More

    ಬಿಸಿ ತಣಿಸಲಿವೆ ಸಾಲು ಮರ

    ಮಂಗಳೂರು: ಮಂಗಳೂರಿನ ನಂತೂರಿನಿಂದ ಗಡಿಭಾಗ ತಲಪಾಡಿವರೆಗೆ ಸುಮಾರು 14 ಕಿ.ಮೀ ಹೆದ್ದಾರಿ ಬದಿ ಸಾಲುಮರಗಳನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೊಂದಕ್ಕೆ ಚಾಲನೆ ಸಿಕ್ಕಿದ್ದು, ಗಿಡಗಳ ನಾಟಿ ಭಾಗಶಃ ಪೂರ್ಣಗೊಂಡಿದೆ.
    ಅರಣ್ಯ ಇಲಾಖೆಯ ನಗರ ಹಸುರೀಕರಣ ಕಾರ್ಯಕ್ರಮದ ಭಾಗವಾಗಿ 2 ಸಾವಿರ ಗಿಡಗಳನ್ನು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ನಾಟಿ ಮಾಡಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರು ಸಾಮರಸ್ಯದ ಸಾಲುಮರ ಎಂದು ಹೆಸರು ನೀಡಲಾಗಿದ್ದು, ಜೂನ್ 18ರಂದು ಈ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ.
    ಪ್ರಮುಖವಾಗಿ ಹೂ-ಹಣ್ಣು ನೀಡುವ ಕದಂಬ ವಕ್ಷ, ರೆಂಜ, ಬೇಂಗ, ಹೆಬ್ಬಲಸು, ಹಲಸು, ಮೊದಲಾದ ಗಿಡಗಳನ್ನು ನಡೆಲಾಗಿದ್ದು, ಈ ಎಲ್ಲ ಗಿಡಗಳು ಎರಡು ವರ್ಷ ಪ್ರಾಯದ್ದಾಗಿವೆ. ಹೆಚ್ಚಿನವು ಔಷಧೀಯ ಗುಣಗಳನ್ನು ಹೊಂದಿದೆ. ನವಯುಗ ಸಂಸ್ಥೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎಂ.ಆರ್.ವಾಸುದೇವ ಅಧ್ಯಕ್ಷರಾಗಿರುವ ಗ್ಲೋಬಲ್ ಗ್ರೀನ್ ಟೈಗರ್ಸ್‌ ಕ್ಲಬ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳ ನೇತೃತ್ವದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರು ಗಿಡಗಳನ್ನು ನಾಟಿ ಮಾಡುವ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷ, ಎಲ್ಲ ಧರ್ಮದ ಜನರು ವಿವಿಧ ಸಂಘ ಸಂಸ್ಥೆಗಳು ಯೋಜನೆಯಲ್ಲಿ ಕೈಜೋಡಿಸಿವೆ.

    ಗಿಡಗಳ ನಿರ್ವಹಣೆಗೆ ಉಳ್ಳಾಲ್ ನೇತೃತ್ವ: ಗಿಡಗಳನ್ನು ಮೊದಲ ಒಂದು ವರ್ಷ ಅರಣ್ಯ ಇಲಾಖೆಯೇ ನಿರ್ವಹಣೆ ನಡೆಸಲಿದ್ದು, ಬಳಿಕ ಮಾಧವ ಉಳ್ಳಾಲ್ ಅವರು ನಿರ್ವಹಣೆಯ ಹೊಣೆ ವಹಿಸಲಿದ್ದಾರೆ. ಇದಕ್ಕಾಗಿ ಈಗಾಲೇ 2 ಸಾವಿರ ಮಂದಿ ಕಾರ್ಯಕರ್ತರು ಅವರ ಜತೆ ಕೈ ಜೋಡಿಸಲು ಸಿದ್ಧರಾಗಿದ್ದಾರೆ. ಸಾಲು ಮರಗಳನ್ನು ಬೆಳೆಸಬೇಕು ಎನ್ನುವುದು ಅವರ ಬಹು ವರ್ಷಗಳ ಕನಸಾಗಿದ್ದು, ಈ ಮೂಲಕ ನನಸಾಗುತ್ತಿದೆ. ಮಾಧವ ಉಳ್ಳಾಲ್ ಅವರು ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದು, ಈ ಗಿಡಗಳ ನಾಟಿ-ನಿರ್ವಹಣೆಗಾಗಿ ತಮ್ಮ ಕೆಲಸಕ್ಕೆ ಮೂರು ವರ್ಷಗಳ ರಜೆ ಮಾಡಿದ್ದಾರೆ. ಆಡಳಿತ ಮಂಡಳಿಯೂ ಅವರಿಗೆ ಸಹಕಾರ ನೀಡಿದೆ.

    ಅರಣ್ಯ ಇಲಾಖೆಯ ನಗರ ಹಸುರೀಕರಣ ಕಾರ್ಯಕ್ರಮದ ಭಾಗವಾಗಿ ತಲಪಾಡಿಯಿಂದ ನಂತೂರುವರೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಿಡನೆಡುವ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ಮಾಧವ ಉಳ್ಳಾಲ್ ಬೆನ್ನೆಲುಬಾಗಿ ನಿಂತಿದ್ದಾರೆ. ಒಂದು ವರ್ಷದ ಬಳಿಕ ಗಿಡಗಳ ನಿರ್ವಹಣೆಯನ್ನೂ ಅವರೇ ಮಾಡಲಿದ್ದಾರೆ.
    ಶ್ರೀಧರ್, ವಲಯ ಅರಣ್ಯಾಧಿಕಾರಿ, ಮಂಗಳೂರು

    ಭೂಮಿಯ ತಾಪಮಾನ ಕಡಿಮೆ ಮಾಡುವುದು, ಅಂತರ್ಜಲ ಪ್ರಮಾಣವನ್ನು ಹೆಚ್ಚಿಸುವುದು, ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸುವುದು, ವಾಯು ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಗಿಡಗಳನ್ನು ನಡೆಲಾಗಿದೆ. ಹಲವು ವರ್ಷಗಳ ಕನಸು ಈಗ ನನಸಾಗುತ್ತಿದೆ.
    ಮಾಧವ ಉಳ್ಳಾಲ್, ಪರಿಸರ ಪ್ರೇಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts