More

    ಸಾವಿರಾರು ಕೋಟಿ ರೂ. ವಂಚಿಸಿದ ಮಲ್ಯ-ಮೋದಿಯನ್ನೇ ಏನೂ ಮಾಡಿಲ್ಲ; 3-4 ಕೋಟಿ ಮೋಸ ಮಾಡಿದ ನನ್ನ ಚಿಂತೆ ನಿಮಗ್ಯಾಕೆ?

    ಬೆಂಗಳೂರು: ‘ವಿಜಯ್ ಮಲ್ಯ, ನೀರವ್ ಮೋದಿ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದು, ಅವರನ್ನೇ ಏನೂ ಮಾಡದೆ ಬಿಡಲಾಗಿದೆ. ಇನ್ನು ನಾನು ಕೇವಲ ಮೂರು-ನಾಲ್ಕು ಕೋಟಿಯಷ್ಟೇ ವಂಚನೆ ಮಾಡಿದ್ದೇನೆ. ನೀವು ಏಕೆ ತಲೆಕೆಡಿಸಿಕೊಳ್ಳುತ್ತೀರಾ? ಎಂದು ಆರೋಪಿಯೊಬ್ಬ ಪೊಲೀಸರನ್ನೆ ಪ್ರಶ್ನೆ ಮಾಡಿರುವ ವಿಚಿತ್ರ ಪ್ರಕರಣ ನಡೆದಿದೆ.

    ನಗರದ ವಿವಿಧೆಡೆ ನಿವೇಶನ ಖರೀದಿ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ಸಲ್ಲಿಸಿ ಕೋಟ್ಯಂತರ ರೂ. ಸಾಲ ಪಡೆದು ವಂಚಿಸುತ್ತಿದ್ದ ವಂಚಕ ಲೋಕೇಶ್‌ನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾಗ ಈ ರೀತಿ ಹೇಳಿದ್ದಾನೆ.

    ತಿಪಟೂರು ಮೂಲದ ಲೋಕೇಶ್ (43) ಬಂಧಿತ. ಆರೋಪಿಯು 2018ರಲ್ಲಿ ನಿವೇಶನ ಖರೀದಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆದು ಬಳಿಕ ಅವುಗಳನ್ನೇ ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐ ಬ್ಯಾಂಕ್‌ಗೆ ಸಲ್ಲಿಸಿ ಆ ನಿವೇಶನದ ಮೇಲೆ 83 ಲಕ್ಷ ರೂ. ಸಾಲ ಪಡೆದು ವಂಚಿಸಿದ್ದ.

    ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯ ಸಹಚರರಾದ ಆಯುಬ್ ಹಾಗೂ ನಾಗರಾಜ್ ಎಂಬುವವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಅಂದಿನಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್ ಲೋಕೇಶ್ ಐದು ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಹಿಂದೆ ನಿವೇಶನ ಖರೀದಿಸುವ ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸಿದ ಆರೋಪದಡಿ ವಂಚಕ ಲೋಕೇಶ್ ಹಾಗೂ ಆತನ ಸಹಚರರ ವಿರುದ್ಧ ನಗರದ ಶಂಕರಪುರ, ವಿದ್ಯಾರಣ್ಯಪುರ, ಜಿಗಣಿ, ಕೆ.ಜಿ.ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಿಗಣಿ ಠಾಣೆ ಪೊಲೀಸರು ಈ ಹಿಂದೆ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಬಂದ ಬಳಿಕವೂ ಆರೋಪಿಗಳು ನಿವೇಶನ ಖರೀದಿ ನೆಪದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸುವ ಕೃತ್ಯ ಮುಂದುವರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿವೇಶನ ಖರೀದಿಸುವ ನೆಪದಲ್ಲಿ ಸಂಚು: ಆರೋಪಿ ಲೋಕೇಶ್ ಪತ್ರಿಕೆಗಳಲ್ಲಿ ಬರುವ ನಿವೇಶನ ಮಾರಾಟದ ಜಾಹೀರಾತು ಹಾಗೂ ನಿವೇಶನಗಳಲ್ಲಿ ಅಂಟಿಸುವ ಮಾಹಿತಿ ಫಲಕಗಳಲ್ಲಿ ಸಂಪರ್ಕ ಸಂಖ್ಯೆ ಪಡೆದು ಬಳಿಕ ನಿವೇಶನ ಖರೀದಿಸುವ ನೆಪದಲ್ಲಿ ಮಾಲೀಕರಿಗೆ ಕರೆ ಮಾಡುತ್ತಿದ್ದ. ಬಳಿಕ ಅವರನ್ನು ಭೇಟಿಯಾಗಿ ನಿವೇಶನ ಖರೀದಿಸುವುದಾಗಿ ವ್ಯವಹಾರ ಕುದುರಿಸುತ್ತಿದ್ದ. ಬಳಿಕ 20 ಸಾವಿರ ರೂ. ಮುಂಗಡ ಹಣ ಕೊಟ್ಟು ನಿವೇಶನದ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆಯುತ್ತಿದ್ದ. ಬಳಿಕ ಈ ದಾಖಲೆಗಳನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ, ತನ್ನ ಸಹಚರರನ್ನೇ ನಿವೇಶನ ಮಾರಾಟಗಾರರು ಹಾಗೂ ಖರೀದಿದಾರರನ್ನಾಗಿ ಮಾಡಿ ನಕಲಿ ದಾಖಲೆಗಳೊಂದಿಗೆ ಬ್ಯಾಂಕ್‌ ಸಾಲಕ್ಕೆ ಅರ್ಜಿ ಹಾಕಿಸುತ್ತಿದ್ದ. ಬಳಿಕ ಖರೀದಿದಾರನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸುತ್ತಿದ್ದ. ಬ್ಯಾಂಕ್‌ನವರು ಸಹ ಅಸಲಿ ದಾಖಲೆ ಎಂದು ನಂಬಿ ಸಾಲ ಮಂಜೂರು ಮಾಡುತ್ತಿದ್ದರು. ಬಳಿಕ ಆರೋಪಿಗಳು ಹಣವನ್ನು ಹಂಚಿಕೊಂಡು ಪರಾರಿಯಾಗುತ್ತಿದ್ದರು.

    ಮೂರು ಕಂತು ಕಟ್ಟಿ ಪರಾರಿ: ಬ್ಯಾಂಕ್‌ನಿಂದ ಲಕ್ಷಾಂತರ ರೂ. ಸಾಲ ಪಡೆದು ಬಳಿಕ ಆರಂಭದ ಮೂರು ತಿಂಗಳು ಸಾಲದ ಕಂತು ಪಾವತಿಸುತ್ತಿದ್ದ. ಬಳಿಕ ಸಾಲದ ಕಂತು ಪಾವತಿಸದೆ ಪರಾರಿಯಾಗುತ್ತಿದ್ದ. ಬ್ಯಾಂಕ್‌ನವರು ನಿವೇಶನದ ಅಸಲಿ ಮಾಲೀಕರಿಗೆ ನೋಟಿಸ್ ನೀಡುತ್ತಿದ್ದರು. ಸಾಲ ವಸೂಲಾತಿಗೆ ಪ್ರತಿನಿಧಿಗಳನ್ನು ಮನೆಯ ಬಳಿ ಕಳುಹಿಸುತ್ತಿದ್ದರು. ಈ ವೇಳೆ ನಿವೇಶನದ ಮಾಲೀಕರು ಆಘಾತಕ್ಕೆ ಒಳಗಾಗುತ್ತಿದ್ದರು. ಆರೋಪಿಗಳು ನಗರದ ಹಲವೆಡೆ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ.

    ನಾನೇನು ನಿಮಗೆ ವಂಚನೆ ಮಾಡಿದ್ದೀನಾ?

    ‘ವಿಜಯ್ ಮಲ್ಯ, ನೀರವ್ ಮೋದಿ ಸಾವಿರಾರು ಕೋಟಿ ರೂ. ವಂಚಿಸಿ ಪರಾರಿಯಾಗಿದ್ದಾರೆ. ಅವರನ್ನೇ ಏನೂ ಮಾಡದೆ ಬಿಡಲಾಗಿದೆ. ನಾನು ಕೇವಲ ಮೂರು-ನಾಲ್ಕು ಕೋಟಿ ರೂ. ವಂಚನೆ ಮಾಡಿದ್ದೇನೆ. ಇದನ್ನು ಯಾಕೆ ಕೇಳುತ್ತೀರಾ? ನಾನೇನು ನಿಮಗೆ ವಂಚನೆ ಮಾಡಿಲ್ಲ. ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದೇನೆ. ಇದಕ್ಕೆ ನೀವು ಏಕೆ ತಲೆಕೆಡಿಸಿಕೊಳ್ಳುತ್ತೀರಾ? ಎಂದು ವಿಚಾರಣೆ ವೇಳೆ ಆರೋಪಿ ಲೋಕೇಶ್​ ಪೊಲೀಸರನ್ನೇ ಪ್ರಶ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

     

    ಈತನ ಪತ್ತೆಗೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ!

    ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!

    14 ವರ್ಷದ ಹುಡುಗಿಗೆ ಹೃದಯಾಘಾತ; ಸಾವಿಗೂ ಕಾರಣವಾಗಬಹುದು ಡಿಯೊಡರೆಂಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts