More

    ಟಿಸಿ ದುರಸ್ತಿ ಘಟಕ ನಿರ್ಮಿಸಿ – ಆನಂದ ಮಾಮನಿ

    ಯರಗಟ್ಟಿ: ಹೊಸ ತಾಲೂಕಾಗಿ ರಚನೆಯಾಗಿರುವ ಹಿನ್ನೆಲೆಯಲ್ಲಿ ಯರಗಟ್ಟಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವಿಭಾಗೀಯ ಕಚೇರಿ ಆರಂಭಿಸಬೇಕು. ವಿದ್ಯುತ್ ಪರಿವರ್ತಕ(ಟಿಸಿ) ದುರಸ್ತಿ ಘಟಕ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳಿಗೆ ಸೂಚಿಸಿದರು.

    ಸಮೀಪದ ಇಟ್ನಾಳ ಗ್ರಾಮದಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪ್ರಸರಣ ನಿಗಮದ 110/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಯರಗಟ್ಟಿಯ ವಿದ್ಯುತ್ ಕೇಂದ್ರದ ಸಾಮರ್ಥ್ಯವನ್ನು 110 ಕೆ.ವಿ.ಯಿಂದ 220 ಕೆ.ವಿ.ಗೆ ಹೆಚ್ಚಿಸಬೇಕು. ಮುನವಳ್ಳಿಯಲ್ಲಿ ನೇಕಾರರಿಗೆ ವಿದ್ಯುತ್ ಕೊರತೆಯಾಗುತ್ತಿದೆ. ಅಲ್ಲಿನ ಕೇಂದ್ರದ ಸಾಮರ್ಥ್ಯವನ್ನೂ ಹೆಚ್ಚಿಸಬೇಕು. ಮುಂಬರುವ ತಿಂಗಳಲ್ಲಿ ಮುಗಳಿಹಾಳದಲ್ಲಿ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು.

    ನಗರ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲೂ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕೃಷಿ ಮತ್ತು ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಒದಗಿಸುವುದರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರಿಗೆ ಉದ್ಯೋಗವಕಾಶ ಲಭಿಸುತ್ತದೆ. ನೀರಾವರಿ ಸೌಲಭ್ಯಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಭಾಗೋಜಿಕೊಪ್ಪ ಹಿರೇಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಶಾಸಕ ಆನಂದ ಮಾಮನಿ ರೈತ ಸಮುದಾಯದ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ.

    ನೀರಾವರಿ, ವಿದ್ಯುತ್, ರಸ್ತೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾಮಗಾರಿ ಕೈಗೊಂಡು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು. ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ಕೆಪಿಟಿಸಿಎಲ್ ಹಿರಿಯ ಅಧಿಕಾರಿ ಭೀಮಣ್ಣ ಹೆಬ್ಬಾಳ, ಗಿರಿಧರ ಕುಲಕರ್ಣಿ, ಶ್ರೀಕಾಂತ ಸಸಾಲಟ್ಟಿ, ಸಿ.ಎಸ್.ಮಠಪತಿ, ರಾಜೇಂದ್ರ ದೇಸಾಯಿ, ಬಸನಗೌಡ ಪಾಟೀಲ, ಈರಣ್ಣ ಚಂದರಗಿ, ಪರ್ವತಗೌಡ ಪಾಟೀಲ, ವಿಠ್ಠಲ ಬಂಟನೂರ, ಚಂದ್ರಶೇಖರ ಅಳಗೋಡಿ, ಶಂಕರ ಇಟ್ನಾಳ, ಗುರು ವಾಲಿ, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.

    ಯರಗಟ್ಟಿಯಲ್ಲಿ ಶೀಘ್ರ ಅದ್ದೂರಿಯಾಗಿ ತಾಲೂಕು ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಕನ್ನಡ ಮನಸ್ಸುಗಳು ಒಗ್ಗಟ್ಟಿನಿಂದ ಭಾಗಿಯಾಗಿ ಸಮ್ಮೇಳನ ಯಶಸ್ವಿಗೊಳಿಸಬೇಕು.
    | ಆನಂದ ಮಾಮನಿ ವಿಧಾನಸಭೆ ಉಪಸಭಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts