More

    ಕೋತಿತೋಪು-ಬೆಳಗುಂಬ ರಸ್ತೆ ಒತ್ತುವರಿ ತೆರವು ; ಪೊಲೀಸರ ಭದ್ರತೆಯಲ್ಲಿ ಪಾಲಿಕೆ ಕಾರ್ಯಾಚರಣೆ

    ತುಮಕೂರು : ನಗರವಾಸಿಗಳ ನೆಮ್ಮದಿ ಕೆಡಿಸಿರುವ ರಸ್ತೆ ಒತ್ತುವರಿ ತೆರವುಗೊಳಿಸುವ ದಿಟ್ಟ ನಿರ್ಧಾರವನ್ನು ಪಾಲಿಕೆ ಕಾರ್ಯಗತಗೊಳಿಸಿದೆ. ಆಯುಕ್ತೆ ರೇಣುಕಾ ನೇತೃತ್ವದಲ್ಲಿ ನಗರದ ಕೋತಿತೋಪು-ಬೆಳಗುಂಬ ರಸ್ತೆಯಲ್ಲಿನ ಕಟ್ಟಡಗಳನ್ನು ತೆರವುಗೊಳಿಸಲಾರಂಭಿಸಿದೆ.

    ಶನಿವಾರ ಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್‌ನಲ್ಲಿ ಒತ್ತುವರಿ ತೆರವುಗೊಳಿಸಿದರು.
    ನಗರದ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿರುವ ಜತೆಗೆ ರಾಜ್ಯ ಸರ್ಕಾರದ ಅನುದಾನದಲ್ಲಿಯೂ ವಿವಿಧ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ನಗರದ ವಿವಿಧ ವಾರ್ಡ್‌ಗಳು, ಬಡಾವಣೆಗಳಲ್ಲಿ ರಸ್ತೆ ವಿಸ್ತರಣೆ ಉದ್ದೇಶದಿಂದ ಒತ್ತುವರಿ ತೆರವಿಗೆ ಪಾಲಿಕೆ ಮುಂದಾಗಿದ್ದು ಕೋತಿತೋಪು-ಬೆಳಗುಂಬ ರಸ್ತೆಯಿಂದ ಕಾರ್ಯಾಚರಣೆ ಆರಂಭಿಸಿದೆ.

    ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕಿಸುವುದರಿಂದ ಸ್ಮಾರ್ಟ್‌ಸಿಟಿ ವತಿಯಿಂದ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಗೆ ಅಡ್ಡಿಯಾಗಿದ್ದ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ನಾಗರಿಕರ ಹಿತದೃಷ್ಠಿಯಿಂದ ಪಾಲಿಕೆಗೆ ಸಹಕಾರ ನೀಡಬೇಕು ಹಾಗೂ ಸ್ವಯಂ ಪ್ರೇರಿತವಾಗಿ ಒತ್ತುವರಿ ತೆರೆವುಗೊಳಿಸಲು ಮಾದರಿಯಾಗಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ಮನವಿ ಮಾಡಿದರು.
    ಡಿವೈಎಸ್ಪಿ ಶ್ರೀನಿವಾಸ್, ನಗರ ಸಿಪಿಐ ನವೀನ್, ನಗರಠಾಣೆ ಪಿಎಸ್‌ಐ ಮಂಜುನಾಥ್ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು, ಪಾಲಿಕೆ ಸಿಬ್ಬಂದಿ ಒತ್ತುವರಿಯಾಗಿದ್ದ ಈಗಾಗಲೇ ಗುರುತು ಮಾಡಲಾಗಿದ್ದ ಜಾಗ ತೆರವುಗೊಳಿಸಿದರು.

    ಸ್ಮಾರ್ಟ್‌ರಸ್ತೆಯಾಗಿ ಅಭಿವೃದ್ಧಿ: ಬೆಳಗುಂಬ-ಕೋತಿತೋಪು ರಸ್ತೆಯನ್ನು ಸ್ಮಾರ್ಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆಯಿಂದ ತಮ್ಮಯ್ಯ ಆಸ್ಪತ್ರೆವರೆಗೆ ಒತ್ತುವರಿ ತೆರವುಗೊಳಿಸಲು ಕೆಲವು ಅಡೆತಡೆಗಳಿದ್ದವು, ಈಗ ಆಯುಕ್ತರ ನೇತೃತ್ವದಲ್ಲಿ ಅಡೆತಡೆ ನಿವಾರಿಸಿ ತೆರವುಗೊಳಿಸಲಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ ತಿಳಿಸಿದರು.

    ತುಮಕೂರು ವೇಗವಾಗಿ ಬೆಳೆಯುತ್ತಿದ್ದು ವಿವಿಧ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ.ಅನುದಾನ ಬರುತ್ತಿದೆ, ಇದನ್ನು ಸದುಪಯೋಗಪಡಿಸಿಕೊಂಡು ನಗರವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಅಡ್ಡಿಯಾಗಿರುವ ಒತ್ತುವರಿ ತೆರವಿಗೆ ಕಾನೂನು ರೀತಿಯಲ್ಲಿಯೇ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕಾರ ನೀಡುವ ಮೂಲಕ ತುಮಕೂರು ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಕಾರಣರಾಗಬೇಕು.
    ರೇಣುಕಾ, ಆಯುಕ್ತೆ, ತುಮಕೂರು ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts