More

    ಅನಧಿಕೃತ ಶೆಡ್‌ಗಳಿಗೆ ತಹಸೀಲ್ದಾರ್ ದಾಳಿ

    ಶ್ರೀರಂಗಪಟ್ಟಣ: ಪಿತೃಪಕ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಾಗೂ ಸೂಕ್ತ ಸುರಕ್ಷತಾ ಕ್ರಮ ಅನುಸರಿಸದೆ ಪಿಂಡ ಪ್ರದಾನ ಮಾಡಿಸುತ್ತಿದ್ದ ಖಾಸಗಿ ವ್ಯಕ್ತಿಗಳ ಶೆಡ್‌ಗಳ ಮೇಲೆ ಸೋಮವಾರ ತಹಸೀಲ್ದಾರ್ ಎಂ.ವಿ.ರೂಪಾ ದಾಳಿ ನಡೆಸಿದರು.
    ಮಹಾಲಯ ಅಮಾವಾಸ್ಯೆ ಸಮೀಪಿಸುತ್ತಿದ್ದಂತೆ ಪಿಂಡ ಪ್ರದಾನ ಮಾಡಲು ಪುರಸಭೆ ವ್ಯಾಪ್ತಿಯ ಕಾವೇರಿ ಸಂಗಮ ಹಾಗೂ ಗೋಸಾಯ್ ಘಾಟ್ ಪ್ರದೇಶಕ್ಕೆ ಬೆಂಗಳೂರು, ತುಮಕೂರು, ಮೈಸೂರು ಸೇರಿ ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತಮ್ಮ ಜಮೀನಿಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಬೃಹತ್ ಶೆಡ್ ನಿರ್ಮಿಸಿದ್ದಾರೆ.

    ಜತೆಗೆ ಕೆಲ ವೈದಿಕರನ್ನು ನೇಮಿಸಿಕೊಂಡು ಅವರ ಮೂಲಕ ಪೂಜೆ, ಹವನಗಳಿಗೆಂದು ನೆಪ ಹೇಳಿ 5 ಸಾವಿರ ರೂ.ನಿಂದ 30 ಸಾವಿರ ರೂ.ವರೆಗೆ ಅಕ್ರಮವಾಗಿ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಏಕಾಏಕಿ ದಾಳಿ ನಡೆಸಿದರು.

    ಕೃಷಿ ಭೂಮಿಯಲ್ಲಿ ಅಕ್ರಮ ಶೆಡ್ ನಿರ್ಮಾಣ, ತೋಟದಲ್ಲಿ ವಿಶ್ರಮಿಸುವ ಧಾಮ(ಲಾಡ್ಜ್) ಮತ್ತು ಭೋಜನಾಲಯ(ಹೋಟೆಲ್ ಉದ್ದಿಮೆ)ವನ್ನು ವ್ಯವಹಾರಿಕ ಉದ್ದೇಶಕ್ಕೆ ನಡೆಸುತ್ತಿರುವುದು ಪತ್ತೆಯಾಯಿತು. ಇದರೊಂದಿಗೆ ಇಲ್ಲಿನ ಸ್ಥಳಗಳಲ್ಲಿ ಕಾರು ತಂದು ನಿಲ್ಲಿಸುವುದಕ್ಕೂ ಜನರಿಂದ ಅಕ್ರಮವಾಗಿ ಪಾರ್ಕಿಂಗ್ ಶುಲ್ಕವನ್ನು ವಸೂಲು ಮಾಡುತ್ತಿರುವುದು ಕಂಡುಬಂತು.
    ಈ ಕುರಿತು ಜಮೀನು ಮಾಲೀಕರಿಂದ ಮಾಹಿತಿ ಕೇಳಿದ ತಹಸೀಲ್ದಾರ್, ಜಮೀನಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕರು ಪಟ್ಟಣ ಪುರಸಭೆಯಿಂದ ಮಾನ್ಯತೆ ಪಡೆದಿರುವುದಾಗಿ ತಿಳಿಸಿದರು.
    ಇದಕ್ಕೊಪ್ಪದ ತಹಸೀಲ್ದಾರ್ ಸ್ಥಳದಲ್ಲೆ ಮಾಲೀಕರಿಗೆ ಇಲಾಖೆಯಿಂದ ತಿಳಿವಳಿಕೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಕೂಡಲೇ ಈ ಕಾರ್ಯಗಳನ್ನು ಸ್ಥಗಿತಗೊಳಿಸದಿದ್ದರೆ ವಿಪತ್ತು ನಿರ್ವಹಣ ಕಾಯ್ದೆಯಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.

    ಇದಲ್ಲದೆ, ಸಂಗಮ, ಗೋಸಾಯ್ ಘಾಟ್, ಸ್ನಾನಘಟ್ಟ ಮತ್ತು ಪಶ್ಚಿಮವಾಹಿನಿಯ ಕಾವೇರಮ್ಮ ಯಾತ್ರಿ ನಿವಾಸ ಸ್ಥಳದಲ್ಲಿ ದೈಹಿಕ ಅಂತರ, ಸ್ಯಾನಿಟೈಸರ್ ಮತ್ತು ಸುರಕ್ಷತೆ ಇಲ್ಲದಿರುವ ಕುರಿತು ಪರಿಶೀಲಿಸಿ ತಿಳಿವಳಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಿಸುವ ಜತೆಗೆ 10 ವರ್ಷದೊಳಗಿನ ಮಕ್ಕಳು ಹಾಗೂ 50 ವರ್ಷ ಮೇಲ್ಪಟ್ಟವರನ್ನು ಕಡ್ಡಾಯವಾಗಿ ನಿರ್ಬಂಧಿಸುವಂತೆ ತಾಕೀತು ಮಾಡಿದರು.
    ಶ್ರೀರಂಗಪಟ್ಟಣ ಟೌನ್ ಪಿಎಸ್‌ಐ ಶಿವನಂಜು, ಗ್ರಾಮ ಲೆಕ್ಕಾಧಿಕಾರಿ ಕುಬೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts