More

    ಇಂದು ಚಿ.ನಾ.ಹಳ್ಳಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ

    ಚಿಕ್ಕನಾಯಕನಹಳ್ಳಿ: ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ರೈತರು ಬೆಳೆದ ದವಸ ಧಾನ್ಯಗಳು, ತೆಂಗಿನಕಾಯಿಗಳನ್ನು ಭಿಕ್ಷಾ ರೂಪದಲ್ಲಿ ಸಂಗ್ರಹಿಸಿ ಫೆ. 4, 5ರಂದು ಆಯೋಜಿಸಿರುವ ಚಿಕ್ಕನಾಯಕನಹಳ್ಳಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

    ಜನಸಾಮಾನ್ಯರನ್ನು ಪರಿಷತ್ತಿಗೆ ಹತ್ತಿರ ಮಾಡುವ ಉದ್ದೇಶದಿಂದ ಜನತೆಯ ಪಾಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಜೋಳಿಗೆ ಅಭಿಯಾನ ಶುರು ಮಾಡಿ ಆಯೋಜಿಸುತ್ತಿರುವ ಸಮ್ಮೇಳನ ಇದಾಗಿದ್ದು, ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನ್ನಡ ಹಬ್ಬ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಫೆ.4ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಸಮ್ಮೇಳನದಲ್ಲಿ ರಾತ್ರಿ 10 ರವರೆಗೂ ಕಾರ್ಯಕ್ರಮಗಳು ನಡೆಯಲಿವೆ. ಫೆ.5ರಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ ಸಮಾರೋಪ ಇರಲಿದೆ ಎಂದರು. ಸಾಮರಸ್ಯದ ನೆಲೆಗಳು, ಮಹಿಳಾ ಸಂವೇದನೆ, ಕಾವ್ಯ, ಚಿಂತನೆ-ವಾಚನ, ಕೃಷಿ-ಮಾರುಕಟ್ಟೆ, ರೈತ-ದಲಿತ ಚಳವಳಿ, ಶೈಕ್ಷಣಿಕ ಬೆಳವಣಿಗೆ ಸೇರಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಯಲಿವೆ ಎಂದರು.

    ಕುಂಭಮೇಳ: ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಕನ್ನಡ ಸಂಘದ ವೇದಿಕೆಯವರೆಗೆ ಪೂರ್ಣಕುಂಭ ಕಳಸದೊಂದಿಗೆ ಸಮ್ಮೇಳನಾಧ್ಯಕ್ಷ ಮೆರವಣಿಗೆ ನಡೆಯಲಿದ್ದು, ಶಾಲೆಯ ಕಲಾ
    ತಂಡ, ಜಾನಪದ ತಂಡಗಳು ಸಾಥ್ ನೀಡಲಿವೆ.

    ಕಲೆ, ನೃತ್ಯ,ಪ್ರದರ್ಶನ: ಫೆ.4ರಂದು ಕುರುಬರಹಳ್ಳಿಯ ಕುಂಚ ಕಲಾವಿದ ಸಾಹಿ ನವೀನ್ ಅವರಿಂದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಮಧ್ಯಾಹ್ನ 1.15ಕ್ಕೆ ಹಂದನಕೆರೆ ಕಾಳಿದಾಸ ಪ್ರೌಢಶಾಲೆಯಿಂದ ಕೆರೆಗೆ ಹಾರ ನೃತ್ಯ ರೂಪಕ, ಸಂಜೆ 7ಕ್ಕೆ ಕೆ.ಬಿ.ಸಿದ್ದಯ್ಯ ಅವರ ಆಯ್ದ ಬರಹಗಳನ್ನಾಧರಿಸಿದ ಕಥಾ ದೇವಿ ಕಾವ್ಯ ನಾಟಕ, ಸಂಜೆ 7.30ಕ್ಕೆ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅವರಿಂದ ಪಂಪ ದರ್ಶನ ಜನಕಥಾ ಕೀರ್ತನೆ ನಡೆಯಲಿವೆ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

    ಇಂದು ಚಿ.ನಾ.ಹಳ್ಳಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ
    ವೇಣುಗೋಪಾಲ್

    ಸಮ್ಮೇಳನಾಧ್ಯಕ್ಷರ ಪರಿಚಯ: ಸಮ್ಮೇಳನದ ಸರ್ವಾಧ್ಯಕ್ಷ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಕೃಷಿ ಕುಟುಂಬದಿಂದ ಬಂದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ದೇಸಿ ಪ್ರತಿಭೆ. ಇತಿಹಾಸ ಅಧ್ಯಾಪಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದ್ದಾರೆ. 2008ರಲ್ಲಿ ಬ್ರಿಟಿಷ್ ವಸಹಾತು ಕಾಲದ ಮೈಸೂರು ಸಂಸ್ಥಾನದ ಭೂಕಂದಾಯ ನೀತಿ, ರೈತರ ಸ್ಥಿತಿಗತಿ ಮತ್ತು ರಾಷ್ಟ್ರೀಯ ಚಳುವಳಿ ಕುರಿತು ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು. 36ವರ್ಷ ಅಧ್ಯಾಪಕರಾಗಿ ಪ್ರಾಂಶುಪಾಲರಾಗಿದ್ದಾರೆ. ವೇಣುಗೋಪಾಲ್ ಅವರ ಸಂಶೋಧನಾ ಕೃತಿಗಳಾದ ರೈತರು ಮೈಸೂರು ಅಧಿಕಾರ ಶಾಹಿ ಮತ್ತು ರಾಷ್ಟ್ರೀಯ ಚಳವಳಿ, ಸಿಡಿದೆದ್ದವರ ಒಂದು ಅಧ್ಯಯನ, ಕ್ರೂರ ನೆಲದಲ್ಲಿ, ನೆಲದ ಕುಲ ಪರದೇಸಿ, ಅಬ್ರಹಾಂ ಲಿಂಕನ್, ಉಪ್ಪಳ್ಳದ ಗ್ರಾಮಚರಿತ್ರೆ ಸೇರಿ ಹಲವು ಕೃತಿ ರಚಿಸಿದ್ದಾರೆ.
    10ನೇ ಕನ್ನಡಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ವೇದಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts