More

    ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರ ಶ್ರಮ ಅಪಾರ

    ಹನೂರು: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಉತ್ತಮೀಕರಿಸುವಲ್ಲಿ ಶಿಕ್ಷಕರ ಶ್ರಮ ಅಪಾರ ಎಂದು ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ್ದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ನಿರ್ಮಾತೃಕರು. ಆಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

    ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಮಾನವ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಬೇಕಿದೆ ಎಂದು ತಿಳಿಸಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಪಿ.ಜವರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಹ ಶಿಕ್ಷಕರನ್ನು ಪ್ರೌಢಶಾಲೆಗೆ ಬಡ್ತಿ ನೀಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ವೇತನ ತಾರತಮ್ಯದ ಬಗ್ಗೆ ವ್ಯಾಪಕ ಆಕ್ಷೇಪಗಳು ಕೇಳಿ ಬಂದಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಗತ್ಯ ಕ್ರಮಹಿಸಲಾಗುವುದು ಎಂದರು.

    ಶಿಕ್ಷಕರಿಗೆ ಕೆಸಿಎಸ್‌ಆರ್ ಬಗ್ಗೆ ಸಂಪೂರ್ಣವಾಗಿ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಾಗಾರ ಅತ್ಯಂತ ಮಹತ್ವ ಪೂರ್ಣವಾಗಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಕ್ಷೇಮಾಭಿವೃದ್ಧಿ ಸಮಿತಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವಂತಹ ಕೆಲಸ ಮಾಡುತ್ತಿದೆ. ಉತ್ತಮ ಕೆಲಸ ಕಾರ್ಯಗಳಿಗೆ ಶಿಕ್ಷಣ ಇಲಾಖೆ ಸದಾ ಸಮಿತಿಗೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

    ಇದೇ ವೇಳೆ ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ (ಅಭಿವೃದ್ಧಿ) ಉಪ ನಿರ್ದೇಶಕಿ ಭಾರತಿ, ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ, ಪರಿಶಿಷ್ಟ ಜಾತಿ ಶಿಕ್ಷಕ ಕ್ಷೇಮಾಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ, ಡಯಟ್‌ನ ಹಿರಿಯ ಉಪನ್ಯಾಸಕ ಲಿಂಗರಾಜೇ ಅರಸು, ಡಿವೈಪಿಸಿ ಪಿ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಬಿಆರ್‌ಸಿ ಕ್ಯಾತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾನ್‌ಬ್ರಿಟ್ಟೋ, ಕಾರ್ಯದರ್ಶಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts