More

    ಹತ್ತು ತಿಂಗಳಿಂದ ಸಿಗದ ವೇತನ… ಹೇಗೆ ಸಾಗಿಸೋದು ಜೀವನ?

    ಬೆಳಗಾವಿ: ಅತಿವೃಷ್ಟಿ, ಕೋವಿಡ್-19 ಸಂದರ್ಭದಲ್ಲಿಯೂ ರಜೆ ಪಡೆಯದೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ 10 ತಿಂಗಳಿಂದ ವೇತನ ನೀಡಿಲ್ಲ. ಹೀಗಾಗಿ ಹಬ್ಬಗಳಿಗೆಂದು ರಜೆ ನೀಡಿದ್ದರೂ ಮನೆಗೆ ಹೋಗಲು ನೌಕರರು ಹಿಂದೇಟು ಹಾಕುತ್ತಿದ್ದಾರೆ.

    ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಇಲಾಖೆ, ಶಿಕ್ಷಣ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಮಾರು 1,650ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ಸಿಬ್ಬಂದಿ ಕೊರತೆ: ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಕಾರಣವೊಡ್ಡಿ, ಸಿಬ್ಬಂದಿ ನಿಯೋಜಿಸಿಕೊಂಡಿರುವ ಎನ್‌ಜಿಒಗಳು 10 ತಿಂಗಳಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಹೀಗಾಗಿ ಸಿಬ್ಬಂದಿ ಸಂಬಳ ಸಿಗದೆ ಪರದಾಡುತ್ತಿದ್ದಾರೆ. ಜತೆಗೆ ಅನೇಕ ಕಡೆ ಸಿಬ್ಬಂದಿ ಕೊರತೆಯೂ ಇರುವುದರಿಂದ ಇರುವ ಸಿಬ್ಬಂದಿಗಳಿಗೆ ಕೆಲಸದ ಒತ್ತಡವೂ ಹೆಚ್ಚಿದ್ದು, ಅನೇಕರು ಕೆಲಸ ಬಿಡುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.

    ಜೀವನ ಬಲು ಕಷ್ಟ: ಚಾಲಕ, ಕ್ಲರ್ಕ್ ದರ್ಜೆಯ ಕೆಳ ಹಂತದ ಸಿಬ್ಬಂದಿ ಸಂಬಳ ಸಿಗದೆ ಕುಟುಂಬ ನಿರ್ವಹಣೆ ಮಾಡಲು ಕಸರತ್ತು ಮಾಡುತ್ತಿದ್ದಾರೆ. ಇಲಾಖೆಯ ಮೇಲಾಧಿಕಾರಿಗಳಿಂದಲೇ ಅನೇಕರು ಕೈಗಡವಾಗಿ ಹಣ ಪಡೆದು ಜೀವನ ಸಾಗಿಸುತ್ತಿದ್ದಾರೆ. ಬಾಕಿ ವೇತನ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ, ಸಂಸ್ಥೆಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ. ನಿತ್ಯದ ಜೀವನ ಸಾಗಿಸುವುದು ಬಲು ಕಷ್ಟವಾಗುತ್ತಿದೆ ಎಂದು ಗುತ್ತಿಗೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

    ಪಿಎಫ್, ಇಎಸ್‌ಐ ಸೌಲಭ್ಯವೂ ಇಲ್ಲ

    ಲಾಕ್‌ಡೌನ್ ಅವಧಿ ಮುಗಿದ ಬಳಿಕ ಸಂಬಳ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಈವರೆಗೂ ವೇತನ ನೀಡಿಲ್ಲ. ಈ ತಿಂಗಳಾದರೂ ಸಂಬಳ ಸಿಗಬಹುದು ಎಂದು ನಂಬಿ ನಂಬಿ ಸುಸ್ತಾಗಿದ್ದೇವೆ. ಹತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ಹೊರ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕೆಲಸ ಮಾಡುತ್ತಿದ್ದೇವೆ. ನಮಗೆ ಮಾಸಿಕ ವೇತನ ಹೊರತುಪಡಿಸಿ ಪಿಎಫ್, ಇಎಸ್‌ಐ ಯಾವುದೇ ಸೌಲಭ್ಯವೂ ಇಲ್ಲ. ಮಾಸಿಕ ವೇತನದಲ್ಲಿ ಪಿಎಫ್, ಇಎಸ್‌ಐಗಾಗಿ ಹಣ ಕಡಿತವಾಗುತ್ತಿದೆ. ಆದರೆ, ಇಲ್ಲಿಯವರೆಗೆ ಪಿಎಫ್ ಖಾತೆ ಮಾಹಿತಿ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಹೊರ ಗುತ್ತಿಗೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹೊರ ಗುತ್ತಿಗೆ ನೌಕರರಿಗೆ ವೇತನ ಬಿಡುಗಡೆ ಮಾಡುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ಎಲ್ಲ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು.
    |ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts