More

    ಶಿಕ್ಷಕರಿಗೆ ಮಕ್ಕಳನ್ನು ಎಬ್ಬಿಸುವ ಕೆಲಸ!

    ಹಾವೇರಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರು ನಸುಕಿನ ಜಾವದಲ್ಲಿ ಮಕ್ಕಳನ್ನು ಎಬ್ಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ಹೌದು! ಜಿಲ್ಲೆಯ ಪ್ರೌಢಶಾಲೆಯ ಶಿಕ್ಷಕರು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಲು ವಿದ್ಯಾರ್ಥಿಗಳನ್ನು ನಸುಕಿನಲ್ಲಿಯೇ ಎಬ್ಬಿಸಿ ಅಭ್ಯಾಸಕ್ಕೆ ಹಚ್ಚಲು, ವಿದ್ಯಾರ್ಥಿಗಳ ಪಾಲಕರಿಗೆ ನಸುಕಿನಲ್ಲಿ ಕರೆ ಮಾಡುವ ವಿಭಿನ್ನ ಪ್ರಯತ್ನ ಆರಂಭಿಸಿದ್ದಾರೆ.

    ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಎಷ್ಟೇ ಪ್ರಯತ್ನಿಸಿದರೂ ನಿರೀಕ್ಷಿತ ಸುಧಾರಣೆ ಕಂಡು ಬರದೇ ಇರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ಈ ಸಲ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂಬ ಚಿಂತನೆ ನಡೆಸಿ ಈ ವಿಧಾನಕ್ಕೆ ಕೈಹಾಕಿದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಬೆಳಗ್ಗೆ ಎದ್ದು ಓದುವಂತೆ ಮಾಡಲು ಮಕ್ಕಳ ಪಾಲಕರಿಗೆ ನಿತ್ಯ ನಸುಕಿನಲ್ಲೇ ಶಿಕ್ಷಕರು ಕರೆ ಮಾಡಿ ಎಬ್ಬಿಸುತ್ತಿದ್ದಾರೆ.

    ಇಷ್ಟಲ್ಲದೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ ಪೂರ್ವದಲ್ಲಿ ಬೆಳಗ್ಗೆ ಹಾಗೂ ಸಂಜೆ ವಿಶೇಷ ತರಗತಿ, ಸಂಪನ್ಮೂಲ ಶಿಕ್ಷಕರಿಂದ ಪಾಠ ಮಾಡಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಮನೆಗೆ ಹೋಗಿ ಅಭ್ಯಾಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಹಾಗೂ ಪಾಲಕರಿಗೆ ಮಕ್ಕಳ ಬಗೆಗೆ ಕಾಳಜಿ ವಹಿಸುವ ತಿಳಿವಳಿಕೆ ನೀಡುತ್ತಿದ್ದಾರೆ.

    ವಿದ್ಯಾರ್ಥಿಗಳ ಕಲಿಕಾಮಟ್ಟದ ಆಧಾರದಲ್ಲಿ ಉತ್ತಮ, ಸಾಧಾರಣ ಮತ್ತು ಕಲಿಕೆಯಲ್ಲಿ ಹಿಂದುಳಿದ ಎಂಬ ಗುಂಪು ಮಾಡಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಈ ಬಾರಿ ಮಾರ್ಚ್ 27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆಗೆ ಕೇವಲ 2 ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಅವಧಿಯಲ್ಲಿ ಸರಣಿ ಪರೀಕ್ಷೆ, ಪೂರ್ವಭಾವಿ ಪರೀಕ್ಷೆ ನಡೆಸುವುದರ ಜತೆಗೆ ಪ್ರತಿ ವಿದ್ಯಾರ್ಥಿಯ ಓದಿನ ಬಗ್ಗೆಯೂ ಶಿಕ್ಷಕರು ಕಾಳಜಿ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲ ಶಾಲೆಗಳಲ್ಲಿ ಸ್ವಯಂ ಪ್ರೇರಿತರಾಗಿ ಶಿಕ್ಷಕರೇ ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

    3 ವರ್ಷಗಳಿಂದ ಕುಸಿದಿರುವ ಫಲಿತಾಂಶ: ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸರಾಸರಿ ಎಂಬ ರೀತಿಯಲ್ಲಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶವು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ರಾಜ್ಯಮಟ್ಟದಲ್ಲಿ ಜಿಲ್ಲೆಗೆ 15ರೊಳಗಿನ ಸ್ಥಾನ ಲಭಿಸುತ್ತಿತ್ತು. ಆದರೆ, 2017ರಲ್ಲಿ 26ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. 2018ರಲ್ಲಿ 23ನೇ ಸ್ಥಾನಕ್ಕೆ, 2019ರಲ್ಲಿ 19ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಕಳೆದ ಮೂರು ವರ್ಷಗಳ ಫಲಿತಾಂಶ ನೋಡಿದರೆ ತೃಪ್ತಿದಾಯಕವಾಗಿಲ್ಲದಿರುವುದು ಎಲ್ಲರ ಅನಿಸಿಕೆಯಾಗಿತ್ತು. ಶಿಕ್ಷಕರ ಕೊರತೆ ಸಮಸ್ಯೆಯೂ ಈಗ ಹಿಂದಿನಂತಿಲ್ಲ. ಆದರೂ ಫಲಿತಾಂಶದಲ್ಲಿ ಸುಧಾರಣೆ ಆಗದಿರುವುದು ಅಸಮಾಧಾನ ಮೂಡಿಸಿತ್ತು. ಹೀಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಪ್ರಯತ್ನ ನಡೆಸಿದ್ದಾರೆ.

    ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕಳೆದ ಎರಡು ತಿಂಗಳಿಂದ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಪಾಲಕರ ಸಭೆ, ತಾಯಂದಿರ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ರ್ಚಚಿಸಲಾಗಿದೆ. ಮಕ್ಕಳ ಮನೆಗೆ ರಾತ್ರಿ ವೇಳೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಭಾನುವಾರವೂ ಸೇರಿ ರಜಾದಿನಗಳಂದು ತರಗತಿ ನಡೆಸಲಾಗಿದೆ.

    ‘ಮನೆಯಲ್ಲಿ ಟಿವಿ ಹಚ್ಚುವುದಿಲ್ಲ’ ಪ್ರತಿಜ್ಞೆ: ಮಕ್ಕಳು ಓದಬೇಕೆಂದರೆ ಪಾಲಕರ ಸಹಕಾರ ಬೇಕು. ಅದಕ್ಕಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಕರ ಸಭೆ ನಡೆಸಿದ ಶಿಕ್ಷಕರು ಯಾವ ರೀತಿಯಲ್ಲಿ ಮಕ್ಕಳ ಓದಿಗೆ ಸಹಕರಿಸಬೇಕು ಎಂದು ಅರಿವು ಮೂಡಿಸುತ್ತಿದ್ದಾರೆ. ಮಕ್ಕಳ ಏಕಾಗ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಪಾಲಕರಿಂದ ಮನೆಯಲ್ಲಿ ಟಿವಿ ಹಚ್ಚುವುದಿಲ್ಲ ಎಂಬ ಪ್ರತಿಜ್ಞೆ ಮಾಡಿಸುತ್ತಿದ್ದಾರೆ. ಮಕ್ಕಳನ್ನು ಬೆಳಗ್ಗೆ ಓದಿಸಲು ಪಾಲಕರ ಮೊಬೈಲ್​ಗೆ ಶಿಕ್ಷಕರು ನಿತ್ಯ ನಸುಕಿನ ಜಾವ 4.30ರಿಂದ 5 ಗಂಟೆ ಅವಧಿಯಲ್ಲಿ ಕರೆ ಮಾಡುತ್ತಿದ್ದಾರೆ. ಒಂದು ತಾಸು ಬಿಟ್ಟು ಮತ್ತೆ ಶಿಕ್ಷಕರು ಕರೆ ಮಾಡಿ ವಿದ್ಯಾರ್ಥಿ ಎದ್ದು ಓದುತ್ತಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಕಳೆದ 15 ದಿನಗಳಿಂದ ಶಿಕ್ಷಕರು ಪಾಲಕರು ಸೇರಿ ವಿದ್ಯಾರ್ಥಿಗಳ ಓದಿಗೆ ಶ್ರಮಿಸುತ್ತಿದ್ದಾರೆ.

    ಶೈಕ್ಷಣಿಕ ಗುಣಮಟ್ಟ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಈ ಸಾರಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿದ್ದು, ಪ್ರತಿ ವಿದ್ಯಾರ್ಥಿಯನ್ನೂ ಗಮನದಲ್ಲಿಟ್ಟುಕೊಂಡು ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ, ತಾಯಂದಿರ ಸಭೆ ಮಾಡಲಾಗಿದೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ತರಗತಿ ನಡೆಸಲಾಗುತ್ತಿದೆ. ಕೆಲಶಿಕ್ಷಕರು ನಸುಕಿನಲ್ಲಿ ಪಾಲಕರಿಗೆ ಕರೆ ಮಾಡಿ ಮಕ್ಕಳನ್ನು ಎಬ್ಬಿಸಿ ಅಭ್ಯಾಸಕ್ಕೆ ಹಚ್ಚುವ ವಿಶೇಷ ಪ್ರಯತ್ನವನ್ನು ನಡೆಸಿದ್ದಾರೆ. ನಾನು ಶಾಲೆ, ಮನೆಮನೆ ಭೇಟಿ ನಡೆಸಿದ್ದೇನೆ.

    | ಅಂದಾನಪ್ಪ ವಡಗೇರಿ, ಡಿಡಿಪಿಐ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts