More

    ನಗರದಲ್ಲಿ ಬೇಸಿಗೆ ಧಗೆ, ಸೀಯಾಳ ಪೂರೈಕೆ ಹೆಚ್ಚಳ

    ಮಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚಾಗುತ್ತಿದ್ದು, ಬಿಸಿಲಲ್ಲಿ ಹೊರಗಡೆ ಸುತ್ತಾಡಿದರೆ ಎಷ್ಟು ನೀರು ಕುಡಿದರೂ ಸಾಕಾಗುವುದಿಲ್ಲ. ತಣ್ಣನೆಯ ಸಾಫ್ಟ್‌ಡ್ರಿಂಕ್ಸ್ ಕುಡಿದು ಹೊಟ್ಟೆ ತಣ್ಣನೆ ಮಾಡಿದರೂ, ದಾಹ ತೀರುವುದಿಲ್ಲ. ದೇಹಾರೋಗ್ಯಕ್ಕೆ ಉತ್ತಮವಾದ ಸೀಯಾಳಕ್ಕೆ ಮೊರೆ ಹೋಗುವವರೂ ಸಂಖ್ಯೆಯೂ ನಗರದಲ್ಲಿ ಹೆಚ್ಚಾಗಿದೆ.

    ಪ್ರತಿ ವರ್ಷದಂತೆ ಈ ಸಲವೂ ಸೀಯಾಳಕ್ಕೆ ಬೇಡಿಕೆ ಕುದುರಿದೆ. ಜನವರಿಯಿಂದಲೇ ಅಲ್ಲಲ್ಲಿ ಸ್ಟಾಲ್‌ಗಳು, ತಳ್ಳುಗಾಡಿಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಪ್ರಸ್ತುತ ಬೇಡಿಕೆ ತಕ್ಕಂತೆ ಸೀಯಾಳ ಪೂರೈಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು. ನಗರಕ್ಕೆ ಮಂಡ್ಯ, ಕೆ.ಆರ್.ಪೇಟೆ, ಶ್ರವಣಬೆಳಗೊಳ, ಕಡೂರು, ಚಿಕ್ಕಮಗಳೂರು ಭಾಗಗಳಿಂದ ಸಪ್ಲೈ ಆಗುತ್ತದೆ. ಸ್ಥಳೀಯವಾಗಿ ಬೊಂಡ ಪೂರೈಕೆಯಾಗುವುದು ವಿರಳ. ತಮಿಳುನಾಡಿನಿಂದ ಗೆಂದಾಳೆ ಸೀಯಾಳ ಪೂರೈಕೆಯಾಗುತ್ತಿದೆ. ಕಳೆದ ವರ್ಷ ವ್ಯಾಪಾರವೇ ಇಲ್ಲದೆ ನಷ್ಟ ಅನುಭವಿಸಿದ್ದ ವ್ಯಾಪಾರಿಗಳು ಈ ಭಾರಿಯ ಸೀಸನ್‌ನಲ್ಲಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

    ದರದಲ್ಲಿ ಏರಿಕೆಯಿಲ್ಲ: ಗ್ರಾಹಕರಿಂದ ಬೇಡಿಕೆ ಹೆಚ್ಚಾದರೂ ಸದ್ಯ ದರದಲ್ಲಿ ಏರಿಕೆಯಾಗಿಲ್ಲ. ದೊಡ್ಡ ಗಾತ್ರದ ಸೀಯಾಳಗಳು 35 ರೂ. ಮತ್ತು ಸಣ್ಣ ಗಾತ್ರಕ್ಕೆ 25 ರೂ. ಇದೆ. ಕೆಲವು ವ್ಯಾಪಾರಿಗಳು 25 ರೂ. ಬೊಂಡ ಮಾತ್ರ ಮಾರಾಟ ಮಾಡುತ್ತಾರೆ. ಗೆಂದಾಳೆ ಬೊಂಡವೂ 40-45ರೂ. ದರದಲ್ಲಿ ಮಾರಾಟವಾಗುತ್ತಿದೆ. ಇಲ್ಲಿನ ಹೋಲ್‌ಸೇಲ್ ಖರೀದಿದಾರರು, ಘಟ್ಟದ ಮೇಲಿನ ವಿವಿಧ ಜಿಲ್ಲೆಗಳ ಏಜೆಂಟರ ಮೂಲಕ ಲಾರಿ, ಟೆಂಪೋಗಳಲ್ಲಿ ಸಾಕಷ್ಟು ಲೋಡ್ ತರಿಸಿ, ಗೋಡೌನ್‌ಗಳಲ್ಲಿ ಸಂಗ್ರಹಿಸುತ್ತಿದ್ದಾರೆ. ನಗರದ ವಿವಿಧೆಡೆ ಇರುವ ಗೋಡೌನ್‌ಗಳಿಂದ ಸ್ಥಳೀಯ ವರ್ತಕರು ದಿನಕ್ಕೆ 100-150ರಷ್ಟು ಕಾಯಿಗಳನ್ನು ಖರೀದಿಸಿ ಮಾರಾಟ ಮಾಡುತ್ತಾರೆ. ಕರೊನಾ ಸೀಯಾಳ ವ್ಯಾಪಾರಿಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಕೆಲಸ ಕಳೆದುಕೊಂಡ ಕೆಲವರು ಸೀಯಾಳ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ.

    ಕಳೆದ ವರ್ಷ ನಷ್ಟವೇ ಅಧಿಕ: ಕಳೆದ ವರ್ಷ ಬೇಸಿಗೆ ಆರಂಭದಲ್ಲೇ ಕಾಣಿಸಿಕೊಂಡಿದ್ದ ಕರೊನಾ ಸೀಯಾಳ ವ್ಯಾಪಾರಿಗಳ ಪಾಲಿಗೂ ಮಾರಕವಾಗಿ ಪರಿಣಮಿಸಿತ್ತು. ಹಠಾತ್ ಆಗಿ ಘೋಷಣೆಯಾದ ಲಾಕ್‌ಡೌನ್‌ನಿಂದಾಗಿ ಮುಂಗಡ ಪಾವತಿಸಿ, ಮಾರಾಟಕ್ಕೆ ತರಿಸಿಕೊಂಡಿದ್ದ ಸಾವಿರಾರು ಎಳನೀರು ಗೋದಾಮಿನಲ್ಲೇ ಬಾಕಿಯಾಗಿ ಹೋಲ್‌ಸೇಲ್ ವ್ಯಾಪರಿಗಳು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು. ಸೀಯಾಳ ಹೆಚ್ಚೆಂದರೆ ಒಂದು ವಾರದವರೆಗೆ ಇಡಬಹುದಾಗಿದ್ದು, ಬಲಿತರೆ ವ್ಯರ್ಥವಾಗುತ್ತದೆ. ಕಳೆದ ವರ್ಷ ಮೇ ತಿಂಗಳ ವೇಳೆಗೆ ಲಾಕ್‌ಡೌನ್‌ನಲ್ಲಿ ಕೆಲವೊಂದು ಸಡಿಲಿಕೆಗಳು ಮಾಡಲಾಯಿತಾದರೂ, ಸೀಯಾಳವನ್ನು ಕೇಳುವವರು ಇರಲಿಲ್ಲ. ಜತೆಗೆ ಪೂರೈಕೆಯೂ ಕಡಿಮೆಯಾಗಿತ್ತು.

    ಮುಂಬೈನತ್ತ ಸೀಯಾಳ: ಕರಾವಳಿಯಲ್ಲಿ ಬೇಸಿಗೆ ಅವಧಿಯಲ್ಲಿ ಮುಂಬೈನಲ್ಲೂ ಬೇಸಿಗೆ ಆರಂಭವಾಗತ್ತದೆ. ಏಪ್ರಿಲ್ ವೇಳೆಗೆ ಅಲ್ಲಿಯೂ ಸೀಯಾಳಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಅಲ್ಲಿ ದರವೂ 50-60 ರೂ. ಇರುವುದರಿಂದ, ರಾಜ್ಯದಿಂದ ಉತ್ತಮ ದರ್ಜೆಯ ಸೀಯಾಳ ಅಲ್ಲಿಗೆ ರವಾನೆಯಾಗುತ್ತದೆ. ಏಜೆಂಟರು ಉಳಿದೆಡೆ ಎರಡನೇ ದರ್ಜೆ ಕಾಯಿಗಳನ್ನು ಪೂರೈಸುತ್ತಾರೆ. ಅದು ಕೂಡಾ ಬೇಡಿಕೆ ತಕ್ಕಂತೆ ಪೂರೈಕೆ ಇರುವುದಿಲ್ಲ. ಸದ್ಯ ಮುಂಬೈನಿಂದ ಬೇಡಿಕೆ ಆರಂಭವಾಗದೇ ಇರುವುದರಿಂದ ಕರಾವಳಿ ಭಾಗಕ್ಕೆ ಉತ್ತಮ ಸೀಯಾಳ ರವಾನೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

    ಬೇಸಿಗೆಯ ಹೊಡೆತ ಆರಂಭವಾಗುತ್ತಿದ್ದು, ಸೀಯಾಳಕ್ಕೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯೂ ಆಗುತ್ತಿದೆ. ಒಂದೆರಡು ವಾರದಲ್ಲಿ ಬೇಡಿಕೆ ಮತ್ತಷ್ಟು ಏರುವ ನಿರೀಕ್ಷೆಯಿದೆ.
    – ಕಾರ್ತಿಕ್, ಹೋಲ್‌ಸೇಲ್ ಸೀಯಾಳ ವ್ಯಾಪಾರಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts