More

    ಪಾಠ ಕೇಳಲು ಕಾಡಿನಲ್ಲಿ ಡೇರೆ

    ಬಿ.ನರಸಿಂಹ ನಾಯಕ್

    ಬೈಂದೂರು: ಕೋವಿಡ್ -19ನಿಂದಾಗಿ ಸೆಪ್ಟೆಂಬರ್ ಬಂದರೂ ಶಾಲೆ, ಕಾಲೇಜುಗಳು ಬಾಗಿಲು ತೆರೆಯದೆ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಿತಿ ಎಲ್ಲ ಕಡೆಯಲ್ಲೂ ಇವೆ. ಈ ನಡುವೆ ಬೈಂದೂರಿನ ಕೆಲವು ಕಡೆ ಆನ್‌ಲೈನ್ ಪಾಠ ಕೇಳಲು ವಿದ್ಯಾರ್ಥಿಗಳು, ಪಾಲಕರು ಕಾಡಿನಲ್ಲಿ ಡೇರೆ ಹಾಕಿ ಕುಳಿತುಕೊಳ್ಳಬೇಕಾದ ಸ್ಥಿತಿಯೂ ಬಂದೊದಗಿದೆ.

    ಬೈಂದೂರು ಪಟ್ಟಣದ ಅನತಿ ದೂರದಲ್ಲಿರುವ ಕೆಲವು ಹಳ್ಳಿ ಪ್ರದೇಶಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಆನ್‌ಲೈನ್ ಕ್ಲಾಸ್‌ಗಾಗಿ ಪರದಾಡಬೇಕಾದ ಚಿಂತಾಜನಕ ಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಹುಡುಕುವುದೇ ಸಾಹಸವಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಹಳ್ಳಿಗಳಲ್ಲಿ ಮೊಬೈಲ್ ಮೂಲಕ ಶೈಕ್ಷಣಿಕ ಮಾಹಿತಿ ಸಂಗ್ರಹ ಕಷ್ಟವಾಗುತ್ತಿದೆ. ಮನೆಯಿಂದ ಎರಡು ಮೂರು ಕಿ.ಮೀ ದೂರ ನಡೆದು ನೆಟ್‌ವರ್ಕ್ ಸಿಗುವ ಸ್ಥಳ ಶೋಧಿಸಬೇಕು. ಬೆಳಗ್ಗೆ 9ರಿಂದ 12, ಸಾಯಂಕಾಲ 4ರಿಂದ 5.30ರ ತನಕ ನೆಟ್‌ವರ್ಕ್ ಹುಡುಕುತ್ತ ಕುಳಿತುಕೊಳ್ಳಬೇಕು. ಕೆಲವು ವಿದ್ಯಾರ್ಥಿಗಳು ಕಾಡಿನ ದಾರಿಯಲ್ಲಿ ಗುಡ್ಡದ ಮೇಲ್ಗಡೆ ಟಾರ್ಪಲ್ ಹಾಕಿ ಶೆಡ್ ಮಾಡಿ ಕುಳಿತುಕೊಳ್ಳುತ್ತಾರೆ. ಪಾಲಕರಿಗೂ ಕೂಡ ಇವರ ರಕ್ಷಣೆ ತಲೆನೋವಾಗಿದೆ. ಮಕ್ಕಳೊಂದಿಗೆ ಪಾಲಕರು ಕೂಡ ಕಾಡಿನ ಡೇರೆಯಲ್ಲಿ ಕುಳಿತುಕೊಳ್ಳುವಂತಾಗಿದೆ.

    ಬೈಂದೂರು ವ್ಯಾಪ್ತಿಯ ಹೊಸೂರು, ಗಂಗಾನಾಡು, ಅತ್ಯಾಡಿ, ಕ್ಯಾರ್ತೂರು, ಗೋಳಿಬೇರು ಮುಂತಾದ ಕಡೆ ಸಮರ್ಪಕ ನೆಟ್‌ವರ್ಕ್‌ಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಕಂಪನಿಗಳ ಸ್ಪಂದನೆ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ ಮೊಬೈಲ್ ಟವರ್ ಬಂದಿಲ್ಲ.

    ವಿದ್ಯಾರ್ಥಿಗಳ ರಕ್ಷಣೆ ಅಗತ್ಯ: ನಾವೆಷ್ಟೇ ಪ್ರಗತಿ ಸಾಧಿಸಿದ್ದೇವೆ ಎಂದರೂ ಇಂಥ ದೃಶ್ಯಗಳು ನಮ್ಮ ಅಭಿವೃದ್ಧಿಯನ್ನು ತೋರಿಸುತ್ತವೆ. ಹತ್ತಾರು ಅಪರಾಧ ಪ್ರಕರಣಗಳು ನಡೆಯುತ್ತಿರುವಾಗ ಆನ್‌ಲೈನ್ ಶಿಕ್ಷಣದ ಕಾರಣದಿಂದ ಕಾಡಿನಲ್ಲಿ ಕಲಿಯುವ ವಿದ್ಯಾರ್ಥಿಗಳ ರಕ್ಷಣೆ ಕುರಿತು ಶಿಕ್ಷಣ ಇಲಾಖೆ ಮತ್ತು ಆರಕ್ಷಕ ಇಲಾಖೆ ವಿಶೇಷ ಗಮನ ಹರಿಸಬೇಕಾದ ಅಗತ್ಯವಿದೆ.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ರೀತಿ ನೆಟ್‌ವರ್ಕ್ ಸಮಸ್ಯೆ ಆಗುತ್ತಿರುವ ವಿಷಯ ಇಲಾಖೆಯ ಗಮನದಲ್ಲಿದೆ. ಹಾಸ್ಟೆಲ್ ಆರಂಭದ ಕುರಿತು ಕಮಿಷನರ್ ಹಂತದಲ್ಲಿ ಸಿದ್ಧ್ದತೆ ನಡೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ವಠಾರ ಶಿಕ್ಷಣ ಕ್ರಮವಿದೆ. ಖಾಸಗಿ ಶಾಲೆಗಳ ಆನ್‌ಲೈನ್ ಶಿಕ್ಷಣದ ಕುರಿತು ಅಧ್ಯಾಪಕರು ನಿಗಾ ಇಡಲು ತಿಳಿಸಲಾಗಿದೆ. ಶಿಕ್ಷಕರು ಕೂಡ ಈ ಬಗ್ಗೆ ಗಮನ ಹರಿಸಲಿದ್ದಾರೆ.
    ಜ್ಯೋತಿ ಶ್ರೀನಿವಾಸ್ ಕ್ಷೇತ್ರ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts