More

    ಏನಿದು ಪಕಡವಾ ವಿವಾಹ?: ಗನ್​ ಪಾಯಿಂಟ್​ನಲ್ಲಿ ಶಿಕ್ಷಕನಿಗೆ ಬಲವಂತದ ಮದುವೆ

    ಪಟನಾ: ಉತ್ತರ ಭಾರತದ ರಾಜ್ಯಗಳಲ್ಲಿ ಬಲವಂತದ ಮದುವೆ, ಅಪಹರಣ ಪ್ರಕರಣಗಳು ನಡೆಯುವುದು ಆಗಾಗ್ಗೆ ಕೇಳಿಬರುತ್ತವೆ. ಅಪಹರಿಸಿ ಬಲವಂತವಾಗಿ ಮದುವೆ ಮಾಡುವುದನ್ನು ಬಿಹಾರದಲ್ಲಿ “ಪಕಡವಾ ವಿವಾಹ” ಎಂದೇ ಜನಜನಿತವಾಗಿದೆ. ಈಗ ಇಂತಹುದೇ ಮತ್ತೊಂದು ಘಟನೆ ವರದಿಯಾಗಿದೆ.

    ಗೌತಮ್ ಕುಮಾರ್ ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಕರಾಗಿದ್ದರು. ಬುಧವಾರ ಮೂರ್ನಾಲ್ಕು ಮಂದಿ ಆತನ ಶಾಲೆಗೆ ಆಗಮಿಸಿ ಬಲವಂತವಾಗಿ ಕರೆದೊಯ್ದಿದ್ದಾರೆ. ಅಪರಹರಿಸಿದ 24 ಗಂಟೆಗಳಲ್ಲಿಯೇ ಬಂದೂಕು ತೋರಿಸಿ ಅಪಹರಣಕಾರರೊಬ್ಬರ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ.

    ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಈ ಅಪಹರಣ ನಡೆದಿದೆ. ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕ ಕುಮಾರ್ ಅಪಹರಣಕ್ಕೆ ಒಳಗಾದವರು.
    ಕಾಣೆಯಾದ ಶಿಕ್ಷಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಇದಕ್ಕೂ ಮೊದಲು ಕುಮಾರ್ ಅವರ ಕುಟುಂಬವು ಬುಧವಾರ ರಾತ್ರಿ ರಸ್ತೆ ತಡೆ ಪ್ರತಿಭಟನೆ ಕೂಡ ನಡೆಸಿದೆ.

    ಕುಮಾರ್ ಅವರ ಕುಟುಂಬವು ರಾಜೇಶ್ ರೈ ಎಂಬ ವ್ಯಕ್ತಿಯ ಮೇಲೆ ಅಪಹರಣದ ಆರೋಪ ಹೊರಿಸಿದೆ. ರೈ ಅವರ ಕುಟುಂಬವು ಕುಮಾರ್ ಅವರನ್ನು ಬಲವಂತವಾಗಿ ಕರೆದೊಯ್ದು ರೈ ಅವರ ಮಗಳು ಚಾಂದಿನಿ ಜತೆ ವಿವಾಹ ಮಾಡಿಸಿದ್ದಾರೆ ಎಂದು ಆಪಾದಿಸಿದೆ.

    ಮದುವೆಯ ಪ್ರಸ್ತಾಪ ನಿರಾಕರಿಸಿದ ಕುಮಾರ್ ಅವರು ದೈಹಿಕ ಹಿಂಸೆಗೆ ಒಳಗಾಗಿದ್ದರು. ನವಡಾ ಸೇನಾಧಿಕಾರಿ ಮತ್ತು ಲಖಿಸರಾಯ್ ಮಹಿಳೆಯ ನಡುವಿನ ಹತ್ತು ವರ್ಷಗಳ ಬಲವಂತದ ಮದುವೆಯನ್ನು ರದ್ದುಗೊಳಿಸಿ ಇತ್ತೀಚೆಗೆ ಪಟನಾ ಹೈಕೋರ್ಟ್ ನೀಡಿದ ತೀರ್ಪನ್ನು ಕೂಡ ಕುಮಾರ್ ಈ ಸಂದರ್ಭದಲ್ಲಿ ಒತ್ತಿಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಅಪಹರಣಕಾರರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಹಾರದಲ್ಲಿ ಸರ್ವೇಸಾಮಾನ್ಯ:

    ಬಿಹಾರದಲ್ಲಿ ‘ಪಕಡ್ವಾ ವಿವಾಹ’ ಸಾಮಾನ್ಯವಾಗಿದೆ. ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾದ ಪ್ರಾಣಿಯನ್ನು ಪರೀಕ್ಷಿಸಲು ಕರೆದ ಪಶುವೈದ್ಯರನ್ನು ಮೂರು ಜನರು ಅಪಹರಿಸಿ ಬೇಗುಸರಾಯ್‌ನಲ್ಲಿ ಬಲವಂತವಾಗಿ ಮದುವೆ ಮಾಡಿದ್ದರು. ಬಿಹಾರದಲ್ಲಿ ಇಂಜಿನಿಯರ್‌ಗೆ ಸಂಬಂಧಿಸಿದ ಇಂತಹುದೇ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ನಂತರ ಬೊಕಾರೊ ಸ್ಟೀಲ್ ಪ್ಲಾಂಟ್‌ನಲ್ಲಿ ಜೂನಿಯರ್ ಮ್ಯಾನೇಜರ್ ಆಗಿದ್ದ 29 ವರ್ಷದ ವಿನೋದ್ ಕುಮಾರ್ ಎಂಬಾತನನ್ನು ಥಳಿಸಿ, ಪಾಟ್ನಾದ ಪಂಡರಕ್ ಪ್ರದೇಶದಲ್ಲಿ ಮಹಿಳೆ ಜತೆ ಬಲವಂತವಾಗಿ ವಿವಾಹ ಮಾಡಲಾಗಿತ್ತು.

    ಭಾರತದ ಜನಸಂಖ್ಯೆ ಜಾಸ್ತಿ ಇದ್ದರೂ ಮಾಲಿನ್ಯ ಕಡಿಮೆ; ಪ್ರಧಾನಿ ಮೋದಿ ಪ್ರತಿಪಾದನೆ

    ಬಟ್ಟೆ ಮೂಸಿದ ಲಿಯೋ… ಕೆಲ ಕ್ಷಣಗಳಲ್ಲಿಯೇ ಅಪಹೃತ ಬಾಲಕ ಪತ್ತೆ

    ರಷ್ಯಾದ ಮಹಿಳೆಯರು ಕನಿಷ್ಠ 8 ಮಕ್ಕಳನ್ನು ಹೊಂದಬೇಕು… ಹೀಗೆಂದು ಕರೆ ನೀಡಿದ್ದು ಯಾರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts