More

    ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!

    ಪಾಟ್ನಾ: ಇಲ್ಲೊಂದು ಮಹಿಳೆಯದ್ದು ಅಂತಿಂಥ ಸಂಕಷ್ಟವಲ್ಲ. ಚಿಕಿತ್ಸೆಗೆಂದು ದಾಖಲಾದರೆ ಎರಡು ಕಿಡ್ನಿಯನ್ನು ಕದ್ದರು, ಬದುಕಲೆಂದು ಇನ್ನೊಂದು ಆಸ್ಪತ್ರೆಯಲ್ಲಿದ್ದರೆ, ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ ಎಂದು ಪತಿ ಬಿಟ್ಟು ಹೋದ. ಈಗ 2 ಕಿಡ್ನಿ ಕಳೆದುಕೊಂಡು, ಮೂರು ಮಕ್ಕಳ ಜೊತೆ ಭವಿಷ್ಯದ ಚಿಂತೆಯೊಂದಿಗೆ ಜೀವನ್ಮರಣ ಹೋರಾಟದಲ್ಲಿರುವ ಈಕೆಯ ಹೆಸರು ಸುನೀತಾ.

    ಗರ್ಭಕೋಶದ ಸೋಂಕಿನಿಂದ ಬಳಲುತ್ತಿದ್ದ ಸುನೀತಾ, ಬಿಹಾರದ ಮುಜಾಫರ್​ಪುರದ ಬರಿಯಾಪುರ್ ಚೌಕ್​ನಲ್ಲಿನ ಶುಭ್​ಕಾಂತ್ ಕ್ಲಿನಿಕ್​ನಲ್ಲಿ ಸೆ. 3ರಂದು ದಾಖಲಾಗಿದ್ದಳು. ಆದರೆ ಅಲ್ಲಿ ಕಿಡ್ನಿ ಕಳ್ಳರು ವೈದ್ಯರ ಸೋಂಕಿನಲ್ಲಿ ಈಕೆಯ ಎರಡೂ ಕಿಡ್ನಿಯನ್ನು ಕದ್ದಿದ್ದರು. ನಂತರ ಆಕೆ ಗಂಭೀರವಾಗಿ ಅಸ್ವಸ್ಥಗೊಂಡಾಗ ಕ್ಲಿನಿಕ್​ನ ವೈದ್ಯ ಪವನ್​ ಆಕೆಯನ್ನು ಪಾಟ್ನಾದ ನರ್ಸಿಂಗ್​ ಹೋಮ್​ಗೆ ದಾಖಲಿಸಿ ಪರಾರಿಯಾಗಿದ್ದ.

    ಆ ಬಳಿಕ ಕೆಲದಿನಗಳ ಮಟ್ಟಿಗೆ ಪತ್ನಿಯನ್ನು ನೋಡಿಕೊಂಡ ಅಕ್ಲು ರಾಮ್ ಆಕೆಗೆ ಕಿಡ್ನಿ ಕೊಡಲು ಸಿದ್ಧನಿದ್ದ. ಆದರೆ ಆಕೆಗೆ ಅದು ಹೊಂದಾಣಿಕೆ ಆಗದ್ದರಿಂದ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ದಂಪತಿ ನಡುವೆ ಜಗಳವಾಗಿದ್ದು, ಆ ಸಿಟ್ಟಿನಲ್ಲಿ ನೀನಿನ್ನು ಇದ್ದರೂ ಅಷ್ಟೇ, ಸತ್ತರೂ ಅಷ್ಟೇ ಎಂದು ಕಠೋರವಾಗಿ ಹೇಳಿದ್ದ ಪತಿ, ಮೂರು ಮಕ್ಕಳ ಜೊತೆಗೆ ಹೆಂಡತಿಯನ್ನೂ ಬಿಟ್ಟು ಹೋಗಿದ್ದಾನೆ.

    ನಾನು ಆರೋಗ್ಯವಾಗಿದ್ದಾಗ ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತ ಮನೆ ನಿಭಾಯಿಸುತ್ತಿದ್ದೆ. ಆದರೆ ಈಗ ಆರೋಗ್ಯ ಕೈಕೊಟ್ಟಿದೆ, ನಿನ್ನೊಂದಿಗೆ ನನಗೆ ಇರಲು ಆಗುವುದಿಲ್ಲ ಎಂದು ಹೇಳಿ ಪತಿಯೂ ಬಿಟ್ಟು ಹೋಗಿದ್ದಾರೆ, ಕೆಲಸ ಮಾಡಲೂ ಆಗುತ್ತಿಲ್ಲ ಎಂದು ಸುನೀತಾ ಅಲವತ್ತುಕೊಳ್ಳುತ್ತಿದ್ದಾಳೆ. ಪತಿ ಬೇರೆ ಮದುವೆ ಆಗುತ್ತಾನೋ ಎಂಬ ಚಿಂತೆಯಲ್ಲಿರುವ ಸುನೀತಾ, ಸದ್ಯ ತಾಯಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದಾಳೆ.

    ಸುನೀತಾ ಎಸ್​ಕೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡು ದಿನಕ್ಕೊಮ್ಮೆ ಡಯಾಲಿಸಿಸ್​ಗೆ ಒಳಗಾಗಬೇಕಿದೆ. ಆಕೆಗೆ ಕಿಡ್ನಿ ಕೊಡಲು ಹಲವರು ಮುಂದೆ ಬಂದಿದ್ದರೂ ಅದು ಹೊಂದಾಣಿಕೆ ಆಗಿರಲಿಲ್ಲ. ಪ್ರಸ್ತುತ ಆಸ್ಪತ್ರೆಯವರು ಆಕೆಗೆ ಸಾಧ್ಯವಾದಷ್ಟೂ ಚಿಕಿತ್ಸೆ ನೀಡಿ ಬದುಕುಳಿಸುವ ಪ್ರಯತ್ನದಲ್ಲಿದ್ದಾರೆ.

    ‘ಎರಡೂ ಕಿಡ್ನಿ ಕಳವಾಗಿದೆ, ಪತಿಯೂ ಬಿಟ್ಟು ಹೋಗಿದ್ದಾರೆ, ಮೂರು ಮಕ್ಕಳು ಜೊತೆಗಿದ್ದು, ಆಸ್ಪತ್ರೆಯಲ್ಲಿದ್ದೇನೆ. ನಾನು ನನ್ನ ಸಾವಿನ ದಿನಗಳನ್ನು ಎಣಿಸುತ್ತಿದ್ದೇನೆ. ಇನ್ನು ಎಷ್ಟು ದಿನಗಳು ಉಳಿದಿದೆಯೋ ಗೊತ್ತಿಲ್ಲ, ಆದರೆ ಇದರಲ್ಲಿ ನನ್ನ ತಪ್ಪೇನು? ನನ್ನ ನಂತರ ಈ ಮಕ್ಕಳ ಕಥೆಯೇನು? ಅವರು ಹೇಗೆ ಬದುಕುತ್ತಾರೆ?’ ಎಂದೆಲ್ಲ ಸುನೀತಾ ಕೊರಗುತ್ತಿದ್ದಾಳೆ. ಅತ್ತ ಪೊಲೀಸರು ಪವನ್​ನನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಶೋಧದಲ್ಲಿದ್ದಾರೆ.

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts