More

    ಸೀಯಾಳ ವ್ಯಾಪಾರಿಯ ವೃಕ್ಷ ಪ್ರೇಮ

    ಮಂಗಳೂರು: ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿಯ ಬಲ್ಮಠ ಸರ್ಕಾರಿ ಮಹಿಳಾ ಕಾಲೇಜು ಪಕ್ಕ, ಜ್ಯೋತಿ ಟಾಕೀಸ್ ಮುಂಭಾಗದ ಬೃಹತ್ ಹಾಲೆ(ಪಾಲೆ) ಮರದಡಿ ತಳ್ಳುಗಾಡಿಯಲ್ಲಿ ಸೀಯಾಳ ವ್ಯಾಪಾರ ಮಾಡುವ ವ್ಯಾಪಾರಿ ತನಗೆ ನೆರಳು ನೀಡುವ ಮರಕ್ಕೆ ಪ್ರತಿನಿತ್ಯ ಪೂಜೆ ಮಾಡಿ ವೃಕ್ಷ ಪ್ರೇಮದ ಜತೆಗೆ ಧಾರ್ಮಿಕ ನಂಬಿಕೆಯನ್ನೂ ಕಾಪಾಡಿಕೊಂಡು ಬರುತ್ತಿದ್ದಾರೆ.

    ವರ್ಷದ ಹಿಂದೆ ರಸ್ತೆ ವಿಸ್ತರಣೆಗಾಗಿ ಮರ ಕಡಿಯಲು ಮುಂದಾದಾಗ ಪರಿಸರ ಪ್ರೇಮಿಗಳು ವಿರೋಧಿಸಿದ್ದರಿಂದ ಅದು ಉಳಿದಿತ್ತು. ಬಳಿಕ ಯಾರೋ ಈ ಮರ ಕದ್ರಿಯ ದೈವಕ್ಕೆ ಸಂಬಂಧಿಸಿದ್ದು, ಮರ ಕಡಿದವರಿಗೆ ದೈವದ ಶಾಪ ತಟ್ಟಲಿದೆ ಎಂಬ ಬೋರ್ಡ್ ಅಳವಡಿಸಿದ್ದರು. ಇಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿರುವ ಸತ್ಯನಾರಾಯಣ ಜನಾರ್ದನ ದೇವಾಡಿಗ ಎಂಬುವರು ಕದ್ರಿಯವರಾಗಿದ್ದು, ದೈವಭಕ್ತರು.

    ಕದ್ರಿಗೆ ಸಂಬಂಧಿಸಿದ ಮರ ಎಂದು ತಿಳಿದು ಮರಕ್ಕೆ ಹೂವು ಇಟ್ಟು, ಊದುಬತ್ತಿ ಹಚ್ಚಿ ಪೂಜೆ ಮಾಡಿಯೇ ವ್ಯಾಪಾರ ಆರಂಭಿಸುತ್ತಿದ್ದಾರೆ. ಆರು ತಿಂಗಳಿಂದ ಬೆಳಗ್ಗೆ ಸ್ಥಳಕ್ಕೆ ಬರುವ ಮೊದಲು ಮರಕ್ಕೆ ಕೈಮುಗಿಯುತ್ತಾರೆ. ರಾತ್ರಿ 7ರವರೆಗೆ ಸ್ಥಳದಲ್ಲಿ ವ್ಯಾಪಾರ ಮಾಡುತ್ತಾರೆ. ಮರ ಐದು ವರ್ಷದಿಂದ ನೆರಳು ನೀಡುತ್ತಿದೆ. ಆ ನೆಪದಲ್ಲಾದರೂ ಮರಕ್ಕೆ ಪೂಜೆ ಮಾಡುವುದರಿಂದ ನಷ್ಟವಿಲ್ಲ. ಮೊದಲು ಈ ಭಾಗದಲ್ಲಿ ಹಲವು ಮರಗಳಿತ್ತು. ಆದರೆ, ಅಭಿವೃದ್ಧಿ ಹಿನ್ನೆಲೆಯಲ್ಲಿ ಕಡಿದು ಹಾಕಿದ್ದಾರೆ. ಇದಾದರೂ ದೀರ್ಘಕಾಲ ಉಳಿಯಲಿ ಎನ್ನುತ್ತಾರೆ ಸತ್ಯನಾರಾಯಣ.

    ಮರದ ಬುಡದಲ್ಲಿ ಐದು ವರ್ಷಗಳಿಂದ ಬೊಂಡ ವ್ಯಾಪಾರ ಮಾಡುತ್ತಿದ್ದೇನೆ. ಆದರೆ ಪೂಜೆ ಮಾಡುತ್ತಿರುವುದು ಆರೇಳು ತಿಂಗಳಿಂದ. ವ್ಯಾಪಾರಕ್ಕೆ ಮೊದಲು ಮರಕ್ಕೆ ನಮಿಸಿ ವಹಿವಾಟು ಆರಂಭಿಸುತ್ತಿದ್ದೇನೆ. ಮರ ಕದ್ರಿಯ ದೈವಕ್ಕ್ಕೆ ಸಂಬಂಧಪಟ್ಟಿದ್ದು ಎಂದು ಬೋರ್ಡ್ ಕೂಡ ಹಾಕಿದ್ದಾರೆ. ಮರಗಿಡ ಸಂರಕ್ಷಣೆಯಾದರೆ ಮಾತ್ರ ನಾವು ಬದುಕಲು ಸಾಧ್ಯ.
    – ಸತ್ಯನಾರಾಯಣ ಜನಾರ್ದನ ಶೇರಿಗಾರ್, ಸೀಯಾಳ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts