More

    ಆಯ್ಕೆ ಗೊಂದಲದಲ್ಲಿ ಭಾರತ; ಮೊದಲ ಟೆಸ್ಟ್‌ಗೆ ಶಾದೂಲ್-ರಹಾನೆ/ವಿಹಾರಿ ಪೈಪೋಟಿ

    ಸೆಂಚುರಿಯನ್: ದಕ್ಷಿಣ ಆಫ್ರಿಕಾದಲ್ಲಿ ಕಠಿಣ ಅಭ್ಯಾಸದ ಮೂಲಕ ಆತಿಥೇಯ ಸವಾಲಿಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಮೊದಲ ಟೆಸ್ಟ್ ಪಂದ್ಯದ ಆಡುವ 11ರ ಬಳಗದ ಸಂಯೋಜನೆಯ ಗೊಂದಲ ಕಾಡಲಾರಂಭಿಸಿದೆ. ಐವರು ಬೌಲರ್‌ಗಳ ಕಾರ್ಯತಂತ್ರ ಮುಂದುವರಿಸುವುದೇ ಅಥವಾ ಹೆಚ್ಚುವರಿ ಬ್ಯಾಟರ್ ಕಣಕ್ಕಿಳಿಸುವುದೇ ಎಂಬ ಗೊಂದಲ ಭಾರತಕ್ಕೆ ತಲೆನೋವು ತಂದಿದೆ.

    ಆಲ್ರೌಂಡರ್ ರವೀಂದ್ರ ಜಡೇಜಾ ಗೈರಿನಲ್ಲಿ ಭಾರತ ತಂಡ ಸಮತೋಲನ ಕಾಯ್ದುಕೊಳ್ಳಲು ಕಷ್ಟ ಪಡುವಂತಾಗಿದೆ. ಬೌಲಿಂಗ್ ಆಲ್ರೌಂಡರ್ ಮತ್ತು 5ನೇ ಬೌಲರ್ ಸ್ಥಾನಕ್ಕೆ ವೇಗಿ ಶಾರ್ದೂಲ್ ಠಾಕೂರ್ ಪ್ರಧಾನ ಆಕಾಂಕ್ಷಿಯಾಗಿದ್ದಾರೆ. 7ನೇ ಕ್ರಮಾಂಕದಲ್ಲಿ ಆಡಿ ಬ್ಯಾಟಿಂಗ್ ಬಲಪಡಿಸುತ್ತಿದ್ದ ಜಡೇಜಾ ಗೈರಿನಲ್ಲಿ ಭಾರತ ತಂಡ ಹೆಚ್ಚುವರಿ ಬ್ಯಾಟರ್ ಆಡಿಸಲು ಮುಂದಾದರೆ ಅನುಭವಿ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ಅವರಲ್ಲಿ ಒಬ್ಬರನ್ನು ಆರಿಸಬೇಕಾಗುತ್ತದೆ.

    ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಕೂಡ ನಡೆಸಬಲ್ಲ ಸಾಮರ್ಥ್ಯದಿಂದಾಗಿ ಉತ್ತಮ ಆಯ್ಕೆಯಾಗಬಲ್ಲರು. ಆರ್. ಅಶ್ವಿನ್ ಕೂಡ ತಂಡದಲ್ಲಿರುವುದರಿಂದ ಶಾರ್ದೂಲ್ ಬ್ಯಾಟಿಂಗ್ ವಿಭಾಗವನ್ನೂ ಬಲಪಡಿಸಬಲ್ಲರು ಎಂದು ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

    ಸದ್ಯದ ಪ್ರಕಾರ ತಂಡದ ಮೊದಲ ಆಯ್ಕೆಯ ನಾಲ್ವರು ಬೌಲರ್‌ಗಳಾಗಿ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ಆರ್. ಅಶ್ವಿನ್ ಮತ್ತು ಮೊಹಮದ್ ಸಿರಾಜ್ ಗುರುತಿಸಲ್ಪಟ್ಟಿದ್ದಾರೆ. ಹಾಲಿ ಫಾರ್ಮ್‌ನಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಗಿಂತ ಸಿರಾಜ್ ಅವರೇ ಆಯ್ಕೆಯಾಗುವುದು ನಿಶ್ಚಿತವೆನಿಸಿದೆ.

    ಇನ್ನು ಬ್ಯಾಟಿಂಗ್ ವಿಭಾಗದಲ್ಲೂ ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಪದಾರ್ಪಣೆ ಮಾಡಿದ ಬಳಿಕ 5ನೇ ಕ್ರಮಾಂಕಕ್ಕೆ ನೆಚ್ಚಿನ ಆಯ್ಕೆ ಎನಿಸಿದ್ದಾರೆ. ಆದರೆ ಭಾರತ ಎ ತಂಡದ ಪರ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಚತುರ್ದಿನ ಟೆಸ್ಟ್ ಸರಣಿಯಲ್ಲಿ 3 ಅರ್ಧಶತಕ ಸಿಡಿಸಿದ್ದ ಹನುಮ ವಿಹಾರಿ ಕೂಡ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಉಪನಾಯಕ ಅಜಿಂಕ್ಯ ರಹಾನೆ, ಸಾಮರ್ಥ್ಯ ನಿರೂಪಿಸಲು ಕೊನೆಯ ಅವಕಾಶವೊಂದರ ನಿರೀಕ್ಷೆಯಲ್ಲಿದ್ದಾರೆ.

    ಸಂಭಾವ್ಯ ತಂಡ: 10 ಬಹುತೇಕ ಖಚಿತ ಆಯ್ಕೆ: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಆರ್. ಅಶ್ವಿನ್, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್.
    11ನೇ ಸ್ಥಾನಕ್ಕೆ: ಶಾರ್ದೂಲ್ ಠಾಕೂರ್ (ಬೌಲಿಂಗ್ ಆಲ್ರೌಂಡರ್)-ಹನುಮ ವಿಹಾರಿ/ಅಜಿಂಕ್ಯ ರಹಾನೆ (ಹೆಚ್ಚುವರಿ ಬ್ಯಾಟರ್).

    ಕೊಹ್ಲಿ ಬ್ಯಾಟಿಂಗ್‌ನತ್ತ ಕೋಚ್ ದ್ರಾವಿಡ್ ವಿಶೇಷ ಗಮನ, ನೀಗುತ್ತಾ ಶತಕಗಳ ಬರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts