More

    ನೀರಾವರಿ ಹೋರಾಟದಲ್ಲಿ ಮಾಧುಸ್ವಾಮಿ ಶ್ರಮವೇ ಇಲ್ಲ ; ಸಚಿವ ಜೆ.ಸಿ.ಮಾಧುಸ್ವಾಮಿ ನಡೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೆಂಡಾಮಂಡಲ

    ತುಮಕೂರು : ಶಿರಾ ತಾಲೂಕು ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನಡೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೆಂಡಾಮಂಡಲರಾದರು.

    ಮಾಧುಸ್ವಾಮಿ ಉದ್ದೇಶ ಪೂರ್ವಕವಾಗಿಯೇ ಶಿರಾಗೆ ನೀರು ಬಿಡಲು ತಕರಾರು ಮಾಡುತ್ತಿದ್ದಾರೆ, ಹೇಮಾವತಿ ನೀರು ಮದಲೂರು ಕೆರೆಗೆ ಹಂಚಿಕೆಯಾಗಿದ್ದರೂ ಜನರನ್ನು ದಿಕ್ಕು ತಪ್ಪಿಸುವ ಮಾತುಗಳನ್ನಾಡಿ ಬಡಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಹಾಸನ ಜಿಲ್ಲೆಯವರು ತಮಗೆ ಹಂಚಿಕೆಯಾದ ನೀರನ್ನು ಪ್ರತಿವರ್ಷ ತೆಗೆದುಕೊಂಡಿದ್ದಾರೆ. ನಮ್ಮ ಜಿಲ್ಲೆಯ ಪಾಲಿನ ಎಲ್ಲ ನೀರನ್ನು ಪಡೆಯುವ ಮೂಲಕ ಅವರ ತಾಕತ್ತು ತೋರಿಸಲಿ ಎಂದು ಸವಾಲೆಸೆದರು.

    ಮದಲೂರು ಕೆರೆಗೆ ನೀರು ಹಂಚಿಕೆಯಾಗಿರುವ ಬಗ್ಗೆ ಹೈಕೋರ್ಟ್ ಆದೇಶವಿದೆ, ಜತೆಗೆ ಎರಡು ಸಲ ನೀರು ಬಿಟ್ಟಿದ್ದೇವೆ. ನೈಸರ್ಗಿಕವಾಗಿ ಹರಿಯುವ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ, ಅದು ಭಿಕ್ಷೆಯಲ್ಲ ನಮ್ಮ ಹಕ್ಕು. ಶಿರಾಗೆ ಹಂಚಿಕೆಯಾಗಿರುವ ನೀರು ಹರಿಸಲು ಅಡ್ಡಿಪಡಿಸಿದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದರು.

    ಶಿರಾ, ಚಿಕ್ಕನಾಯಕನಹಳ್ಳಿಗೆ ಹೇಮಾವತಿ ನೀರು ತರುವ ಬಗ್ಗೆ ನಾನು ಹುಳಿಯಾರಿನಲ್ಲಿ ಸಭೆ ಮಾಡಿದಾಗ ಅಂದು ನನ್ನ ವಿರುದ್ಧ ಮಾತನಾಡಿದ್ದ ಇದೇ ಮಾಧುಸ್ವಾಮಿ ಚೊಂಬಿನಲ್ಲಿ ನೀರು ತರುಬಹುದು ಎಂದು ವ್ಯಂಗ್ಯವಾಡಿದ್ದರು. 2009ರಲ್ಲಿ ಕೋರ್ಟ್‌ನಲ್ಲಿ ನಾನು ಹೋರಾಡಿದ್ದು 2017ರಲ್ಲಿ ನಾನು ಅಧಿಕಾರದಲ್ಲಿದ್ದಾಗಲೇ ನೀರು ಹರಿಸಿದ್ದೇನೆ, ಈಗ ಹರಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.

    ನೀರಾವರಿ ಹೋರಾಟದಲ್ಲಿ ಮಾಧುಸ್ವಾಮಿ ಶ್ರಮವೇ ಇಲ್ಲ, ಶಿರಾದ ಪುಣ್ಯಾತ್ಮರಿಗೂ ಈ ಬಗ್ಗೆ ಜ್ಞಾನವಿಲ್ಲ, ಕೆ.ಸಿ.ರೆಡ್ಡಿ ವರದಿಯಲ್ಲಿ ಚಿಕ್ಕನಾಯಕನಹಳ್ಳಿಗೆ, ಶಿರಾಗೆ ನೀರು ಹಂಚಿಕೆಯಾಗಿರಲಿಲ್ಲ. ನಾನೇ ಮಾಡಿಸಿದ್ದು, ಆವತ್ತು ಯಾವ ಪುಣ್ಯಾತ್ಮರೂ, ಮಹಾನುಭಾವರೂ ಇರಲಿಲ್ಲ ಎಂದು ಗುಡುಗಿದರು. ಮುಖಂಡರಾದ ನಿವೃತ್ತ ಅಧಿಕಾರಿ ಈಶ್ವರಯ್ಯ, ಎಲ್.ಹನುಮಂತಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

    ಮಾಧುಸ್ವಾಮಿ ಹೇಳೋದು ಶುದ್ಧ ಸುಳ್ಳು : ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗಿಲ್ಲ ಎಂದು ಹೇಳುವುದು ಶುದ್ಧ ಸುಳ್ಳು. ಒಂದು ಜಲಾನಯನ ಪ್ರದೇಶದಿಂದ ಇನ್ನೊಂದು ಜಲಾನಯನ ಪ್ರದೇಶಕ್ಕೆ ನೀರು ಹರಿಸಬಾರದೆಂದರೆ ನರ್ಮದಾ, ಮಹಾದಾಯಿ ಯೋಜನೆಗಳು ತಪ್ಪಾ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ
    ಪ್ರಶ್ನಿಸಿದರು. 0.4 ಟಿಎಂಸಿ ಮದಲೂರು ಕೆರೆಗೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ದ್ವೇಷದ ರಾಜಕಾರಣ ಮಾಡುವುದಾದರೆ, ಜಯಚಂದ್ರ ಅವರಿಗೆ ಚಿತ್ರಹಿಂಸೆ ಕೊಡುವುದಾದರೆ ಬೇರೆ ರೀತಿ ಕೊಡಿ. ನೀರಿನ ವಿಚಾರದಲ್ಲಿ ಜನರಿಗೆ ತೊಂದರೆ ನೀಡಬಾರದು ಎಂದರು.

    ನೀರಿನ ವಿಚಾರದಲ್ಲಿ ಮಾಧುಸ್ವಾಮಿ ರಾಜಕೀಯ ಮಾಡಬಾರದು, ನಾನು ಅವರಿಗಿಂತಲೂ ಮೊದಲೇ ಕಾನೂನು ಓದಿದ್ದೇನೆ, ಕಾನೂನು ಮಂತ್ರಿಯೂ ಆಗಿದ್ದವನು, ಈಗಿನ ಸಚಿವರಿಗೆ ನಾನು ಪಾಠ ಮಾಡಬೇಕಿಲ್ಲ, ಅವರು ಬುದ್ಧಿವಂತರೆಂದು ಕೇಳಿದ್ದೇನೆ. ಅವರೀಗ ಮದಲೂರು ಕೆರೆಗೆ ನೀರು ಹರಿಸಲು ಬೇರೆ ಜಲಾನಯನ ಪ್ರದೇಶ ಎಂದು ಹೇಳುತ್ತಾರೆ, ಚಿಕ್ಕನಾಯಕನಹಳ್ಳಿಗೂ ಅದು ಅನ್ವಯಿಸುವುದಿಲ್ಲವೇ?.
    ಟಿ.ಬಿ.ಜಯಚಂದ್ರ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts