More

    ಕಬ್ಬಿನ ಗ್ಯಾಂಗ್ ಸದಸ್ಯರ ಕೋವಿಡ್ ಪರೀಕ್ಷೆ

    ತೇರದಾಳ: ಕಬ್ಬು ಬೆಳೆ ಕಟಾವಿಗೆ ಬಂದು ಕಾರ್ಖಾನೆಗಳು ಪ್ರಾರಂಭವಾಗುತ್ತಿದ್ದಂತೆ ಕಬ್ಬು ಕಟಾವು ಮಾಡಲು ರಾಜ್ಯ ಸೇರಿದಂತೆ ಮಹಾರಾಷ್ಟ್ರದಿಂದ ನೂರಾರು ಜನರಿಂದ ಕೂಡಿದ ಕಬ್ಬಿನ ಗ್ಯಾಂಗ್‌ಗಳು ಬಂದಿರುವುದರಿಂದ ಕೋವಿಡ್-19 ಹರಡುವ ಸಂಭವವಿರುತ್ತದೆ. ಹಾಗಾಗಿ ಪಟ್ಟಣದ ಆರೋಗ್ಯ ಕೇಂದ್ರದ ವೈದ್ಯರ ತಂಡ ಮನೆಕಟ್ಟುವ ಗೌಂಡಿಗಳು ಹಾಗೂ ಕಬ್ಬಿನ ಗ್ಯಾಂಗ್‌ಗಳು ಬೀಡುಬಿಟ್ಟ ಸ್ಥಳಗಳಿಗೆ ತೆರಳುವ ಮೂಲಕ ಅವರ ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ.

    ಈಗಾಗಲೇ ಮೂರು ನೂರಕ್ಕೂ ಅಧಿಕ ಜನ ಕಬ್ಬಿನ ಗ್ಯಾಂಗ್‌ಮನ್‌ಗಳ ಟೆಸ್ಟಿಂಗ್ ಆಗಿದೆ. ಅಲ್ಲದೇ ಸರ್ಕಾರ ಹಾಗೂ ಸರ್ಕಾರೇತರ ಕ್ಷೇತ್ರಗಳಲ್ಲೂ ಯಾವುದೇ ವಿದ್ಯಾರ್ಥಿ, ನೌಕರದಾರ, ಸಿಬ್ಬಂದಿ ನಿಯೋಜಿತ ಕಾರ್ಯಕ್ಕೆ ಪ್ರವೇಶವಾಗಬೇಕಾದರೇ ಕೋವಿಡ್-19ಟೆಸ್ಟ್ ಕಡ್ಡಾಯವಾಗಿರುವುದರಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಟೆಸ್ಟಿಂಗ್ ಕಾರ್ಯ ನಡೆಯುತ್ತಿದೆ. ಏತನ್ಮಧ್ಯೆ ಬಹುತೇಕ ಕೆಸ್‌ಗಳು ನೆಗೆಟಿವ್ ಆಗಿರುವುದರಿಂದ ಐನೂರಕ್ಕೆ ಸರಾಸರಿ ಒಂದರಂತೆ ಮಾತ್ರ ಪಾಸಿಟಿವ್ ಬರುತ್ತಿವೆ. ಮಹಾರಾಷ್ಟ್ರದಿಂದ ಬಂದಂತಹ ಕಬ್ಬಿನ ಗ್ಯಾಂಗ್‌ಮನ್‌ಗಳಲ್ಲಿಯೂ ಕೂಡ ನೆಗೆಟಿವ್ ಬರುವುದರ ಮೂಲಕ ಕರೊನಾ ಭಯ ಒಂದಿಷ್ಟು ದೂರವಾದಂತಾಗಿದೆ.

    ತಾಲೂಕಿಗೆ ಪ್ರಥಮ
    ಬಹುತೇಕವಾಗಿ ಎಲ್ಲ ಪಿಎಚ್‌ಸಿ ಕೇಂದ್ರಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಯುತ್ತಿದೆ. ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಡಿ.7ರಂದು 430ರಷ್ಟು ಪರೀಕ್ಷೆ ಮಾಡುವುದರ ಮೂಲಕ ಅಂದು ಜಿಲ್ಲೆಯಲ್ಲಿ ಅತಿ ಹೆಚ್ಚು ಪರೀಕ್ಷೆ ನಡೆಸಿದ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದೀಗ ನಿತ್ಯ 50-60ರಷ್ಟು ಪರೀಕ್ಷೆ ಮಾಡುವುದರ ಮೂಲಕ ತಾಲೂಕಿನಲ್ಲೇ ಅತಿ ಹೆಚ್ಚು ಪರೀಕ್ಷೆ ಮಾಡುತ್ತಿರುವ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    ಸ್ಥಳೀಯ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಕೂಡ ಚಾಲ್ತಿಯಲ್ಲಿದ್ದು, ದಿನಕ್ಕೆ 60ಕ್ಕೂ ಅಧಿಕ ರೋಗಿಗಳು ಬರುತ್ತಿದ್ದಾರೆ. ಅದರಲ್ಲಿ ಹೆಚ್ಚಾಗಿ ಜ್ವರ, ಮೈಕೈನೋವುಗಳಂತಹ ರೋಗಿಗಳೇ ಹೆಚ್ಚಾಗಿದ್ದಾರೆ ಎಂದು ವೈದ್ಯರು ತಿಳಿಸಿದರು.

    ನಮ್ಮ ಪಿಎಚ್‌ಸಿ ಯಲ್ಲಿ ನಿತ್ಯ 50ಕ್ಕೂ ಅಧಿಕ ಆರ್‌ಟಿಪಿಸಿಆರ್ ಟೆಸ್ಟಿಂಗ್ ನಡೆಯುತ್ತಿದೆ. ಈ ಮೂಲಕ ತಾಲೂಕಿಗೆ ಮೊದಲ ಸ್ಥಾನದಲ್ಲಿದೆ. ರ‌್ಯಾಪಿಡ್ ಟೆಸ್ಟ್ ಸದ್ಯಕ್ಕೆ ಚಾಲ್ತಿಯಲ್ಲಿ ಇಲ್ಲ. ಕಬ್ಬು ಕಟಾವು ಮಾಡುವ ಸ್ಥಳಗಳಿಗೆ ತೆರಳಿ ಟೆಸ್ಟ್ ಮಾಡುವ ಕಾರ್ಯ ಕೂಡ ಮಾಡಲಾಗಿದೆ. ಆದರೆ, ಎಲ್ಲವೂ ನೆಗೆಟಿವ್ ಕೆಸ್‌ಗಳೆ ಆಗಿವೆ.
    ಸುದರ್ಶನ ನಡೋನಿ, ವೈದ್ಯಾಧಿಕಾರಿ, ತೇರದಾಳ

    ಜಮಖಂಡಿ ತಾಲೂಕಿನಲ್ಲೆಡೆ ಆರ್‌ಟಿಪಿಸಿಆರ್ ಪರೀಕ್ಷೆ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಚಾಲ್ತಿಯಲ್ಲಿದೆ. ಅದರಲ್ಲೂ ತೇರದಾಳ ಪಿಎಚ್‌ಸಿ ವೈದ್ಯರು ಬಹಳಷ್ಟು ಕ್ರಿಯಾಶಿಲರಾಗಿ ಕಾರ್ಯನಿರ್ವಹಿಸುತ್ತ ಜಾಗಕ್ಕೆ ತೆರಳಿ ಪರೀಕ್ಷೆ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ ತೇರದಾಳ ಅತಿ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಿದ ಕೇಂದ್ರವಾಗಿದೆ.
    ಜಿ.ಎಸ್. ಗಲಗಲಿ, ತಾಲೂಕು ಆರೋಗ್ಯ ಅಧಿಕಾರಿ, ಜಮಖಂಡಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts