More

    ತಹಸೀಲ್ದಾರ್​ಗಳ ದಂಡಯಾತ್ರೆ!

    ಕೆಲಸ ಕಾರ್ಯಗಳಿಗೆ ಸಾರ್ವಜನಿಕರಿಗೆ ತೊಂದರೆ : ವಾರಕ್ಕೆ 3 ಬಾರಿ ಬರುವ ಪ್ರಭಾರಿ ತಹಸೀಲ್ದಾರ್​

    ಕೆಜಿಎಫ್​: ತಾಲೂಕು ಆಡಳಿತ ಕೇಂದ್ರದಲ್ಲಿ ಪೂರ್ಣಕಾಲಿಕ ತಹಸೀಲ್ದಾರ್​ ಇಲ್ಲದಿರುವುದರಿಂದ ದಿನನಿತ್ಯ ಕೆಲಸ ಕಾರ್ಯಗಳಿಗಾಗಿ ದೂರದ ಊರುಗಳಿಂದ ಆಗಮಿಸುವ ವಯೋವೃದ್ಧರು, ಹಿರಿಯ ನಾಗರಿಕರು, ಬಾಣಂತಿಯರು, ವಿದ್ಯಾರ್ಥಿಗಳು, ಅಂಗವಿಕಲರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಬರಿಗೈಲಿ ವಾಪಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
    ಕೆಜಿಎಫ್​ ತಹಸೀಲ್ದಾರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎನ್​.ಸುಜಾತಾ ಅವರನ್ನು ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರವು ಕಳೆದ ಜ. 30ರಂದು ಪಾವಗಡ ತಾಲೂಕಿಗೆ ವರ್ಗಾಯಿಸಿತ್ತು. ಆದರೆ ಕೆ.ಎನ್​.ಸುಜಾತಾ ಸರ್ಕಾರ ಸೂಚಿಸಿದ ಸ್ಥಳದಲ್ಲಿ ವಾರ ಕಳೆದರೂ ವರದಿ ಮಾಡಿಕೊಳ್ಳದೆ ಇದ್ದುದರಿಂದ ಅಂದಿನ ಕೋಲಾರ ಜಿಲ್ಲಾಧಿಕಾರಿ ವೆಂಕಟ್​ರಾಜಾ ಅವರು ೆ.8ರಂದು ಮತ್ತೊಂದು ಆದೇಶ ಹೊರಡಿಸಿ, ಕೆ.ಎನ್​.ಸುಜಾತಾಗೆ ಕೂಡಲೇ ಪಾವಗಡದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿ, ಕೆಜಿಎಫ್​ ತಹಸೀಲ್ದಾರ್​ ಆಗಿ ಬಂಗಾರಪೇಟೆ ತಹಸೀಲ್ದಾರ್​ ಎಂ.ದಯಾನಂದ ಅವರನ್ನು ಪ್ರಭಾರದಲ್ಲಿರಿಸಿ ಆದೇಶ ಹೊರಡಿಸಿದ್ದರು.
    ಇದಾದ ಬಳಿಕ ಫೆ.28ರಂದು ಸರ್ಕಾರ ಸ್ಥಳ ನಿರೀಕ್ಷಣೆಯಲ್ಲಿದ್ದಂತಹ ಎಚ್​.ಶ್ರೀನಿವಾಸ್​ ಅವರನ್ನು ಕೆಜಿಎಫ್​ ತಾಲೂಕಿಗೆ ವರ್ಗಾಯಿಸಿತ್ತು. ನಂತರ ಮೇ 10ರಂದು ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳು ನಡೆದು ಮೇ 13ರಂದು ಮತ ಎಣಿಕೆ ಕಾರ್ಯ ಮುಗಿದ ಬಳಿಕ ಚುನಾವಣಾ ನಿಮಿತ್ತ ಕೆಜಿಎಫ್​ಗೆ ವರ್ಗಾವಣೆಯಾಗಿ ಬಂದು ಕಾರ್ಯನಿರ್ವಹಿಸುತ್ತಿದ್ದ ಎಚ್​.ಶ್ರೀನಿವಾಸ್​ ಅವರನ್ನು ಜೂ.16ರಂದು ಬೆಂಗಳೂರು ದಣ ತಾಲೂಕಿನ ತಹಸೀಲ್ದಾರ್​ ಆಗಿ ವರ್ಗಾಯಿಸಿ ಆದೇಶ ಹೊರಡಿಸಿ, ಕೆಜಿಎಫ್​ ತಹಸೀಲ್ದಾರ್​ ಆಗಿ ಬಂಗಾರಪೇಟೆ ತಹಸೀಲ್ದಾರ್​ ರಶ್ಮಿ ಅವರನ್ನು ಪ್ರಭಾರದಲ್ಲಿರಿಸಿ ಆದೇಶ ಹೊರಡಿಸಿತ್ತು.

    ಕಡತ ವಿಲೇವಾರಿ ಬಾಕಿ:
    ಕಳೆದ ಒಂದೂವರೆ ತಿಂಗಳಿನಿಂದ ಕೆಜಿಎಫ್​ನಲ್ಲಿ ಪೂರ್ಣಕಾಲಿಕ ತಹಸೀಲ್ದಾರ್​ ಇಲ್ಲದೇ ಇರುವುದರಿಂದ ಕೆಜಿಎಫ್​ ತಾಲೂಕು ಕಚೇರಿಯಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ವಾಸಸ್ಥಳ ದೃಢೀಕರಣ, ಅಂಗವಿಕಲ ವೇತನ, ವಿಧವಾ ವೇತನ ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಮಾತ್ರ ನಡೆಯುತ್ತಿದ್ದು, ಆಸ್ತಿ ವರ್ಗಾವಣೆ, ತಕರಾರು ಅರ್ಜಿಗಳು, ಭೂ ಹಿಡುವಳಿ ಪತ್ರ ಇನ್ನಿತರ ಕೆಲಸ ಕಾರ್ಯಗಳಿಗಾಗಿ ತಹಸೀಲ್ದಾರ್​ ಬರುವಿಕೆಗಾಗಿ ಎದುರು ನೋಡುವಂತಾಗಿದೆ. ಈ ಕೆಲಸಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ನಡೆಸುವವರೇ ಇಲ್ಲದಂತಾಗಿದ್ದು, ಪೂರ್ಣಕಾಲಿಕ ತಹಸೀಲ್ದಾರ್​ರನ್ನು ಕೆಜಿಎಫ್​ ತಾಲೂಕಿಗೆ ವರ್ಗಾಯಿಸಿ ತಮ್ಮ ಕೆಲಸ ಕಾರ್ಯಗಳಿಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪ್ರಭಾರಿ ತಹಸೀಲ್ದಾರ್​ ಆಗಿ ರಶ್ಮಿ ಕಾರ್ಯನಿರ್ವಹಣೆ
    ಪ್ರಭಾರಿ ತಹಸೀಲ್ದಾರ್​ ರಶ್ಮಿ ಅವರು ವಾರಕ್ಕೆ ಮೂರು ಬಾರಿ ಕೆಜಿಎಫ್​ಗೆ ಬಂದು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ, ಕೆಜಿಎಫ್​ ತಾಲೂಕಿಗೆ ಹೋಲಿಸಿದರೆ ಬಂಗಾರಪೇಟೆ ತಾಲೂಕು ಭೌಗೋಳಿಕವಾಗಿ ದೊಡ್ಡದಾಗಿರುವುದರಿಂದ ತಹಸೀಲ್ದಾರ್​ ಅವರು ಸಂಪೂರ್ಣವಾಗಿ ತಮ್ಮನ್ನು ಕೆಜಿಎಫ್​ ತಾಲೂಕಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಜಮೀನಿನ ಖಾತೆ ವಿಚಾರವಾಗಿ ಕಳೆದ ಒಂದು ತಿಂಗಳಿನಿಂದ ಸುಮಾರು ನಾಲ್ಕೆದು ಬಾರಿ ತಾಲೂಕು ಕಚೇರಿಗೆ ಬಂದಿದ್ದು, ಇದುವರೆಗೆ ಯಾವುದೇ ಕೆಲಸವಾಗಿಲ್ಲ. ಊರಿನಲ್ಲಿ ಮಾಡುವ ಕೆಲಸ ಕಾರ್ಯಗಳನ್ನು ಬಿಟ್ಟು ಇಲ್ಲಿಗೆ ಬಂದು ಹೋಗಲು ತುಂಬಾ ಕಷ್ಟವಾಗಿದ್ದು, ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

    ವೆಂಕಟರಾಮಪ್ಪ, ಹಿರಿಯ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts