More

    ಯುವಕನಿಂದ ಜೀವ ಬೆದರಿಕೆ, ಶಾಸಕ ಸಿದ್ದು ಸವದಿ ಸ್ಪಂದನೆ ಅವಶ್ಯ

    ತೇರದಾಳ: ಮನೆ ಬಿಟ್ಟು ಹೋಗಿ ಇಲ್ದಿದ್ರೆ ಹೊರಗೆ ಹ್ಯಾಂಗ್ ಹಾಕಬೇಕು ಅಂತ ನಮಗೆ ಗೊತ್ತಿದೆ ಅನ್ತಾರೆ. ಎರಡು ಸಣ್ಣ ಕೂಸಗಳನ್ನ ಕಟ್ಕೊಂಡು ಎಲ್ಲಿ ಇರಲಿ ? ನಮಗೆ ನ್ಯಾಯ ಸಿಗದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡ್ಕೊಳ್ತಿನಿ ಎಂದು ನೊಂದ ವಿಧವೆಯೊಬ್ಬರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

    ತೇರದಾಳ ಪಟ್ಟಣದ ಸವದಿ ನಗರ (ಬಸವನಗರ) ದ ಮನೆ ಸಂಖ್ಯೆ 27ರಲ್ಲಿ ವಾಸವಿರುವ ವಿಧವೆ ಜ್ಯೋತಿ ನಾಯಕ ಅವರ ಗಂಡ ಅಶೋಕ ಮೂರು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎರಡು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇದರ ನಡುವೆ ಪಟ್ಟಣದ ದಾನೇಶ ತಮ್ಮಣ್ಣ ಗುಡ್ಡಿ ಎಂಬ ಯುವಕ ಇದ್ದಕ್ಕಿದ್ದಂತೆ ಕಾಲನಿಯ ಮನೆಗೆ ಬಂದು ಈ ಮನೆಯ ಹಕ್ಕು ಪತ್ರ ನಮ್ಮದು ಇದೆ. ನೀನು ಮನೆಯನ್ನು ಖಾಲಿ ಮಾಡಬೇಕು. ಇಲ್ಲದಿದ್ದರೆ ಮನೆಯಿಂದ ಹೇಗೆ ಹೊರಗೆ ಹಾಕಬೇಕು ಅಂತ ನನಗೆ ಗೊತ್ತಿದೆ. ನನಗೆ ರಾಜಕೀಯ ಪ್ರಭಾವಿ ವ್ಯಕ್ತಿಗಳು ಮತ್ತು ಅಧಿಕಾರಿಗಳು ಗೊತ್ತಿದ್ದಾರೆ ಎಂದು ಯುವಕ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಜ್ಯೋತಿ ನಾಯಕ ಹೇಳಿದರು.

    ನನಗೆ ನ್ಯಾಯ ಸಿಗದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಮ್ಮ ಮನೆಗೆ ಪೊಲೀಸರು ಕೂಡ ಬಂದು ಹೋಗುತ್ತಿದ್ದರಿಂದ ತುಂಬ ಭಯ ಆಗುತ್ತಿದೆ ಎಂದು ಸುದ್ದಿಗಾರರ ಮುಂದೆ ಕಣ್ಣೀರು ಹಾಕಿದರು. ಧಮ್ಕಿ ಹಾಕುತ್ತಿರುವ ಗುಡ್ಡಿ ಎನ್ನುವ ವ್ಯಕ್ತಿ ಎಂಟು ವರ್ಷಗಳಿಂದ ಸವದಿನಗರ ಮನೆಗೆ ಬಾರದೆ ಈಗ ಇದ್ದಕ್ಕಿದ್ದಂತೆ ಬಂದು ಮನೆ ಖಾಲಿ ಮಾಡುವಂತೆ ಪೀಡಿಸುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

    ಹಕ್ಕುಪತ್ರ ವಾಪಸ್ ಪಡೆದ ಅಧಿಕಾರಿಗಳು
    ಹಾಲಿ ಸಿಎಂ ಬಿ.ಎಸ್. ಯಡಿಯೂರಪ್ಪ 2012 ರಲ್ಲಿ ಸಿಎಂ ಇದ್ದಾಗ ತೇರದಾಳ ಪಟ್ಟಣದ ನಿರಾಶ್ರಿತ ಜನರಿಗಾಗಿ ಮಂಜೂರು ಮಾಡಿದ್ದ ಅಂದಾಜು ಇನ್ನೂರಕ್ಕೂ ಅಧಿಕ ಮನೆಗಳ ಹಕ್ಕುಪತ್ರಗಳನ್ನು ಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಸಮ್ಮುಖದಲ್ಲಿ ವಿತರಿಸಿ ಬಸವನಗರ ಉದ್ಘಾಟಿಸಲಾಯಿತು. ಈ ಬಡಾವಣೆ ಶಾಸಕರ ಕೊಡುಗೆಯಾಗಿದ್ದರಿಂದ ಅದು ಸವದಿನಗರ ಎಂದು ಹೆಸರುವಾಸಿಯಾಗಿದೆ. ನೊಂದ ವಿಧವೆ ಹೇಳುವಂತೆ ತನಗೆ ಕೊಟ್ಟಿದ್ದ ಹಕ್ಕುಪತ್ರವನ್ನು ತಾಂತ್ರಿಕ ದೋಷದ ನೆಪದಲ್ಲಿ ಪುರಸಭೆ ಅಧಿಕಾರಿಗಳು ವಾಪಸ್ ಪಡೆದುಕೊಂಡಿದ್ದಾರೆ. ಹಾಗಾಗಿ ನಮ್ಮ ಮನೆ ನಮಗೆ ಇರುತ್ತೆ ಎಂದುಕೊಂಡ ಕುಟುಂಬ ಅದೇ ಮನೆಯಲ್ಲಿ ವಾಸವಾಗುತ್ತ ದಿನ ಕಳೆದಾಗ ಅವರ ಪತಿ ಅಶೋಕ ಏಕಾಏಕಿ ನಿಧನರಾಗಿದ್ದಾರೆ. ನಂತರ ಯುವಕ ದಬ್ಬಾಳಿಕೆ ಶುರು ಮಾಡಿದ್ದಾನೆ. ಇಲ್ಲಿನ ಕೆಲವೊಂದು ಮನೆಗಳು ಮೂರ‌್ನಾಲ್ಕು ಜನರ ಹೆಸರಿನಲ್ಲಿವೆ ಎಂದು ವಿಧವೆ ದೂರಿದ್ದಾರೆ. ಪುಟ್ಟ ಮಕ್ಕಳೊಂದಿಗೆ ಜೀವಿಸಲು ಕಷ್ಟ ಪಡುತ್ತಿರುವ ಮಹಿಳೆಗೆ ಮನೆಯನ್ನು ಉಳಿಸಿಕೊಳ್ಳುವ ಜತೆಗೆ ಸ್ವರಕ್ಷಣೆಯ ಚಿಂತೆ ಕಾಡುತ್ತಿದೆ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ನೊಂದ ವಿಧವೆಯ ಕಷ್ಟಕ್ಕೆ ಸ್ಪಂದಿಸಬೇಕಿದೆ.

    2012ರಲ್ಲಿ ಹಕ್ಕುಪತ್ರ ವಿತರಣೆ ಮಾಡಿದ ಸಂದರ್ಭದಲ್ಲಿ ನಾನು ಇರಲಿಲ್ಲ. ಸದ್ಯ ಗುಡ್ಡಿ ಎನ್ನುವ ವ್ಯಕ್ತಿ ಹತ್ತಿರ ಹಕ್ಕುಪತ್ರ ಇರುವುದು ಕಂಡುಬಂದಿದೆ. ಆದರೆ ಗುಡ್ಡಿ ಎನ್ನುವವರು ಎಂಟು ವರ್ಷಗಳವರೆಗೆ ಜಾಗ ಕಬ್ಜಾ ತೆಗೆದುಕೊಳ್ಳದೆ ಇರುವುದು ಅವರ ತಪ್ಪು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    ಈರಣ್ಣ ದಡ್ಡಿ, ಮುಖ್ಯಾಧಿಕಾರಿ, ತೇರದಾಳ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts