More

    ಶಿಕ್ಷಕರ ಆಯ್ಕೆಪಟ್ಟಿ ರದ್ದು: 1:1ರ ತಾತ್ಕಾಲಿಕ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್

    ಬೆಂಗಳೂರು: ರಾಜ್ಯದ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದ್ದ 1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಜತೆಗೆ, ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪರಿಗಣಿಸಿ ಹೊಸದಾಗಿ ಪಟ್ಟಿ ಸಿದ್ಧಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

    ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಪತಿಯ ಆದಾಯ ಹಾಗೂ ಜಾತಿ ಪ್ರಮಾಣಪತ್ರ ಪರಿಗಣಿಸಿದ್ದ ಶಿಕ್ಷಣ ಇಲಾಖೆಯ ಕ್ರಮ ಪ್ರಶ್ನಿಸಿ ಅಕ್ಷತಾ ಚೌಗಲ ಸೇರಿ ನೂರಾರು ಮಹಿಳಾ ಅಭ್ಯರ್ಥಿಗಳು ಸಲ್ಲಿಸಿದ್ದ 80 ತಕರಾರು ಅರ್ಜಿಗಳನ್ನು ಸೋಮವಾರ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಅರ್ಜಿದಾರರ ವಾದವೇನು?: ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅರ್ಜಿದಾರರಿಗಿಂತ ಕಡಿಮೆ ಅಂಕ ಪಡೆದವರ ಹೆಸರುಗಳಿವೆ. ಈ ಬಗ್ಗೆ ಡಿಡಿಪಿಐಗಳನ್ನು ವಿಚಾರಿಸಿದಾಗ ವಿವಾಹಿತ ಮಹಿಳಾ ಅಭ್ಯರ್ಥಿಗಳು ಪತಿಯ ಆದಾಯ/ಜಾತಿ ಪ್ರಮಾಣಪತ್ರದ ಬದಲಾಗಿ ತಂದೆಯ ಆದಾಯ/ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿರುವುದರಿಂದ ಅರ್ಜಿದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದೇ ಕಾರಣಕ್ಕೆ ಅರ್ಜಿದಾರರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಲಾಗಿದೆ. ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ, ಸಾಮಾನ್ಯ ಆಭ್ಯರ್ಥಿಗಳ ವರ್ಗಕ್ಕೆ ಸೇರ್ಪಡೆ ಮಾಡಿರುವ ಕ್ರಮ ಸರಿಯಿಲ್ಲ. ಜತೆಗೆ, ಪತಿಯ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಕೋರುವುದು ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ, ಪತಿಯ ಆದಾಯ ಹಾಗೂ ಜಾತಿ ಪ್ರಮಾಣಪತ್ರ ಪರಿಗಣಿಸಿ 1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ವಾದಿಸಿದ್ದರು.

    ಪ್ರಕರಣವೇನು?: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅರ್ಜಿದಾರ ಅಭ್ಯರ್ಥಿಗಳು ಉತ್ತಮ ಅಂಕ ಗಳಿಸಿದ್ದರು. ಅಲ್ಲದೆ, 1:2 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅರ್ಹರಾಗಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, 2022ರ ನ.18ರಂದು ಪ್ರಕಟಿಸಿದ್ದ 1:1 ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಇವರ ಹೆಸರಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ: ಹೈಕೋರ್ಟ್ ಆದೇಶದ ಹಿನ್ನೆಲೆ ಕಾನೂನು ಸಲಹೆ ಪಡೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನೇಮಕಾತಿಯಲ್ಲಿ 1986ರಿಂದಲೂ ಇಲಾಖೆ ಅನುಸರಿಸುತ್ತಿರುವ ನಿಯಮಗಳನ್ವಯವೇ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಆದ್ದರಿಂದ ಹೈಕೋರ್ಟ್ ನೀಡಿರುವ ತೀರ್ಪಿನ ಆದೇಶ ಪ್ರತಿಯನ್ನು ಸಂಪೂರ್ಣವಾಗಿ ತಿಳಿದು ಮುಂದಿನ ನಡೆಯನ್ನು ತೀರ್ವನಿಸಲಾಗುತ್ತದೆ. ತೀರ್ಪು ಕುರಿತು ಮೇಲ್ಮನವಿ ಅರ್ಜಿ ಸಲ್ಲಿಸಬೇಕೇ ಅಥವಾ ಬೇರೇನು ಮಾಡಬೇಕೆಂಬ ಬಗ್ಗೆ ಕಾನೂನು ಸಲಹೆ ಪಡೆಯಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್ ಪ್ರತಿಕ್ರಿಯಿಸಿದ್ದಾರೆ.

    ಅತಿಥಿ ಉಪನ್ಯಾಸಕರ ನೇಮಕಕ್ಕೆ ವೇಳಾಪಟ್ಟಿ: ಸರ್ಕಾರಿ ಪದವಿ ಕಾಲೇಜುಗಳಿಗೆ 2021-22ನೇ ಸಾಲಿನಲ್ಲಿ ನೇಮಿಸಿಕೊಂಡಿದ್ದ ಎಲ್ಲ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿ 2022-23ನೇ ಸಾಲಿಗೆ ಹೊಸದಾಗಿ ನೇಮಕ ಮಾಡಿಕೊಳ್ಳಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಬಿಡುಗಡೆ ಮಾಡಿದ್ದು, ಕೌನ್ಸೆಲಿಂಗ್ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಫೆ.3ರಂದು ಅಂತಿಮ ಮೆರಿಟ್ ಪಟ್ಟಿ ಮತ್ತು ಕಾರ್ಯಭಾರದ ಮಾಹಿತಿ ನೀಡಲಿದೆ. ಫೆ.4ರಿಂದ 8ರ ವರೆಗೆ ಅಂತಿಮ ಮೆರಿಟ್ ಪಟ್ಟಿ ಅನ್ವಯ ವಿಷಯವಾರು ಆನ್​ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿ ಫೆ.9ರಂದು ಆಯ್ಕೆಪಟ್ಟಿ ಪ್ರಕಟಿಸಲಿದೆ.

    ವರ್ಗಾವಣೆ ಅರ್ಜಿಗೆ ಅವಧಿ ವಿಸ್ತರಣೆ

    ಬೆಂಗಳೂರು: 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಶಿಕ್ಷಣ ಇಲಾಖೆ ವಿಸ್ತರಿಸಿದೆ. ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಇದನ್ನು ಮಾ.4ರ ವರೆಗೆ ವಿಸ್ತರಣೆ ಮಾಡಿದೆ. ಹೆಚ್ಚುವರಿ ಪ್ರಕ್ರಿಯೆ ಹಾಗೂ ಕೋರಿಕೆ/ಪರಸ್ಪರ ವರ್ಗಾವಣೆ ಕುರಿತು ವಿಸõತವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಉಳಿದಂತೆ ಡಿ.26 ರಂದು ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

    ಹೆಚ್ಚುವರಿ ಶಿಕ್ಷಕರಿಗೆ ಅವಕಾಶ: ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಮಾಡಲು ಅಗತ್ಯ ಪೂರ್ವಭಾವಿ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರು ತಮ್ಮ ಮಾಹಿತಿಯನ್ನು ಶಿಕ್ಷಕಮಿತ್ರ ತಂತ್ರಾಂಶದಲ್ಲಿ ಫೆ.4ರ ವರೆಗೆ ಅಪ್​ಲೋಡ್ ಮಾಡಬಹುದು. ಶಿಕ್ಷಕರ ಆದ್ಯತೆ ಅಥವಾ ವಿನಾಯಿತಿಗೆ ನಿಗದಿಪಡಿಸಿರುವ ದಾಖಲೆಗಳನ್ನು ವರ್ಗಾವಣಾ ತಂತ್ರಾಂಶದಲ್ಲಿ ಅಪ್​ಲೋಡ್ ಮಾಡಲು ಅಥವಾ ಸರಿಪಡಿಸಲು ಫೆ.8 ಕೊನೆಯ ದಿನ. ವೈದ್ಯಕೀಯ ಪ್ರಮಾಣಪತ್ರಗಳ ನೈಜತೆ ಮರು ಪರಿಶೀಲನೆ ಸೇರಿ ಶಿಕ್ಷಕರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ದೃಢೀಕರಿಸಿ ಅನುಮೋದಿಸಲು ಫೆ.10 ಕೊನೆಯ ದಿನವಾಗಿದೆ.

    ವರ್ಗಾವಣೆಗೆ ಹಲವು ಅಡ್ಡಿ?: ಮಾ.9ರಿಂದ 5 ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಆರಂಭವಾಗಲಿದೆ. ಅಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವ ಸಮಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆಗಳು ನಡೆಯುವುದು ಅನುಮಾನ ಎಂದು ಇಲಾಖೆ ಮೂಲಗಳು ಹೇಳುತ್ತವೆ.

    ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?

    ಸಾವಿರಾರು ಕೋಟಿ ರೂ. ವಂಚಿಸಿದ ಮಲ್ಯ-ಮೋದಿಯನ್ನೇ ಏನೂ ಮಾಡಿಲ್ಲ; 3-4 ಕೋಟಿ ಮೋಸ ಮಾಡಿದ ನನ್ನ ಚಿಂತೆ ನಿಮಗ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts