More

    ವಿದ್ಯಾಭ್ಯಾಸಕ್ಕೆ ತೊಂದರೆ ಆಗದಿರಲಿ

    ಚಿಕ್ಕಮಗಳೂರು: 4 ವರ್ಷಗಳಿಂದ ವರ್ಗಾವಣೆಗೊಂಡ ಶಿಕ್ಷಕರ ಹೆಸರನ್ನು ಪಟ್ಟಿ ಮಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಶಿಕ್ಷಕರ ವ್ಯವಸ್ಥೆ ಮಾಡಬೇಕೆಂದು ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಬುಧವಾರ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸಾಕಷ್ಟು ಶಿಕ್ಷಕರು ಮಲೆನಾಡು ಭಾಗದಿಂದ ಬಯಲು ಸೀಮೆ ಭಾಗಕ್ಕೆ ವರ್ಗಾವಣೆಯಾಗಿರುವುದರಿಂದ ಮಲೆನಾಡು ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದೆ ಎಂದರು.

    ಈ ಬಾರಿ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ರ್ಯಾಂಕ್ ಹಂಚಿಕೊಂಡಿರುವುದು ಜಿಲ್ಲೆಗೆ ಹೆಮ್ಮೆ ಸಂಗತಿಯಾದರೂ ಶೇಕಡವಾರು ಫಲಿತಾಂಶದಲ್ಲಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಿತಾಂಶ ಬರುವ ನಿಟ್ಟಿನಲ್ಲಿ ಶ್ರಮವಹಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಒತ್ತಾಯ ಪೂರ್ವಕವಾಗಿ ಶುಲ್ಕ ವಸೂಲಾತಿ ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

    ಕರೊನಾ ಚಿಕಿತ್ಸೆ ನಿರ್ವಹಣೆಯಲ್ಲಿ ಶ್ರೀಮಂತರಿಗೆ ಉತ್ತಮ ಚಿಕಿತ್ಸೆ ನೀಡಿ ಬಡವರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆಕ್ಷೇಪಣೆಗಳು ಕೇಳಿ ಬಂದಿದೆ. ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದ ಅವರು, ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

    ಜಿಲ್ಲೆಯ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, ಲ್ಯಾಪ್​ಟಾಪ್, ವಿವಿಧ ಉಪಕರಣಗಳನ್ನು ವಿತರಿಸುವ ಬಗ್ಗೆ ಸದಸ್ಯರಿಂದ ಮಾಹಿತಿ ಪಡೆದು ಕಳೆದ ಬಾರಿ ಬಾಕಿ ಉಳಿದಿರುವ ಹಾಗೂ ಈ ಬಾರಿ ವಿತರಿಸುವುದರ ಪಟ್ಟಿ ಸಿದ್ಧಗೊಳಿಸಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಮುಂದಿನ ಫೆಬ್ರವರಿ ಒಳಗೆ ಪೂರ್ಣಗೊಳಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

    ಕೆ.ಆರ್.ಪ್ರಭಾಕರ್ ಮಾತನಾಡಿ, ಅರಣ್ಯ ಇಲಾಖೆಯಿಂದ ರೈತರಿಗೆ ವಿತರಿಸಿರುವ ಸಸಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಅಂತಹವರ ಖಾತೆಗೆ ಸಸಿ ನಿರ್ವಹಣೆ ಹಣ ವರ್ಗಾವಣೆ ಮಾಡದಂತೆ ತಿಳಿಸಿದರು.

    ಶಕುಂತಲಾ ಮಲ್ಲಪ್ಪ, ಕಾವೇರಿ ಲಕ್ಕಪ್ಪ, ಲಕ್ಕಮ್ಮ ಸಿದ್ದಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಉಮೇಶ್, ಮುಖ್ಯ ಯೋಜನಾಧಿಕಾರಿ ಕರೇಗೌಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts