More

    ತನುಶ್ರೀ ಮತ್ತೊಂದು ವಿಶ್ವ ದಾಖಲೆ

    ಉಡುಪಿ: ಯೋಗ ಪ್ರತಿಭೆ ತನುಶ್ರೀ ಪಿತ್ರೋಡಿ(11)ಯೋಗಾಸನದಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ಚಕ್ರಾಸನ ರೇಸ್‌ನಲ್ಲಿ ಹಿಮಾಚಲದ ಪ್ರದೇಶದ ಸಮೀಕ್ಷಾ ಡೋಗ್ರಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತನುಶ್ರೀ ಮುರಿದಿದ್ದಾರೆ. ಚೇಳಿನಂತೆ ಬಾಗಿ ಕೈ ಮತ್ತು ತಲೆ ಮುಂದೆ ಮಾಡಿ 100 ಮೀ. ದೂರವನ್ನು 1 ನಿಮಿಷ 14 ಸೆಕೆಂಡ್‌ನಲ್ಲಿ ಗುರಿಮುಟ್ಟುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಟಕ್ಕೆ ಸೇರಿದ್ದಾರೆ.

    ಯೋಗದ ಕಠಿಣ ಮುದ್ರೆಯಾಗಿರುವ ಚಕ್ರಾಸನದಲ್ಲಿ ಗರಿಷ್ಠ 100 ಮೀಟರ್ ಕ್ರಮಿಸಬಹುದು. ಆದರೆ 11 ವರ್ಷದ ಬಾಲಕಿ 100 ಮೀಟರ್ ಸಾಧನೆ ಮಾಡಿರುವುದು ದಾಖಲೆ. ಸಮೀಕ್ಷಾ ಡೋಗ್ರಾ ಎಂಬವರು 100 ಮೀಟರನ್ನು 6 ನಿಮಿಷ 2 ಸೆಕೆಂಡ್‌ನಲ್ಲಿ ಈ ದಾಖಲೆ ಮಾಡಿದ್ದರು. ಇದೀಗ ಕೇವಲ 1 ನಿಮಿಷ 14 ಸೆಕೆಂಡ್‌ಗಳಲ್ಲಿ ತನುಶ್ರೀ ಆ ದಾಖಲೆ ಮುರಿದಿದ್ದಾರೆ ಎಂದು ಅಮೆರಿಕ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ರೆಕಾರ್ಡ್ ಏಷ್ಯಾ ಮುಖ್ಯಸ್ಥ ಡಾ.ಮನೀಷ್ ವಿಷ್ಣೋಯಿ ತಿಳಿಸಿದ್ದಾರೆ.

    ವೆಂಕಟರಮಣ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಸಹಯೋಗದೊಂದಿಗೆ ಉದ್ಯಾವರ ಗ್ರಾ.ಪಂ.ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ತನುಶ್ರೀ ಈ ದಾಖಲೆ ಬರೆದಿದ್ದಾರೆ. ತಂದೆ ಉದಯ ಕುಮಾರ್, ತಾಯಿ ಸಂಧ್ಯಾ ತನುಶ್ರೀ ಜತೆಗಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್, ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ನೃತ್ಯ ಗುರು ರಾಮಕೃಷ್ಣ ಕೊಡಂಚ, ಉದ್ಯಮಿಗಳಾದ ಉದಯಕುಮರ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ , ಸಂತ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ರಚನ, ಪ್ರೀತಿ, ನಾಗೇಶ್ ಉದ್ಯಾವರ, ಪ್ರವೀಣ್ ಪೂಜಾರಿ ಇದ್ದರು.

    ಐದು ವಿಶ್ವದಾಖಲೆ
    ಉಡುಪಿಯ ಸೇಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಬುಕ್ ಆಫ್ ವಲ್ಡರ್ ರೆಕಾರ್ಡ್, ಗಿನ್ನೆಸ್ ದಾಖಲೆಯಲ್ಲಿ ಐದು ವಿಶ್ವ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರತಿಭಾನ್ವಿತ ಬಾಲಕಿ ತನುಶ್ರೀ ಯೋಗ, ಭರತನಾಟ್ಯ, ನೃತ್ಯದ ಜತೆಗೆ ಯಕ್ಷಗಾನ ತರಬೇತಿಯನ್ನು ಪಡೆಯುತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts