More

    ಹಸ್ತಪ್ರತಿಗಳ ಸಂರಕ್ಷಣೆಗೆ ತಂತ್ರಜ್ಞಾನದ ಮೊರೆ

    ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸಂಗ್ರಹಿಸಿರುವ ಸಾವಿರಾರು ಪುರಾತನ ಹಸ್ತಪ್ರತಿಗಳನ್ನು ತಂತ್ರಜ್ಞಾನದ ಸಹಾಯದಿಂದ ನೂರಾರು ವರ್ಷಗಳ ಕಾಲ ರಕ್ಷಿಸಿ, ಮುಂದಿನ ತಲೆಮಾರಿಗೆ ಪರಿಚಯಿಸಲು ವೇದಿಕೆ ಸಜ್ಜಾಗುತ್ತಿದೆ.

    ಈ ಸಂಬಂಧ ‘ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್’ ಹಾಗೂ ‘ಸೆಮಿಕಂಡೆಕ್ಟರ್ ವೇಪರ್ ಫಿಶ್’ ಎಂಬ ಎರಡು ತಂತ್ರಜ್ಞಾನಗಳ ಮೂಲಕ ಪುರಾತನ ಹಸ್ತಪ್ರತಿಗಳನ್ನು ಸಂರಕ್ಷಿಸಲು ಪ್ರಾಚ್ಯವಿದ್ಯಾ ಸಂಶೋಧನಾಲಯವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರ ನೇತೃತ್ವದಲ್ಲಿ ಬೆಂಗಳೂರಿನ ತಾರಾ ಪ್ರಕಾಶನದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

    ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ 70 ಸಾವಿರಕ್ಕೂ ಹೆಚ್ಚು ಪುರಾತನ ತಾಳೆಗರಿಗಳಿವೆ. ಅದನ್ನು ರಕ್ಷಿಸಿಡಲು ಹಾಗೂ ಹೊಸ ತಲೆಮಾರಿಗೆ ದಾಟಿಸಲು ಎರಡು ಹೊಸ ತಂತ್ರಜ್ಞಾನ ಸಹಕರಿಸಲಿವೆ.
    ಸಾಮಾನ್ಯವಾಗಿ ತಾಳೆಗರಿಗಳ ಮೇಲೆ ಅಕ್ಷರಗಳನ್ನು ಮೊಳೆಗಳಲ್ಲಿ ಕೆತ್ತಿ ಬಳಿಕ ನೈಸರ್ಗಿಕವಾದ ಶಾಯಿಯನ್ನು ಹಚ್ಚಲಾಗಿರುತ್ತದೆ. ವರ್ಷಗಳು ಕಳೆದಂತೆ ಅದು ಮಾಸಿ ಹೋಗುತ್ತದೆ ಅಥವಾ ಫಂಗಸ್ ಬಂದು ಪುಡಿಯಾಗುತ್ತದೆ. ಈ ನಿಟ್ಟಿನಲ್ಲಿ ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನ ಬಳಸಿ, ತಾಳೆಗರಿಗಳ ಫೋಟೋ ತೆಗೆಯಲಾಗುತ್ತದೆ. ಬಳಿಕ ಅದನ್ನು ಆರ್ಕೈವಲ್ ಪೇಪರ್ ಮೇಲೆ ಪ್ರಿಂಟ್ ಮಾಡಿ ಸಂರಕ್ಷಿಸಲಾಗುತ್ತದೆ. ಇದು ಅಂದಾಜು 200 ವರ್ಷ ಬಾಳಿಕೆ ಬರುತ್ತದೆ.

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ, ತಾರಾ ಪ್ರಕಾಶನದ ಸಂಸ್ಥಾಪಕ ಡಾ.ಮುಕುಂದ್ ಬುಧವಾರ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಭೇಟಿ ನೀಡಿ, ಸಂರಕ್ಷಿಸಿ, ಸಂಗ್ರಹಿಸಿಟ್ಟಿರುವ ತಾಳೆಗರಿಗಳನ್ನು ವೀಕ್ಷಿಸಿದರು. ಜತೆಗೆ ‘ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್’ ಹಾಗೂ ‘ಸೆಮಿಕಂಡೆಕ್ಟರ್ ವೇಪರ್ ಫಿಶ್’ ತಂತ್ರಜ್ಞಾನದ ಮೂಲಕ ಮುಂದಿನ ನೂರಾರು ವರ್ಷಗಳಿಗೆ ಸಂರಕ್ಷಿಸುವುದರ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಕೇಂದ್ರದಲ್ಲಿ ಸಂಗ್ರಹಿಸಿಡಲಾದ ‘ಕೌಟಿಲ್ಯನ ಅರ್ಥಶಾಸ್ತ್ರ’ ಹಾಗೂ ಇತರ ಪುರಾತನ ಗ್ರಂಥಗಳನ್ನು ಪರಿಶೀಲಿಸಿದರು.

    ಡಾ.ಮುಕುಂದ್ ಮಾತನಾಡಿ, ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಮಾಡುವ 14 ಯಂತ್ರಗಳು ಮಾತ್ರ ಪ್ರಪಂಚದಲ್ಲಿವೆ. ಅದರಲ್ಲಿ ಒಂದು ಬೆಂಗಳೂರಿನಲ್ಲಿದೆ. ಅದನ್ನು ಬಳಸಿಕೊಳ್ಳಬಹುದು. ಜತೆಗೆ ಆರ್ಕೈವಲ್ ಪೇಪರ್‌ಅನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
    ಮತ್ತೊಂದು ವೇಪರ್ ಫಿಶ್ ತಂತ್ರಜ್ಞಾನವು, ಸೆಮಿಕಂಡೆಕ್ಟರ್ ತಂತ್ರಜ್ಞಾನದಿಂದ ಕೆಲಸ ಮಾಡುತ್ತದೆ. ಈ ವಿಶೇಷ ಬಿಲ್ಲೆಯಂತಹ ವಸ್ತುವಿನ ಮೇಲೆ ಏನನ್ನಾದರೂ ಪ್ರಿಂಟ್ ಮಾಡಿ ಇಡಬಹುದು. 500 ವರ್ಷ ಕಳೆದ ಮೇಲೂ ಇದು ಹಾಗೆ ಇರುತ್ತದೆ. ನೀರು, ಬೆಂಕಿ ಯಾವುದೂ ಇದನ್ನು ನಾಶ ಮಾಡುವುದಿಲ್ಲ. ವೇಪರ್ ಫಿಶ್ ಒಂದು ಬಿಲ್ಲೆಯಲ್ಲಿ 600 ತಾಳೆ ಪ್ರತಿಯನ್ನು ಸಂಗ್ರಹಿಸಿಡಬಹುದು. ಚಿಕ್ಕ ತಾಳೆಪ್ರತಿಗಳಾದರೆ ಒಂದು ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು ಅಚ್ಚುಮಾಡಬಹುದು. ಇದನ್ನು ಓದಲು ಸೂರ್ಯನ ಬೆಳಕು ಹಾಗೂ ಭೂತಗನ್ನಡಿ ಇದ್ದರೆ ಸಾಕು. ಇಲ್ಲಿರುವ ಸಾವಿರಾರು ಪುರಾತನ ಗ್ರಂಥಗಳನ್ನು ಸಂರಕ್ಷಿಸಲು ನಾವು ಇವರೊಂದಿಗೆ ಕೈಜೋಡಿಸಿದ್ದೇವೆ. ಒಟ್ಟಿಗೆ ಕೆಲಸ ಮಾಡಿದರೆ ಇವೆಲ್ಲ ಜನಸಾಮಾನ್ಯರಿಗೂ ತಲುಪುವಂತಾಗುತ್ತದೆ ಎಂದರು.

    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಮಾತನಾಡಿ, ಕೆಲವು ದಿನಗಳ ಹಿಂದೆ ಇಲ್ಲಿರುವ ಅರ್ಥಶಾಸ್ತ್ರದ ಮೂಲ ಪ್ರತಿ ದುಸ್ಥಿತಿಯಲ್ಲಿದೆ ಎಂಬ ವರದಿ ಓದಿದ್ದೆ. ಅದರ ಬಗ್ಗೆ ಇಲ್ಲಿ ವಿಚಾರಿಸಿದಾಗ ಅದಕ್ಕೆ ಏನೂ ಅಗಿಲ್ಲ ಎಂದು ತಿಳಿದುಬಂತು. ಆದರೂ ಇದಕ್ಕೆ ಇಂದಲ್ಲ ನಾಳೆ ಸಂರಕ್ಷಣೆ ನೀಡಬೇಕು ಎಂದು ಮುಕುಂದ್ ಅವರನ್ನು ಸಂಪರ್ಕಿಸಿ, ವೈಜ್ಞಾನಿಕ ರೀತಿಯಲ್ಲಿ ತಂತ್ರಜ್ಞಾನದ ಸಹಾಯದಿಂದ ಸಂರಕ್ಷಿಸಿಡಲು ಅವರೊಂದಿಗೆ ಒಪ್ಪಂದ ಮಾಡಿಸಲು ಮುಂದಾಗಿದ್ದೇನೆ. ಈ ಬಗ್ಗೆ ಒಂದು ವರದಿ ತಯಾರಿಸಿ ಕೊಟ್ಟರೆ ಇದಕ್ಕೆ ಸೂಕ್ತ ಅನುದಾನ ಹಾಗೂ ಮುಂದಿನ ಕೆಲಸಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ, ಉನ್ನತ ಶಿಕ್ಷಣ ಸಚಿವರಿಗೆ ತಿಳಿಸಲಾಗುವುದು ಎಂದರು.

    ಮೈಸೂರು ವಿವಿ ಕಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಇಂತಹ ತಂತ್ರಜ್ಞಾನ ನಮ್ಮ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಬಹಳ ಅತ್ಯವಶ್ಯಕವಾದುದು. ಆದ್ದರಿಂದ ತಾರಾ ಪ್ರಕಾಶನದೊಂದಿಗೆ ಎಮ್‌ಒಯು ಮಾಡಿಕೊಳ್ಳುವ ಬಗ್ಗೆ ಕುಲಪತಿಗಳ ಜತೆ ಚರ್ಚಿಸಲಾಗುತ್ತದೆ ಎಂದರು. ಸಂಶೋಧನಾಲಯದ ನಿರ್ದೇಶಕರ ಡಾ.ಎಸ್.ಶಿವರಾಜಪ್ಪ, ಮೈಸೂರು ವಿವಿ ಕುಲಪತಿ ಆಪ್ತಸಹಾಯಕ ಡಾ.ಚೇತನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts