More

    ಈ ಸರ್ಕಾರಿ ಶಾಲಾ ಶಿಕ್ಷಕನಿಗೆ ಯಾಕಪ್ಪಾ ಬಂತು ಈ ಬುದ್ಧಿ…?!

    ಶಿವಮೊಗ್ಗ: ಸಾಮಾನ್ಯವಾಗಿ ಶಾಲಾ ಶಿಕ್ಷಕರೆಂದರೆ ಅವರು ಉಳಿದವರಿಗೆ ಅನುಕರಣೀಯ ಜೀವನ ನಡೆಸುತ್ತಿರುತ್ತಾರೆ. ಅವರ ನಡೆ ನುಡಿಯನ್ನು ನೋಡಿಯೇ ಶಾಲಾ ಮಕ್ಕಳು ಮತ್ತು ಸುತ್ತಮುತ್ತಲಿನ ಜನರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳುತ್ತಿರುತ್ತಾರೆ. ಆದರೆ ಅಂತಹ ಶಾಲಾ ಶಿಕ್ಷಕರೇ ಅಡ್ಡ ದಾರಿ ಹಿಡಿದುಬಿಟ್ಟರೆ ಹೇಗೆ?

    ಅಂಥದೊಂದು ಪ್ರಕರಣ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ. ರಿಪ್ಪನ್‌ಪೇಟೆ ನಗರ, ಹೊಸನಗರ ಹಾಗೂ ಸುತ್ತಲಿನ 5 ದೇವಸ್ಥಾನಗಳ ಬೀಗ ಒಡೆದು ಕಳ್ಳತನ ಮಾಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರ ಜತೆ ಮತ್ತೊಬ್ಬ ಸಹಚರ ಕೂಡ ಪೊಲೀಸರ ಅತಿಥಿಯಾಗಿದ್ದಾನೆ.

    ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಠಾಣೆ ಹಾಗೂ ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ 18 ದೇವಸ್ಥಾನಗಳಲ್ಲಿ ಈತ ಕಳ್ಳತನ ಮಾಡಿದ್ದಾನೆ. ಬಂಧಿತರಿಬ್ಬರ ಬಳಿ ಇದ್ದ ಕಾರು, ಬೈಕ್, ಸುಮಾರು ಎರಡೂವರೆ ಲಕ್ಷ ರೂ. ನಗದು, ಚಿನ್ನ, ಬೆಳ್ಳಿಯ ಆಭರಣ, ಹಿತ್ತಾಳೆಯ 140 ಗಂಟೆಗಳು, 27 ದೀಪದ ಕಂಬಗಳು, 22 ತೂಗು ದೀಪಗಳು, 7 ತಾಮ್ರದ ಕೊಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನವೆಂಬರ್ 18ರಂದು ಯಲ್ಲಾಪುರ ಸಮೀಪದ ಮಂಚಿಕೇರಿಯ ಮಹಾಗಜಲಕ್ಷ್ಮೀ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ನಗದು ಕಳ್ಳತನ ಮಾಡಿದ ಪ್ರಕರಣ ನಡೆದಿತ್ತು. ಅದೇ ದಿನ ಗುಳ್ಳಾಪುರ ಗ್ರಾಮದ ಶಿವವ್ಯಾಘ್ರೇಶ್ವರ ದೇವಸ್ಥಾನದ ಬಾಗಿಲ ಬೀಗ ಒಡೆದು ಕಳ್ಳತನ ಮಾಡಲಾಗಿತ್ತು. ಅವುಗಳ ವಿಚಾರಣೆ ನಡೆಸಿದ್ದ ಪೊಲೀಸರ ಕೈಗೆ ಈ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ವಿಷಯವನ್ನು ಪೊಲೀಸರು ಖಚಿತಪಡಿಸಿದ್ದಾರೆ.

    ಇದರ ಬೆನ್ನಲ್ಲೇ ಆರೋಪಿ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹಿರೆಕೆರೂರು ತಾಲ್ಲೂಕಿನ ವಸಂತಕುಮಾರ್ ಎಂಬ ಈ ಶಿಕ್ಷಕ 2007ರಲ್ಲಿ ವೃತ್ತಿಗೆ ಸೇರಿದ್ದರು. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಮಾರ್ಚ್‌ನಲ್ಲಷ್ಟೇ ಘಾಳಪೂಜಿ ಶಾಲೆಗೆ ವರ್ಗಾವಣೆಯಾಗಿದ್ದರು. ಕಳೆದ ಎರಡೂವರೆ ತಿಂಗಳಿಂದ ಶಾಲೆಗೆ ಅನಧಿಕೃತವಾಗಿ ಗೈರಾಗಿದ್ದರು. ಈ ಕುರಿತು ವರದಿ ಬಂದ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts