More

    ಬೇಡಿದ ವರವ ಕರುಣಿಸುವ ದೈವ

    ಲೋಕೇಶ್ ಎಂ. ಐಹೊಳೆ ಜಗಳೂರು
    ತಾಲೂಕಿನ ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ಬೇಡಿದ ವರವ ಕರುಣಿಸುವ ಆರಾಧ್ಯ ದೈವ. ಈ ಭಾಗದಲ್ಲಿ ಅಪಾರ ಮಹಿಮೆ ಹೊಂದಿರುವ ಪುಣ್ಯಕ್ಷೇತ್ರ.

    ಕಲ್ಲೇಶ್ವರ ಸ್ವಾಮಿ ನೆಲೆಸಿರುವ ಕಾರಣಕ್ಕೆ ಗ್ರಾಮಕ್ಕೆ ಕಲ್ಲೇದೇವರಪುರ ಎಂಬ ಹೆಸರು ಬಂದಿರುವ ಪ್ರತೀತಿ ಇದೆ. ಈ ದೇಗುಲವು ಗ್ರಾಮದ ಮಧ್ಯ ಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ 11, 12ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಗರ್ಭಗೃಹ ಅಂತರಾಳ, ನವರಂಗ, ಮಹಾಮಂಟಪ, ನಂದಿ ಮಂಟಪ, ಉಯ್ಯಲೆ ಕಂಬ ಹಾಗೂ ಮಹಾದ್ವಾರ ಗೋಪುರ ಒಳಗೊಂಡ ವಿಸ್ತಾರವಾದ ದೇವಾಲಯವಾಗಿದೆ.

    ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಕಪ್ಪು ಶಿಲೆಯಲ್ಲಿ ಕೆತ್ತಲಾದ ನುಣುಪಾದ ಶಿವಲಿಂಗವಿದೆ. ನವರಂಗದ ಹೊಯ್ಸಳ ಶೈಲಿಯ ನಾಲ್ಕು ಕಂಬಗಳಿವೆ. ನವರಂಗದಲ್ಲಿ ಶಿವಲಿಂಗಕ್ಕೆ ಎದುರಾಗಿ ನಂದಿ ಪ್ರತಿಷ್ಠಾಪಿಸಲಾಗಿದೆ. ನವರಂಗದಲ್ಲಿ ಗಣೇಶ ಹಾಗೂ ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾದ ಸೂರ್ಯನ ಮೂರ್ತಿ ಇದೆ. ಮುಖಮಂಟಪದ ಎದುರಿನಲ್ಲಿ ನಂದಿ ಶಿಲ್ಪವಿದ್ದು, ಇದನ್ನು ಅಂಕಲಿ ಬಸವಣ್ಣ ಎಂದು ಕರೆಯುತ್ತಾರೆ.

    ನವರಂಗದ ಮುಂಭಾಗದ ಮಹಾಮಂಟಪವು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಮಂಟಪದ ಇಕ್ಕೆಲಗಳಲ್ಲಿ ವೀರಭದ್ರ ಹಾಗೂ ಗೌರಮ್ಮ ದೇವರ ಗರ್ಭಗೃಹಗಳಿವೆ. ಮಹಾ ಮಂಟಪದ ಬಲಭಾಗದಲ್ಲಿ ವೀರಗಲ್ಲು ಇದ್ದು, ಇದನ್ನು ಈರಗಾರ ಹುಚ್ಚೇಶ್ವರ ಎಂದು ಕರೆಯುತ್ತಾರೆ. ಮಹಾಮಂಟಪದ ಮುಂಭಾಗದಲ್ಲಿ ನಂದಿ ಇದ್ದು ತೊಟ್ಟಿಪೆಳೆ ಬಸವಣ್ಣ ಬೇಡಿದ ವರವ ಕರುಣಿಸುವ ದೈವಎಂದು ಕರೆಯುತ್ತಾರೆ. ಗರ್ಭಗೃಹದ ಮೇಲೆ ಪಾಂಸನ ಮಾದರಿ ಶಿಖರವಿದೆ.

    ದೇವಾಲಯದ ಹಿಂಭಾಗದಲ್ಲಿ ದೊಡ್ಡ ಮಜ್ಜನದ ಮಂಟಪವಿದೆ. ಇಂತಹ ದೊಡ್ಡ ಮಜ್ಜನ ಮಂಟಪ ಇಲ್ಲವೆಂದು ಹೇಳಲಾಗುತ್ತದೆ. ಈ ದೇವರಿಗೆ ತ್ರಿಕಾ ಪೂಜೆ ವಿಶೇಷ ಪೂಜೆ ನಡೆಯುತ್ತವೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಬಿಲ್ವಾರ್ಚನೆ, ವೇದ ಮಂತ್ರ ಘೋಷ, ನಿಯಮಬದ್ಧವಾಗಿ ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ.

    ದೇಗುಲದ ಐತಿಹ್ಯ
    ಈ ದೇಗುಲವಿರುವ ಪ್ರದೇಶವು ಕಾಡುಪೊದೆಗಳಿಂದ ಕೂಡಿದ್ದು, ಪಕ್ಕದ ಬಯಲಿನಲ್ಲಿ ವ್ಯಾಪಾರಿಯೊಬ್ಬ ನೆಲದಲ್ಲಿದ್ದ ಕಲ್ಲಿಗೆ ಮತ್ತೆರಡು ಕಲ್ಲು ಇಟ್ಟು ಅಡುಗೆ ತಯಾರಿಸಲು ಯತ್ನಿಸಿದ. ಆಗ ಮಡಕೆಯಲ್ಲಿ ಅನ್ನದೊಂದಿಗೆ ರಕ್ತ ಕಾಣಿಸಿಕೊಂಡಿತು. ಇದನ್ನು ಕಂಡ ವ್ಯಾಪಾರಿ ಗಾಬರಿಯಿಂದ ದೇವರನ್ನು ಸ್ಮರಿಸಿದ, ಆಗ ದೇವರು, ನಾನು ಕಲ್ಲಲ್ಲ, ಕಲ್ಲಿನಾಥ, ಕಲ್ಲೇಶ್ವರ ಎಂಬ ಅಶರೀರವಾಣಿ ಕೇಳಿತಂತೆ. ಸಿಡಿದ ಕಲ್ಲನ್ನು ತೂಗಿ ಕೊಡು ನಿನಗೆ ಮಂಗಳವಾಗುತ್ತದೆ ಎಂದಿತಂತೆ. ಅದೇ ವ್ಯಾಪಾರಿ ಮುಂದೆ ಗುಡಿ ನಿರ್ಮಿಸಿದ ಎನ್ನಲಾಗುತ್ತದೆ.

    ವೈಶಾಖ ಮಾಸದಲ್ಲಿ ಜಾತ್ರೋತ್ಸವ
    ಕಲ್ಲೇಶ್ವರ ಜಾತ್ರೆ ಹಾಗೂ ನಂತರ ನಡೆಯುವ ದನಗಳ ಜಾತ್ರೆ ಪ್ರತಿ ವರ್ಷ ವೈಶಾಖ ಮಾಸದ ಹುಣ್ಣಿಮೆಯಲ್ಲಿ ಆರು ದಿನ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. 5ನೇ ದಿನ ಮಹಾರಥೋತ್ಸವ ನಡೆಯುತ್ತದೆ. ಸುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದ ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಗ್ರಾಮದ ಸಮೀಪದ ಬಸಪ್ಪನಹಟ್ಟಿ ಬಸವಣ್ಣನ ಗುಡಿಯ ಅಂಗಳದಲ್ಲಿ ಕಲ್ಲೇಶ್ವರ ಸ್ವಾಮಿಯ ಪರೇವು ಆಚರಿಸಲಾಗುತ್ತದೆ.

    ಶಾಸನಗಳು
    ಜಗಳೂರಿನ 31,32 (ಕ್ರಿ.ಶ. 1235), 33ನೇ (ಕ್ರಿ.ಶ 1279) ಶಾಸನದಲ್ಲಿ ಈ ದೇವರಿಗೆ ದಾನ ಶಾಸನ ಬಗ್ಗೆ ವಿವರಣೆ ಇದೆ. ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಕಾಲದಲ್ಲಿನ ನೀಡಿದ ದಾನವನ್ನು (ಕ್ರಿ.ಶ 1526) ಶಾಸನದಲ್ಲಿ ತಿಳಿಸಲಾಗಿದೆ.
    ಮಾರ್ಗ: ಈ ಗ್ರಾಮವು ಚಿತ್ರದುರ್ಗ- ಹೊಸಪೇಟೆ 50ರಲ್ಲಿ ಚಿತ್ರದುರ್ಗದಿಂದ 25 ಕಿ.ಮೀ, ಜಗಳೂರಿನಿಂದ 15 ಕಿ.ಮೀ. ದೂರದಲ್ಲಿದೆ.

    ಕಲ್ಲೇಶ್ವರ ಸ್ವಾಮಿ ಜಾತ್ರೆ ಮತ್ತು ರಥೋತ್ಸವ ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಲ್ಲಿ ಆರು ದಿನ ಗ್ರಾಮದಲ್ಲಿ ಸಡಗರ ಸಂಭ್ರಮ ಇರುತ್ತದೆ. ಸಾಕಷ್ಟು ವಿಶೇಷತೆ ಹೊಂದಿರುವ ಈ ದೇವಸ್ಥಾನವು ಲಕ್ಷಾಂತರ ಭಕ್ತರನ್ನು ಹೊಂದಿದೆ. ಇಲ್ಲಿ ಹೊತ್ತುಕೊಂಡ ಹರಕೆಗಳು ಈಡೇರಿದ ನಂತರ ಭಕ್ತರು ಬಂದು ವಿಶೇಷ ಪೂಜೆ, ಅನ್ನದಾಸೋಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನೂರಾರು ವರ್ಷಗಳಿಂದಲೂ ಪೂಜೆ ನಡೆಯುತ್ತ ಬಂದಿದೆ.
    ರುದ್ರಮುನಿ, ಪ್ರಧಾನ ಅರ್ಚಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts