More

    ಕಲಶೇಶ್ವರ ಸ್ವಾಮಿ ಮಹಾರಥೋತ್ಸವ

    ಕಳಸ: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾದ ಕಲಶೇಶ್ವರ ದೇವಾಲಯದಲ್ಲಿ ಮಂಗಳವಾರ ಶ್ರೀ ಕಲಶೇಶ್ವರನ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

    ಜಾತ್ರೆ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯವನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗೌಡಲು ಜನಾಂಗ ಸಿದ್ಧಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶ್ರೀ ಕಲಶೇಶ್ವರ ಸ್ವಾಮಿ ವಿರಾಜಮಾನವಾಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದರು.

    ಮಧ್ಯಾಹ್ನ 12 ಕ್ಕೆ ಸ್ತುತಿ ಘೊಷಗಳನ್ನು ಪಠಿಸುತ್ತಾ ಛತ್ರಿ, ಚಾಮರ, ಮಂಗಳ ವಾದ್ಯಗಳೊಂದಿಗೆ ಹೂವಿನ ಅಲಂಕಾರದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೊತ್ತು ತರಲಾಯಿತು. ಕಲಶೇಶ್ವರನ ಉತ್ಸವ ಮೂರ್ತಿಯನ್ನು ಬ್ರಹ್ಮ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರಿಗೆ ಫಲ, ಆರ್ಚನೆ ಮಾಡಿದರು. ತಾವು ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಇನ್ನಿತರೆ ಧಾನ್ಯಗಳನ್ನು ಸಮರ್ಪಿಸಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ನಂತರ ಅಲಂಕೃತಗೊಂಡ ಭವ್ಯ ಬ್ರಹ್ಮರಥವನ್ನು ಶ್ವೇತ ವಸ್ತ್ರದಾರಿಗಳು ರಥ ಎಳೆದರು.

    ರಾತ್ರಿ ಪಟ್ಟಣದ ರಾಜಬೀದಿಗಳಲ್ಲಿ ಗ್ರಾಮ ಪ್ರದಕ್ಷಿಣೆಗೆ ತೆರಳುವ ದೇವರು ಜಾತಿ ಮತ, ಬೇಧವಿಲ್ಲದೆ ಬ್ರಹ್ಮ ರಥದಲ್ಲಿಯೇ ಕುಳಿತು ಸಾಷ್ಟಾಂಗ ನಮಸ್ಕಾರ ಸ್ವೀಕರಿಸಿ ಮನೆ ಬಾಗಿಲಲ್ಲಿ ನೀಡುವ ಹಣ್ಣು ಕಾಯಿ ಫಲ ಪುಷ್ಪಗಳನ್ನು ಸ್ವೀಕರಿಸುತ್ತಾ ಕಳಸದ ಮಂಜಿನಕಟ್ಟೆಯವರೆಗೆ ಸಾಗಿತ್ತು. ರಾಜಬೀದಿಯಲ್ಲಿ ಸಾಗುವಾಗ ಪಟಾಕಿ, ಸಿಡಿಮದ್ದುಗಳು, ಚೆಂಡೆ, ಓಲಗ, ವಿವಿಧ ವೇಷ ಭೂಷಣದ ವಿನೋಧಾವಳಿಗಳು ಕಣ್ಣಿಗೆ ಹಬ್ಬತಂದು ಕೊಟ್ಟವು.

    ಹೊರನಾಡು, ಬಾಳೆಹೊಳೆ, ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು, ಮರಸಣಿಗೆ,ಹಿರೇಬೈಲು, ಜಾವಳಿ, ಬಸರಿಕಟ್ಟೆ ಮತ್ತಿತರ ಕಡೆಯಿಂದ ಜನಸಾಗರವೇ ಹರಿದುಬಂದಿತ್ತು. ಪ್ರತಿಯೊಬ್ಬರೂ ಶ್ರೀ ಕಲಶೇಶ್ವರನಿಗೆ ತಲೆಬಾಗಿ ಗಂಧ ಪ್ರಸಾದ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts