಸು ಮಾಡುವ ನಿರೀಕ್ಷೆಯಿದ್ದು, ಹೆಚ್ಚು ನೆರವು ಸಿಗುವ ಸಾಧ್ಯತೆಯಿದೆ.

    ವಿತ್ತೀಯ ಕೊರತೆ ನಿಯಂತ್ರಣದ ಕಸರತ್ತು

    ಬಜೆಟ್​ಗೆ ಬಲ ಬರುವುದು ವಿತ್ತೀಯ ಕೊರತೆ ಕಡಿಮೆ ಇದ್ದಾಗ. ಆದಾಯಕ್ಕಿಂತ ಖರ್ಚು ಜಾಸ್ತಿ ಇದ್ದರೆ ಅದನ್ನು ವಿತ್ತೀಯ ಕೊರತೆ ಎನ್ನುತ್ತೇವೆ. ಮೋದಿ ನೇತೃತ್ವದ ಎನ್​ಡಿಎ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿತ್ತೀಯ ಕೊರತೆಯನ್ನು ತಗ್ಗಿಸಲು ಪ್ರಯತ್ನ ಮಾಡುತ್ತಲೇ ಬಂದಿದ್ದರೂ ವಿತ್ತೀಯ ಹೊಣೆಗಾರಿಕೆ ಮತ್ತು ನಿರ್ವಹಣೆ ಕಾನೂನಿನ (ಎಫ್​ಆರ್​ಬಿಎಂ) ಚೌಕಟ್ಟಿಗೆ ಅಂಟಿಕೊಂಡು ಮುನ್ನಡೆಯಲು ಸಾಧ್ಯವಾಗಿಲ್ಲ. ಜಿಎಸ್​ಟಿ ಜಾರಿ, ಹೊಸ ಯೋಜನೆಗಳ ಘೊಷಣೆ ಸವಾಲಾಗಿ ಪರಿಣಮಿಸಿದೆ. 2013-14 ರ ಅವಧಿಯಲ್ಲಿ ಅಂದರೆ, ಯುಪಿಎ ಆಡಳಿತದ ಕೊನೆಯ ವರ್ಷದಲ್ಲಿ ವಿತ್ತೀಯ ಕೊರತೆ ಶೇ 4.6 ರಷ್ಟಿತ್ತು. ಈ ಪ್ರಮಾಣ 2015-16ರಲ್ಲಿ ಜಿಡಿಪಿಯ ಶೇ 3.9ಕ್ಕೆ ತಗ್ಗಿತು. ಅದು ಮುಂದಿನ ಎರಡು ವರ್ಷಗಳಲ್ಲಿ ಶೇ 3.5 ಕ್ಕೆ ನಿಂತಿತ್ತು. ಆದರೆ ಈಗ ಸರ್ಕಾರದ ವರಮಾನ ತಗ್ಗುವ ಸಾಧ್ಯತೆ ಇರುವುದರಿಂದ ವಿತ್ತೀಯ ಕೊರತೆ ಜಾಸ್ತಿಯಾಗುವ ಆತಂಕವಿದೆ. ಎಫ್​ಆರ್​ಬಿಎಂ ಕಾನೂನಿನ ಅನ್ವಯ ವಿತ್ತೀಯ ಕೊರತೆಯನ್ನು ಶೇ.3 ರ ಪ್ರಮಾಣದಲ್ಲಿ ಇರಿಸಿದರೆ ಒಳಿತು; ಅಗತ್ಯ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಶೇ 3.5 ರ ಪ್ರಮಾಣದಲ್ಲಿ ಇರಿಸಲು ಅವಕಾಶವಿದೆ.

    2020ರ ಬಜೆಟ್​ ನಿರೀಕ್ಷೆ-ಸವಾಲು:​ ಹಗ್ಗದ ಮೇಲಿನ ನಡಿಗೆ

    2020ರ ಬಜೆಟ್​ ನಿರೀಕ್ಷೆ-ಸವಾಲು:​ ಹಗ್ಗದ ಮೇಲಿನ ನಡಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts